ಈ ಗ್ರಾಮದ ಜನರಿಗೆ ಕುಡಿಯಲು ಫ್ಲೋರೈಡ್ ನೀರೆ ಗತಿ! ಸಚಿವರೇ ಏನಂತೀರಿ?

ಎರಡು ವರ್ಷಗಳ ಹಿಂದೆ 11  ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾದ ಶುದ್ಧ ನೀರಿನ ಘಟಕ| ಘಟಕ ಆರಂಭವಾಗದಿರುವುದರಿಂದ ಗ್ರಾಮಸ್ಥರು ಫ್ಲೋರೈಡ್ ನೀರು ಕುಡಿಯಬೇಕಾಗಿದೆ| ಬೇರೆ ಗ್ರಾಮಗಳಿಂದ ಕೆಲವರು ನೀರನ್ನು ಪಡೆದುಕೊಂಡು ಕುಡಿಯುವ ಸ್ಥಿತಿ ಬಂದೊದಗಿದೆ| ಶುದ್ಧ ನೀರು ಘಟಕ ಆರಂಭಿಸದಿರುವುದರಿಂದ  ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು| ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವಂತೆ ಗ್ರಾಮಸ್ಥರು ಮೌಖಿಕವಾಗಿ ಮನವಿ ಮಾಡಿದ್ದಾರೆ| 

Hiremalluru Village People Faces Drinking Water Problem

ಬಸವರಾಜ ಹಿರೇಮಠ 

ಶಿಗ್ಗಾಂವಿ(ಸೆ.29): ತಾಲೂಕಿನ ಹಿರೇಮಲ್ಲೂರಿನಲ್ಲಿ ಎರಡು ವರ್ಷಗಳ ಹಿಂದೆ 11  ಲಕ್ಷ ರು. ವೆಚ್ಚದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಆ ಘಟಕ ಆರಂಭವಾಗದಿರುವುದರಿಂದ ಗ್ರಾಮಸ್ಥರು ಫ್ಲೋರೈಡ್ ನೀರು ಕುಡಿಯಬೇಕಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರು ಇಲ್ಲದೆ ಬೇರೆ ಗ್ರಾಮಗಳಿಂದ ಕೆಲವರು ನೀರನ್ನು ಪಡೆದುಕೊಂಡು ಕುಡಿಯುವ ಸ್ಥಿತಿ ಬಂದೊದಗಿದೆ.

ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಸರ್ಕಾರ ಶುದ್ಧ ನೀರು ಘಟಕ ನಿರ್ಮಿಸಿದೆ. ಆದರೆ ಇದಕ್ಕೆ ಸಂಬಂಧಿಸಿದ ಜಿ.ಪಂ. ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಮಾತ್ರ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆಯೇ ಹೊರತು ಘಟಕದ ಪ್ರಾರಂಭಕ್ಕೆ ಮುಂದಾಗಿಲ್ಲ. 

ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಗಂಜಿಗಟ್ಟಿ, ಬನ್ನಿಕೊಪ್ಪ, ಶಿಗ್ಗಾಂವಿ ಪಟ್ಟಣಗಳಿಗೆ ತೆರಳಬೇಕಾಗಿದೆ. ಕಳೆದ ವರ್ಷ ಅಂತರ್ ಜಲಮಟ್ಟದ ಕೊರತೆಯಿಂದ ನೀರಿನ ಹಾಹಾಕಾರ ಉಂಟಾಗಿತ್ತು. ನೀರಿಗಾಗಿ ಗ್ರಾಮಸ್ಥರು ಬೇರೆ ಗ್ರಾಮವನ್ನೆ ಆಶ್ರಯಿಸಬೇಕಾಗಿತ್ತು. ಈ ಬಾರಿ ಉತ್ತಮ ಮಳೆಯಿಂದಾಗಿ ಅಂತರ ಜಲ ಮಟ್ಟ ಹೆಚ್ಚಿದೆ. ಕೊಳವೆ ಬಾವಿಯನ್ನು ಕೊರೆಸಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪ್ ಲೈನ್‌ನಿಂದ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯವರು ಮಾಡಿದ್ದರೂ ಶುದ್ಧ ನೀರು ಘಟಕ ಆರಂಭಿಸದಿರುವುದರಿಂದ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಆಗಸ್ಟ್‌ನಲ್ಲಿ ಅತಿವೃಷ್ಟಿಯಿಂದ ಹಾನಿ ವೀಕ್ಷಿಸಲು ಆಗಮಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವಂತೆ ಗ್ರಾಮಸ್ಥರು ಮೌಖಿಕವಾಗಿ ಮನವಿ ಮಾಡಿದ್ದಾರೆ. ತಕ್ಷಣ ಘಟಕವನ್ನು ಪ್ರಾರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರೂ ಅಧಿಕಾರಿಗಳು ಮಾತ್ರ ಗೋಣು ಹಾಕಿದರೆ ಹೊರತು ಶುದ್ಧ ನೀರು ದೊರಕಲಿಲ್ಲಾ ಎನ್ನುತ್ತಾರೆ. ತಕ್ಷಣವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭವಾಗಬೇಕು ಇಲ್ಲದೆ ಇದ್ದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಹಿರೇಮಲ್ಲೂರ ಗ್ರಾಮದ ನಿವಾಸಿ ಈಶ್ವರಗೌಡ ಕರಿಗೌಡ್ರ ಅವರು, ಸ್ಥಳೀಯ ಜಿ.ಪಂ. ಸದಸ್ಯರು ಹಾಗೂ ತಾ.ಪಂ. ಸದಸ್ಯರು ಶಾಸಕರು ಬಂದಾಗ ಮಾತ್ರ ವೇದಿಕೆಯಲ್ಲಿ ಕಾಣುತ್ತಾರೆ. ಆದರೆ ಉಳಿದ ವೇಳೆಯಲ್ಲಿ ಗ್ರಾಮದ ಅಭಿವೃದ್ಧಿ ಕುರಿತು ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಹಿರೇಮಲ್ಲೂರ ಪಿಡಿಒ ಅಶೋಕ ಗೊಂದಿ ಅವರು, ಕೊಳವೆಬಾವಿ, ಪೈಪ್‌ಲೈನ್ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯಿಂದ ಮಾಡಿದ್ದು ಜಿ.ಪಂ. ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಶಿಗ್ಗಾಂವಿ ಜಿಪಂ ಜೂನಿಯರ್ ಎಂಜಿನಿಯರ್ ರಫೀಕ್ ಅವರು, ಹಿರೇಮಲ್ಲೂರ ಗ್ರಾಮದ ಕುಡಿಯುವ ನೀರಿನ ಘಟಕವನ್ನು ಆರಂಭಿಸುವಂತೆ ತಾಂತ್ರಿಕ ಸಿಬ್ಬಂದಿಗೆ ಹೇಳಿದ್ದು, 3-4 ದಿನಗಳಲ್ಲಿ ಘಟಕವನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios