Asianet Suvarna News Asianet Suvarna News

ಹೈಟೆಕ್‌ ಶೌಚಾಲಯಗಳಿಗೆ ಬೀಗ; ಅಧಿಕಾರಿ, ಜನಪ್ರತಿನಿಧಿಗಳು ಪರದಾಟ!

ಹರಪನಹಳ್ಳಿ ಪಟ್ಟಣದ ತಾಪಂ ಆವರಣದಲ್ಲಿ ನಿರ್ಮಿಸಿರುವ ಹೈಟೆಕ್‌ ಶೌಚಾಲಯಗಳಿಗೆ ಬೀಗ ಜಡಿಯಲಾಗಿದ್ದು, ಶೌಚಾಲಯಗಳಿದ್ದರೂ ಬಳಕೆಗಿಲ್ಲದಾಗಿವೆ, ಇದರಿಂದ ಅಧಿಕಾರಿ, ಜನಪ್ರತಿನಿಧಿಗಳು ನಿತ್ಯ ಮೂತ್ರ ವಿಸರ್ಜನೆಗಾಗಿ ಪರದಾಡುವಂತಾಗಿದೆ. 2017-18ನೇ ಸಾಲಿನಲ್ಲಿ ತಾಪಂ ಅಭಿವೃದ್ಧಿ ಯೋಜನೆಯಡಿ  ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ ಆದರೆ ಇಲ್ಲಿಯವರೆಗೂ ಅವುಗಳನ್ನು ಬಳಕೆ ಮಾಡದಂತೆ ಬೀಗ ಜಡಿದು ಮುಚ್ಚಲಾಗಿದೆ!

hitech toilets closed in harapanahalli Talukupanchayat at bellary rav
Author
First Published Jan 12, 2023, 12:16 PM IST

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ (ಜ.12) : ಪಟ್ಟಣದ ತಾಪಂ ಆವರಣದಲ್ಲಿ ನಿರ್ಮಿಸಿರುವ ಹೈಟೆಕ್‌ ಶೌಚಾಲಯಗಳಿಗೆ ಬೀಗ ಜಡಿಯಲಾಗಿದ್ದು, ಶೌಚಾಲಯಗಳಿದ್ದರೂ ಬಳಕೆಗಿಲ್ಲದಾಗಿವೆ, ಇದರಿಂದ ಅಧಿಕಾರಿ, ಜನಪ್ರತಿನಿಧಿಗಳು ನಿತ್ಯ ಮೂತ್ರ ವಿಸರ್ಜನೆಗಾಗಿ ಪರದಾಡುವಂತಾಗಿದೆ.

ಪಟ್ಟಣದ ತಾಪಂ ಕಚೇರಿ ಆರಣದಲ್ಲಿ 2017-18ನೇ ಸಾಲಿನಲ್ಲಿ ತಾಪಂ ಅಭಿವೃದ್ಧಿ ಅನುದಾನದಡಿಯಲ್ಲಿ ಮಹಿಳಾ ಮತ್ತು ಪುರುಷರ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ, ಆದರೆ ಇಲ್ಲಿಯವರೆಗೂ ಅವುಗಳನ್ನು ಬಳಕೆ ಮಾಡದಂತೆ ಬೀಗ ಜಡಿದು ಮುಚ್ಚಲಾಗಿದೆ.

ಶಿವಮೊಗ್ಗದಲ್ಲಿ ಉದ್ಘಾಟನೆ ಕಾಣದ ಸಾರ್ವಜನಿಕ ಶೌಚಾಲಯಗಳು

ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ತಾಪಂಗೆ ಬರುತ್ತಾರೆ, ಬಂದವರು ತಮ್ಮ ಜಲಬಾಧೆ ತೀರಿಸಿಕೊಳ್ಳಲು ಪರದಾಡುತ್ತಾರೆ, ಕೆಲವರು ಶೌಚಾಲಯ ಕಟ್ಟಡ ಹಿಂಬದಿಯ ಜಾಗದಲ್ಲಿಯೇ ಹೋಗುತ್ತಾರೆ, ಆದರೆ ಮಹಿಳೆಯರ ಪಾಡು ಹೇಳ ತೀರದಂತಾಗಿದೆ.

ಒಟ್ಟು 37 ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡಿರುವ ತಾಪಂನಲ್ಲಿ ಪ್ರತಿದಿನ ಒಂದಲ್ಲೊಂದು ಸಭೆ, ತರಬೇತಿ ನಡೆಯುತ್ತಿರುತ್ತವೆ, ಇದಕ್ಕಾಗಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಪಿಡಿಒಗಳು ಆಗಮಿಸುತ್ತಾರೆ. ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರುಗಳು ಮಹಿಳೆಯರೆ ಹೆಚ್ಚಿರುವುದರಿಂದ ಅವರಿಗಾಗಿ ತಾಪಂನಲ್ಲಿ ಸರಿಯಾದ ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಆಸನಗಳು ಇಲ್ಲದಂತಾಗಿದೆ.

ಇನ್ನು ತಾಪಂ ಆವರಣದಲ್ಲಿರುವ ಪಾರ್ಕ್ ಅಂತೂ ಕಸದ ತಾಣವಾಗಿದ್ದು, ಅದರ ಗೇಟ್‌ ಸಹ ಬಂದ್‌ ಮಾಡಲಾಗಿದೆ, ಅಲ್ಲದೇ ತಾಪಂ ಕೆಲ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ, ಆವರಣದಲ್ಲಿರುವ ಕ್ವಾರ್ಟರ್ಸ್‌ ಕಟ್ಟಡಗಳ ಕಿಟಕಿ ಬಾಗಿಲುಗಳು ಸಹ ಮುರಿಯುವ ಹಂತಕ್ಕೆ ಬಂದಿವೆ, ಇವುಗಳ ನಿರ್ವಹಣೆ ಇಲ್ಲದಂತಾಗಿದೆ.

