Asianet Suvarna News Asianet Suvarna News

HIV ಸೋಂಕಿತರಿಗೂ ಕಾಡುತ್ತಿದೆ ಕೊರೋನಾ ಭೀತಿ..!

ಬಿಮ್ಸ್‌ನಲ್ಲೇ ಕೊರೋನಾ ಐಸೋಲೇಷನ್‌ ವಾರ್ಡ್‌ ಸ್ಥಾಪನೆ ಮಾಡಿದ್ದೇ ಆತಂಕಕ್ಕೆ ಕಾರಣ| ಬಿಮ್ಸ್‌ ಆಸ್ಪತ್ರೆಯ ಕಟ್ಟಡದಲ್ಲಿರುವ ಎಆರ್‌ಟಿ ಕೇಂದ್ರ| ಎಚ್‌ಐವಿ ರೋಗಿಗಳ ಸುರಕ್ಷತೆ ದೃಷ್ಟಿಯಿಂದ ಬಿಮ್ಸ್‌ ಆಸ್ಪತ್ರೆಯ ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡಲು ರೋಗಿಗಳ ಆಗ್ರಹ| 

HIV Patients Panic due to Coronavirus in BIMS Hospital in Belagavi
Author
Bengaluru, First Published Apr 18, 2020, 11:40 AM IST

ಶ್ರೀಶೈಲ ಮಠದ 

ಬೆಳಗಾವಿ(ಏ.18): ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಯ ಕಟ್ಟಡದಲ್ಲೇ ಕೊರೋನಾ ಸೋಂಕಿತರಿಗಾಗಿ ಐಸೋಲೇಷನ್‌ ವಾರ್ಡ್‌ ಸ್ಥಾಪನೆ ಮಾಡಿರುವುದರಿಂದ ಎಚ್‌ಐವಿ ಸೋಂಕಿತರಿಗೂ ಕೊರೋನಾ ಸೋಂಕಿನ ಭೀತಿ ಎದುರಾಗಿದೆ.

ಬಿಮ್ಸ್‌ ಆಸ್ಪತ್ರೆಯ ಕಟ್ಟಡದಲ್ಲಿ ಕೊರೋನಾ ಸೋಂಕಿತರಿಗೆ, ಶಂಕಿತರಿಗೆ ಐಸೋಲೇಷನ್‌ ಪ್ರತ್ಯೇಕವಾರ್ಡ್‌ ಸ್ಥಾಪಿಸಲಾಗಿದೆ. ಈಗಾಗಲೇ ಇಲ್ಲಿ ಹಲವರು ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿಯೂ ಕೊರೋನಾ ಶಂಕಿತ ರೋಗಿಗಳ ಓಡಾಟವೂ ಸಾಮಾನ್ಯವಾಗಿದೆ. ಈ ಐಸೋಲೇಷನ್‌ ವಾರ್ಡ್‌ನ ಕೆಳಮಹಡಿಯಲ್ಲೇ ಎಚ್‌ಐವಿ ರೋಗಿಗಳ ಅನುಕೂಲಕ್ಕಾಗಿ ಜೀವರಕ್ಷಕ ಆಂಟಿ ರೆಟ್ರೋವೈರಲ್‌ ಥೆರಫಿ (ಎಆರ್‌ಟಿ) ಸೇವಾ ಕೇಂದ್ರವಿದೆ. ಹಾಗಾಗಿ ಈ ಸೇವಾ ಕೇಂದ್ರಕ್ಕೆ ಔಷಧ, ಮಾತ್ರೆ ಪಡೆಯಲು ನೂರಾರು ಎಚ್‌ಐವಿ ಸೋಂಕಿತರು ಆಗಮಿಸುತ್ತಾರೆ. ಆದರೆ, ಎಆರ್‌ಟಿ ಕೇಂದ್ರಕ್ಕೆ ತೆರಳಬೇಕೆಂದರೆ ಎಚ್‌ಐವಿ ಸೋಂಕಿತರು ಬಿಮ್ಸ್‌ ಆಸ್ಪತ್ರೆ ಆವರಣದಲ್ಲೇ ಹಾದು ಹೋಗಬೇಕು. ಇದು ಅವರ ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ಕೊರೋನಾ ರುದ್ರ ನರ್ತನ, ಸೋಂಕು ಹೆಚ್ಚಾಗಲು ಕಾರಣವೇನು..?

