ಚಿತ್ರದುರ್ಗದ ಬರಪೀಡಿತ ಹಿರಿಯೂರು ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸಲು ₹244 ಕೋಟಿ ವೆಚ್ಚದ ಬೃಹತ್ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದೆ. ಈ ಯೋಜನೆಯಡಿ ವೇದಾವತಿ ನದಿಯಿಂದ ನೀರೆತ್ತಿ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯವನ್ನು ತುಂಬಿಸಲಾಗುತ್ತದೆ.

ಚಿತ್ರದುರ್ಗ (ನ.2): ಜಿಲ್ಲೆಯ ಬರಪೀಡಿತ ಹಿರಿಯೂರು ತಾಲೂಕಿನ ಅಂತರ್ಜಲ ಮಟ್ಟ ಸುಧಾರಣೆ ಹಾಗೂ ಜಲಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ಜವನಗೊಂಡನಹಳ್ಳಿ ಹೋಬಳಿಯ 16 ಪ್ರಮುಖ ಕೆರೆಗಳು ಹಾಗೂ ಐತಿಹಾಸಿಕ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ₹244 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು, ಹಿರಿಯೂರು ತಾಲೂಕಿನ ದಿಂಡಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮಹತ್ವದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯು ಸತತ ಬರಗಾಲ, ಕೆರೆಗಳಲ್ಲಿ ನೀರಿಲ್ಲದೇ ಒಣಗಿರುವುದು ಹಾಗೂ ಭಾರಿ ಪ್ರಮಾಣದ ಅಂತರ್ಜಲ ಕುಸಿತದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರದೇಶದ ಹಲವೆಡೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕಾಗಿ ಸಾರ್ವಜನಿಕರು ಬರೋಬ್ಬರಿ 1,000 ಅಡಿಗಳಷ್ಟು ಆಳದವರೆಗೆ ಕೊಳವೆಬಾವಿ (Borewell) ತೋಡಬೇಕಾದ ಕಠಿಣ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸುದೀರ್ಘ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ದೀರ್ಘಕಾಲಿಕ ಜಲಭದ್ರತೆ ನೀಡುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆಯು ಈ ಬೃಹತ್ ಕೆರೆ ತುಂಬಿಸುವ ಯೋಜನೆಯನ್ನು ಸಿದ್ಧಪಡಿಸಿದೆ.

ಯೋಜನೆ ಹೇಗೆ ಕಾರ್ಯಾಚರಣೆ ನಡೆಸಲಿದೆ?

ಈ ಯೋಜನೆಯಡಿ ಒಟ್ಟು 0.307 ಟಿಎಂಸಿ (TMC) ನೀರನ್ನು ಬಳಸಿಕೊಂಡು 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯವನ್ನು ಭರ್ತಿ ಮಾಡಲಾಗುತ್ತದೆ. ನೀರು ತುಂಬಿಸಲಾಗುವ 16 ಕೆರೆಗಳ ಪೈಕಿ 10 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಹಾಗೂ 6 ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿವೆ. ವೇದಾವತಿ ನದಿಗೆ ಅಡ್ಡಲಾಗಿ ಮುಳುಗು ಸೇತುವೆ ಮಾದರಿಯ 'ಸಬ್‌ಮರ್ಸಿಬಲ್ ಡೈವರ್ಷನ್ ವೇರ್' (Submersible Diversion Weir) ನಿರ್ಮಿಸಲಾಗುತ್ತದೆ. ನದಿಯ ನೀರನ್ನು ಜಾಕ್‌ವೆಲ್ ಹಾಗೂ ಪಂಪ್‌ಹೌಸ್‌ಗಳ ಮೂಲಕ ಎತ್ತಿ (Lift Irrigation) ಕೆರೆಗಳಿಗೆ ಹರಿಸಲಾಗುತ್ತದೆ.

ಯೋಜನೆಯಲ್ಲಿ ನೀರೆತ್ತಲು 2,000 HP ಸಾಮರ್ಥ್ಯದ ಕಾಂಪ್ಯಾಕ್ಟ್ VT ಪಂಪುಗಳನ್ನು ಬಳಸಲಾಗುತ್ತಿದೆ. ನೀರನ್ನು ಸುಗಮವಾಗಿ ಹರಿಸಲು ಸುಮಾರು 28.13 ಕಿಲೋಮೀಟರ್ ಉದ್ದದ ಎಮ್‌ಎಸ್ (MS) ಪೈಪ್‌ಲೈನ್ ಹಾಗೂ 16.82 ಕಿಲೋಮೀಟರ್ ಉದ್ದದ ಹೆಚ್‌ಡಿಪಿಇ (HDPE) ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತದೆ.

30 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ

ಈ ₹244 ಕೋಟಿ ವೆಚ್ಚದ ಯೋಜನೆಗೆ 2026ರ ಜುಲೈ 21ರಂದೇ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಪ್ರಸ್ತುತ ಯೋಜನೆಯ ಟೆಂಡರ್ ಪ್ರಕ್ರಿಯೆಗಳು ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಕಾಮಗಾರಿ ಪ್ರಾರಂಭವಾದ 30 ತಿಂಗಳ ನಿಗದಿತ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಭರವಸೆಯನ್ನು ಸರ್ಕಾರ ನೀಡಿದೆ.

ಈ ಬಗ್ಗೆ ಮಾತನಾಡಿದ ಸಚಿವ ಅಜಯ್‌ ಧರ್ಮ್‌ಸಿಂಗ್‌, 'ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳನ್ನು ತುಂಬಿಸಿ ಅಂತರ್ಜಲವನ್ನು ಪುನಶ್ಚೇತನಗೊಳಿಸುವುದು ನಮ್ಮ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈ ₹244 ಕೋಟಿ ಯೋಜನೆಗೆ ಚಾಲನೆ ದೊರೆಯುತ್ತಿರುವುದು ಹಿರಿಯೂರು ಭಾಗದ ಜನರಿಗೆ ಸಿಕ್ಕ ಪ್ರಮುಖ ಕೊಡುಗೆಯಾಗಿದೆ. ಕೆರೆಗಳು ತುಂಬುವುದರಿಂದ ಕುಡಿಯುವ ನೀರಿನ ಭದ್ರತೆ ಸಿಗುವುದಲ್ಲದೆ, ಅಂತರ್ಜಲ ಮಟ್ಟ ಸುಧಾರಿಸಿ ರೈತರ ಕೃಷಿ ಚಟುವಟಿಕೆಗಳಿಗೆ ನೇರ ನೆರವಾಗಲಿದೆ. ಸಣ್ಣ ನೀರಾವರಿ ಯೋಜನೆಗಳು ಕೇವಲ ನೀರಾವರಿ ಸೌಲಭ್ಯಕ್ಕೆ ಸೀಮಿತವಾಗಿರುವುದಿಲ್ಲ. ಅವು ಗ್ರಾಮೀಣ ಭಾಗದ ಕುಡಿಯುವ ನೀರು ಹಾಗೂ ರೈತರ ಜೀವನೋಪಾಯಕ್ಕೆ ನೇರವಾಗಿ ಸಂಬಂಧಿಸಿದ ಮೂಲಸೌಕರ್ಯಗಳಾಗಿವೆ. ಯೋಜನೆಯನ್ನು ಅತ್ಯುನ್ನತ ಗುಣಮಟ್ಟದೊಂದಿಗೆ ನಿಗದಿತ 30 ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದಿದ್ದಾರೆ.