'ದೆಹಲಿ ರೀತಿ ಪರಿಹಾರ ಘೋಷಿಸಿ ಲಾಕ್ಡೌನ್ ಪ್ರಕಟಿಸಿ'
ಕರ್ನಾಟಕದಲ್ಲೂ ಲಾಕ್‌ಡೌನ್ ಮಾಡಿ, ದುಡಿವ ವರ್ಗಕ್ಕೆ ಪಡಿತರ ಹಾಗೂ ತಿಂಗಳಿಗೆ 6 ಸಾವಿರ ನೀಡಿ ಎಂದು ಆಗ್ರಹಿಸಲಾಗಿದೆ. ಇದರಿಂದ ಮಹಾಮಾರಿ ಅಟ್ಟಹಾಸ ಕಡಿಮೆ ಮಾಡಬಹುದೆಂದು ಹೇಳಿದ್ದಾರೆ.
ಗದಗ (ಮೇ.05): ದೆಹಲಿ ಮಾದರಿಯಲ್ಲಿ ಕರ್ನಾಟಕದಲ್ಲೂ ಲಾಕ್‌ಡೌನ್ ಮಾಡಿ, ದುಡಿವ ವರ್ಗಕ್ಕೆ ಪಡಿತರ ಹಾಗೂ ತಿಂಗಳಿಗೆ 6 ಸಾವಿರ ನೀಡಿ ಎಂದು ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಸಣ್ಣ ಸರ್ಕಾರವಾಗಿದ್ದು, ಅವರು 5 ಸಾವಿರ ನೀಡಿದ್ದಾರೆ. ನೀವು 6 ಸಾವಿರ ನೀಡಿ, ಜನರ ಹಸಿವಿಗೆ ಸ್ಪಂದಿಸಿ. ಇಲ್ಲವಾದಲ್ಲಿ ಜನರ ಆಕ್ರೋಶಕ್ಕೆ ನೀವು ತುತ್ತಾಗುತ್ತೀರಿ. ಒಂದೆಡೆ ಆಕ್ಸಿಜನ್ ಇಲ್ಲ, ಸೂಕ್ತವಾದ ಬೆಡ್‌ಗಳು ಸಿಗುತ್ತಿಲ್ಲ. ನೀವು ಜನತಾ ಕರ್ಫ್ಯೂ ಮಾಡಿ ಕುಳಿತರೆ ಸಾಲದು. ಏಳು ಕೆ.ಜಿ ಪಡಿತರ ಅಕ್ಕಿಯನ್ನು ಐದು ಕೆ.ಜಿಗೆ ಇಳಿಸಿದ್ದೀರಿ. ಈಗ ಅದನ್ನು ಎರಡು ಕೆಜಿಗೆ ತಂದು ನಿಲ್ಲಿಸಿದ್ದೀರಿ. ಒಂದೆಡೆ ದುಡಿಮೆ ಇಲ್ಲ. ಇನ್ನೊಂದೆಡೆ ಪಡಿತರ ಅಕ್ಕಿಯೂ ಇಲ್ಲ. ಜನ ಏನು ಮಾಡಬೇಕು? ಆಸ್ಪತ್ರೆಯಲ್ಲಿ ಮಾತ್ರವಲ್ಲದೇ ಮನೆಯಲ್ಲಿಯೂ ಹಸಿವಿನಿಂದ ಒದ್ದಾಡಿ ಸಾಯಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಗುರು ಬೆಚ್ಚನ್ ನೀರ್ ಕುಡೀರಿ, ಹೆದ್ರಬ್ಯಾಡ್ರಿ: ಸೋಂಕಿತರಿಗೆ ಧೈರ್ಯ ತುಂಬಿದ HK ಪಾಟೀಲ್ ..
ಸರ್ಕಾರದ ಬೇಜವಾಬ್ದಾರಿಯಿಂದ ಸಾವು: ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಜನರ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆಕ್ಸಿಜನ್ ವಿಷಯವನ್ನು ಹಗುರವಾಗಿ ತೆಗೆದುಕೊಂಡಿರುವ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಜನರು ಸಾವನ್ನಪ್ಪುತ್ತಿದ್ದಾರೆ ಎಂದರು.