ಕಾರ್ಕಳದಲ್ಲಿ ಐತಿಹಾಸಿಕ ಮದ್ದು ಗುಂಡುಗಳು ಪತ್ತೆ!
ಕಾರ್ಕಳ ಕೋಟೆ ಪರಿಸರದ ಭೂಮಿಯನ್ನು ಖಾಸಗಿ ಉದ್ಯಮಿಗಳು ಖರೀದಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದರು. ಇವರು ಭೂಮಿ ಅಗೆಯುವ ವೇಳೆ, ಕಾಮಗಾರಿ ನಡೆಯುತ್ತಿದ್ದಾಗ ಭೂಮಿಯ ಐದು ಅಡಿ ಆಳದಲ್ಲಿ ಪಿರಂಗಿ ಗುಂಡುಗಳು ಪತ್ತೆಯಾಗಿವೆ!
ಉಡುಪಿ (ಡಿ.5) : ಜಿಲ್ಲೆಯ ಅನೇಕ ಭಾಗಗಳಲ್ಲಿ ಐತಿಹಾಸಿಕ ಕುರುಹುಗಳು ಸಿಗುತ್ತಲೇ ಇರುತ್ತವೆ. ಈ ಭಾಗವನ್ನು ಅನೇಕ ರಾಜ ಮನೆತನಗಳು ಆಳಿದ ಇತಿಹಾಸವಿದ್ದು, ಶಾಸನಗಳು, ರಚನೆಗಳು, ಶಿಲ್ಪಗಳು ಅಧ್ಯಯನಾಸಕ್ತರಿಗೆ ವಿಶೇಷವಾಗಿ ಈ ಭಾಗದಲ್ಲಿ ಕಾಣಸಿಗುತ್ತವೆ. ಇದೀಗ ಐತಿಹಾಸಿಕ ಪ್ರದೇಶ ಎನಿಸಿಕೊಂಡಿರುವ ಕಾರ್ಕಳ ತಾಲೂಕಿನ ಕೋಟೆ ಆವರಣದಲ್ಲಿ ಸುಮಾರು 3000 ಫಿರಂಗಿ ಗುಂಡುಗಳು ಪತ್ತೆಯಾಗಿವೆ.
ಇಕ್ಕೇರಿಯ ನಾಯಕರ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದ ಕಾರ್ಕಳ ಕೋಟೆಯ ಪರಿಸರದಲ್ಲಿ ಈ ಮೂರು ಸಾವಿರ ಮದ್ದುಗುಂಡುಗಳು ಪತ್ತೆಯಾಗಿರುವುದು ಸದ್ಯ ಗಮನ ಸೆಳೆದಿದೆ. ಹುಕ್ಕೇರಿ ನಾಯಕನ ಅಧಿಕಾರದ ಬಳಿಕ ಕಾರ್ಕಳಕೋಟೆ ಟಿಪ್ಪು ಸುಲ್ತಾನನ ಪಾಲಾಗಿತ್ತು. ಈ ಅವಧಿಯಲ್ಲಿ ಫಿರಂಗಿಗಾಗಿ ಬಳಸುತ್ತಿದ್ದ ಬೆಳಚು ಕಲ್ಲಿನಿಂದ ಸಿದ್ಧಪಡಿಸಲಾಗಿದ್ದ ವಿವಿಧ ಗಾತ್ರದ ಗುಂಡುಗಳು ಇದೀಗ ಕಂಡು ಬಂದಿದೆ.
ಜಲಕಂಠೇಶ್ವರಸ್ವಾಮಿ ದೇಗುಲ ಬಳಿ ವಿಗ್ರಹ-ಮದ್ದುಗುಂಡುಗಳು ಪತ್ತೆ
ಈ ಹಿಂದೆ ಕಾರ್ಕಳಕೋಟೆಯಲ್ಲಿ ವೀರ ಮಾರುತಿಯ ಗುಡಿ ಕೂಡ ಇತ್ತು. ಹುಕ್ಕೇರಿ ರಾಜನ ಆಳ್ವಿಕೆಯ ಕಾಲಘಟ್ಟದಲ್ಲಿ ಕೋಟೆಯ ರಕ್ಷಣೆ ಮಾಡುತ್ತಿದ್ದ ರಾಮಕ್ಷತ್ರಿಯ ಸಮುದಾಯದವರು ಈ ಮಾರುತಿಯನ್ನು ಆರಾಧಿಸುತ್ತಿದ್ದರು. ಟಿಪ್ಪುವಿನ ಕಾಲಘಟ್ಟದಲ್ಲಿ ಧರಾಶಾಹಿಯಾಗಿದ್ದ ವೀರ ಮಾರುತಿಯ ಏಕಶಿಲಾಮೂರ್ತಿಯನ್ನು ಪಕ್ಕದ ಮಾರಿಯಮ್ಮ ಕ್ಷೇತ್ರದ ಒಂದು ಭಾಗದಲ್ಲಿ ಪ್ರತಿಷ್ಠಾಪನೆಗೈಯಲಾಗಿದೆ.
ಸದ್ಯ ಅಲ್ಲೇ ವೀರ ಮಾರುತಿಯ ಆರಾಧನೆ ಕೂಡಾ ನಡೆಯುತ್ತಿದೆ. ಈಗ ಮಾರಿಯಮ್ಮ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದ್ದು ಜೊತೆಗೆ ವೀರ ಮಾರುತಿಯ ಗುಡಿ ಕೂಡ ಪುನರ್ ನಿರ್ಮಾಣ ವಾಗುತ್ತಿದೆ.
ಟಿಪ್ಪುವಿನ ಅಧಿಕಾರ ಅವಧಿಯ ಬಳಿಕ ಬ್ರಿಟಿಷರ ಪಾಲಾಗಿದ್ದ ಈ ಕೋಟೆಯಲ್ಲಿ ಟಿಪ್ಪುವಿನ ಪರವಾಗಿ ಅಧಿಕಾರ ಹೊಂದಿದ್ದ ಕುಟುಂಬವೊಂದು ವಾಸ ಮಾಡಿಕೊಂಡಿತ್ತು. ಕೋಟೆಯ ಪರಿಧಿಯಲ್ಲಿ ವಾಸ ಮಾಡಿಕೊಂಡಿದ್ದ ಈ ಕುಟುಂಬ ಭೂಮಿಯ ಅಧಿಕಾರವನ್ನು ಕೂಡಾ ಹೊಂದಿತ್ತು ಎಂದು ಹೇಳಲಾಗುತ್ತದೆ.
ಇತ್ತೀಚಿಗೆ ಕಾರ್ಕಳ ಕೋಟೆ ಪರಿಸರದ ಭೂಮಿಯನ್ನು ಕೆಲವು ಉದ್ಯಮಿಗಳು ಖರೀದಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದರು. ಇವರು ಭೂಮಿ ಅಗೆಯುವ ವೇಳೆ, ಕಾಮಗಾರಿ ನಡೆಯುತ್ತಿದ್ದಾಗ ಭೂಮಿಯ ಐದು ಅಡಿ ಆಳದಲ್ಲಿ ಪಿರಂಗಿ ಗುಂಡುಗಳು ಪತ್ತೆಯಾಗಿವೆ.
ಕಾರ್ಕಳದಲ್ಲಿ Love Jihad ಎಚ್ಚರಿಕೆಯ ಬ್ಯಾನರ್ ಪತ್ತೆ
ಮಾಹಿತಿಯ ಪಡೆದ ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸ್ಥಳಕ್ಕೆ ಭೇಟಿ ನೀಡಿ ವಿವರ ಕಲೆ ಹಾಕಿದ್ದಾರೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಗುಂಡುಗಳ ಸಂಗ್ರಹವಿದ್ದು ಅವುಗಳನ್ನು ಕಾರ್ಕಳ ಪೊಲೀಸರ ವಶಕ್ಕೆ ನೀಡಲಾಗಿದೆ.
ಸಣ್ಣ ಗಾತ್ರದ ಗುಂಡು ಸುಮಾರು ಅರ್ಧ ಕೆಜಿಯಷ್ಟು ತೂಕ ಇದ್ದರೆ, ದೊಡ್ಡ ಗಾತ್ರದ ಗುಂಡು ಒಂದು ಕೆಜಿ ಬಾರ ಹೊಂದಿದೆ. ಒಂದು ಟೆಂಪೋದಲ್ಲಿ ಲೋಡು ಮಾಡಿಕೊಂಡು ಸದ್ಯ ಗುಂಡುಗಳನ್ನು ಸ್ಥಳದಿಂದ ಸಾಗಿಸಲಾಗಿದೆ.