ತಾಪಂ ಸದಸ್ಯರ ಆಡಳಿತ ಆವಧಿ ಮುಗಿದು ಒಂದುವರೆ ವರ್ಷ ಕಳೆದರೂ ಇನ್ನೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ತಾಪಂನಲ್ಲಿ ಹಿಡಿತ ಇಲ್ಲದಂತಾಗಿದೆ, ಇದರಿಂದ ತಾಪಂ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಏನೇ ಕೇಳಿದರೂ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದ ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ನಾವು ಹೇಗೆ ಉತ್ತರಿಸಬೇಕು ಎಂದು ಗ್ರಾಪಂ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸರ್ಕಾರ ಪ್ರತಿ ವರ್ಷ ಕುಡಿವ ನೀರು, ಶೌಚಾಲಯ, ರಸ್ತೆ ಚರಂಡಿ, ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತದೆ, ಬಿಡುಗಡೆಯಾದ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ, ಬಳಕೆ ಮಾಡಿ ನಿರ್ಮಿಸಿದ ಕಟ್ಟಡಗಳು ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ,ಇದರಿಂದ ಜನರ ತೆರಿಗೆ ಹಣ ವ್ಯರ್ಥವಾಗುವುದಂತು ನಿಜ.

ಕೊಳಚೆ ನೀರು ತುಂಬಿದ ಮಹಿಳಾ ಶೌಚಾಲಯ; ಸ್ವಚ್ಛಗೊಳಿಸದ ಪಟ್ಟಣ ಪಂಚಾಯ್ತಿ!

ಶೌಚಾಲಯ ನಿರ್ವಹಣೆ ಮಾಡಲು ನಮ್ಮಲ್ಲಿ ಸಿಬ್ಬಂದಿ ಇಲ್ಲ, ಹೊರಗಿನವರು ಬಂದು ಇದನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಆದ್ದರಿಂದ ಶೌಚಾಲಯ ಬಂದ್‌ ಮಾಡಿಸಲಾಗಿದೆ. ಶೌಚಾಲಯ ನಿರ್ವಹಣೆಗೆ ಸಿಬ್ಬಂದಿ ನೇಮಿಸುವಂತೆ ಈಗಾಗಲೇ ಜಿಪಂಗೆ ಪ್ರಸ್ತಾವನೆ ಕಳಿಸಲಾಗಿದೆ ಅಲ್ಲಿಂದ ಅನುಮೋದನೆ ಸಿಕ್ಕ ಕೂಡಲೇ ಶೌಚಾಲಯ ತೆರೆದು ಉಪಯೋಗಕ್ಕೆ ಅನುಕೂಲ ಮಾಡಿಕೊಡಲಾಗುವುದು.

ಕೆ.ಆರ್‌.ಪ್ರಕಾಶ್‌, ತಾಪಂ ಇಒ ಹರಪನಹಳ್ಳಿ

ಕಳೆದ ನಮ್ಮ ಅಧಿಕಾರವಧಿಯಲ್ಲಿಯೇ ತಾಪಂ ಆವರಣದಲ್ಲಿ ಮಹಿಳಾ ಮತ್ತು ಪುರುಷರ ಹೈಟೆಕ್‌ ಶೌಚಾಲಯ ನಿರ್ಮಿಸಿ,ಬಳಿಕ ಉದ್ಘಾಟಿಸಿ ಉಪಯೋಗಕ್ಕಾಗಿ ವ್ಯವಸ್ಥೆ ಮಾಡಿ ಕೊಡಲಾಗಿತ್ತು,ಇದೀಗ ಶೌಚಾಲಯ ಬಂದ್‌ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ, ಕೂಡಲೇ ಶೌಚಾಲಯಗಳಿಗೆ ಹಾಕಿರುವ ಬೀಗ ತೆಗೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ಎಲ್‌.ಮಂಜ್ಯಾನಾಯ್‌್ಕ, ತಾಪಂ ಮಾಜಿ ಉಪಾಧ್ಯಕ್ಷರು

ಗ್ರಾಮ ಪಂಚಾಯ್ತಿ ಕೆಲಸ-ಕಾರ್ಯಗಳ ನಿಮಿತ್ತ ತಾಪಂ ಕಚೇರಿಗೆ ಬಂದರೆ ಇಲ್ಲಿ ಸರಿಯಾಗಿ ಕುಡಿವ ನೀರು,ಶೌಚಾಲಯ ಇಲ್ಲ, ಕೂಡುವುದಕ್ಕೆ ಗ್ರಾಪಂ ಸದಸ್ಯರಿಗೆ ಕೊಠಡಿ ಇಲ್ಲ. ಇಲ್ಲಿಗೆ ಬಂದರೆ ನಮಗೆ ಬೆಲೆ ಇಲ್ಲಂತಾಗಿದೆ.

ಬಸವರಾಜ್‌- ಗ್ರಾಪಂ ಸದಸ್ಯರು ಇ.ಬೇವಿನಹಳ್ಳಿ

Follow Us:
Download App:
  • android
  • ios