ಎಆರ್‌ಟಿ ಕೇಂದ್ರಗಳಿಗೆ ತೆರಳುವವರಿಗೆ ಸ್ಕ್ರೀನಿಂಗ್‌ ಕೂಡ ಮಾಡುವುದಿಲ್ಲ. ಎಚ್‌ಐವಿ ಸೋಂಕಿತರಿಗೆ ರೋಗನಿರೋಧಕ ಶಕ್ತಿ ಉಳಿದವರಿಗಿಂತ ತೀರಾ ಬಹಳ ಕಡಿಮೆ ಇರುತ್ತದೆ. ಉಳಿದವರಿಗಿಂತ ಕೊರೋನಾ ಸೋಂಕು ತಗಲುವ ಅಪಾಯ ಎಚ್‌ಐವಿ ರೋಗಿಗಳಿಗೆ ಹೆಚ್ಚು. ಹಾಗಾಗಿ, ಎಲ್ಲಿ ಕೊರೋನಾ ಸೋಂಕು ನಮಗೆ ತಗಲುತ್ತದೆ ಎನ್ನುವ ಆತಂಕ ಎಆರ್‌ಟಿಗೆ ಭೇಟಿ ನೀಡುತ್ತಿರುವ ಎಚ್‌ಐವಿ ರೋಗಿಗಳಲ್ಲಿ ಮನೆ ಮಾಡಿದೆ.

ಜಿಲ್ಲೆಯಲ್ಲಿದ್ದಾರೆ 65 ಸಾವಿರ ಎಚ್‌ಐವಿ ರೋಗಿಗಳು:

ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 65 ಸಾವಿರ ಎಚ್‌ಐವಿ ರೋಗಿಗಳಿದ್ದಾರೆ. ಇವರೆಲ್ಲರಿಗೂ ಸರ್ಕಾರದಿಂದ ಉಚಿತವಾಗಿ ಔಷಧ, ಮಾತ್ರೆ ವಿತರಿಸಲಾಗುತ್ತದೆ. ಎಆರ್‌ಟಿ ಕೇಂದ್ರಗಳಿಂದಲೇ ಇವರು ಔಷಧ ಪಡೆಯುತ್ತಾರೆ. ಎಚ್‌ಐವಿ ರೋಗಿಗಳು ಯಾವುದೇ ಕಾರಣಕ್ಕೂ ಔಷಧ ತಪ್ಪಿಸುವಂತಿಲ್ಲ. ಅವರ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ಈ ಔಷಧಗಳ ಮೇಲೆ ಅವಲಂಬಿಸಿರುತ್ತದೆ. ಮೊದಲೇ ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವವರು ಇದೀಗ ಕೊರೋನಾ ಭೀತಿಯನ್ನೂ ಎದುರಿಸಬೇಕಿದೆ. ಎಚ್‌ಐವಿ ರೋಗಿಗಳ ಸುರಕ್ಷತೆ ದೃಷ್ಟಿಯಿಂದ ಬಿಮ್ಸ್‌ ಆಸ್ಪತ್ರೆಯ ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡಿ ಔಷಧ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ರೋಗಿಗಳಿಂದ ಈಗ ಕೇಳಿಬಂದಿದೆ.

ಮೊದಲೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತ ಸಾಗಿದೆ. ಇದರ ನಡುವೆ ನಿತ್ಯ ನೂರಾರು ಎಚ್‌ಐವಿ ರೋಗಿಗಳು ಔಷಧ, ಮಾತ್ರೆ ಪಡೆಯಲು ಆಗಮಿಸುತ್ತಿರುವುದರಿಂದ ಬಿಮ್ಸ್‌ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಸಿಬ್ಬಂದಿ ಕೂಡ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಎಆರ್‌ಟಿ ಕೇಂದ್ರದ ಸಿಬ್ಬಂದಿ ಹಾಗೂ ಎಚ್‌ಐವಿ ರೋಗಿಗಳ ಹಿತದೃಷ್ಟಿಯಿಂದ ಬಿಮ್ಸ್‌ ಆಸ್ಪತ್ರೆಯ ಕಟ್ಟಡ ಬದಲಾಗಿ ಎಆರ್‌ಟಿ ಕೇಂದ್ರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಎಚ್‌ಐವಿ ರೋಗಿಗಳು ಆಗ್ರಹಿಸಿದ್ದಾರೆ.

ಬಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಐಸೋಲೇಷನ್‌ ವಾರ್ಡ್‌ ಸ್ಥಾಪನೆ ಮಾಡಿರುವುದಾಗಿ ಇದೇ ಕಟ್ಟಡದಲ್ಲಿ ಎಆರ್‌ಟಿ ಕೇಂದ್ರದ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿರುವ ಎಚ್‌ಐವಿ ರೋಗಿಗಳು, ಎಆರ್‌ಟಿ ಕೇಂದ್ರದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಗೆ ಸ್ಪಂದಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ರೋಗಿಗಳದ್ದು.
 

Follow Us:
Download App:
  • android
  • ios