ಹುಬ್ಬಳ್ಳಿ(ಡಿ.29): ಧರ್ಮ ಒಡೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಹೀಗಾಗಿಯೇ ಸಿಎಎ, ಎನ್‌ಆರ್‌ಸಿ ಕಾಯ್ದೆಯನ್ನು ವಿರೋಧಿಸುತ್ತಿದೆ. ಕಾಂಗ್ರೆಸ್‌ನ ಢೋಂಗಿತನಕ್ಕೆ ಬೇಸತ್ತು ನಾನು ಆ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದೇನೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಹೇಳಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ವತಿಯಿಂದ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಮತ್ತು ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನವರದ್ದು ಯಾವಾಗಲೂ ಢೋಂಗಿತನದ ಜಾತ್ಯತೀತತೆ. ಎನ್‌ಆರ್‌ಸಿ, ಸಿಎಎ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದ ಅವರು, ಅದರಲ್ಲೂ ಸಿದ್ದರಾಮಯ್ಯ ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡಿ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರತದ 130 ಕೋಟಿ ಜನರಿಗೆ ಸಿಎಎ, ಎನ್‌ಆರ್‌ಸಿ ಕಾಯ್ದೆ ಸಂಬಂಧಿಸುವುದಿಲ್ಲ. ಮುಸ್ಲಿಮರು ಈ ದೇಶದ ಪ್ರಜೆಗೆಳು, ಇಲ್ಲೇ ಹುಟ್ಟಿದ್ದಾರೆ, ಇಲ್ಲಿಯೇ ಜೀವನ ನಡೆಸುತ್ತಾರೆ. ಕಾಂಗ್ರೆಸ್‌ನವರು ಮುಸ್ಲಿಂರ ತಲೆಯಲ್ಲಿ ವಿಷಬೀಜ ಬಿತ್ತುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಭಾರತ ದೇಶದ ಹೆಣ್ಣುಮಕ್ಕಳನ್ನು ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶದ ಮುಸ್ಲಿಂರು ಮದುವೆಯಾದರೆ ಅವರನ್ನು ನಮ್ಮ ದೇಶದ ಅಳಿಯಂದಿರನ್ನಾಗಿ ಸ್ವೀಕರಿಸುತ್ತೇವೆ. ಆದರೆ, ಈ ದೇಶದ ದತ್ತು ಪುತ್ರರು ಎಂದು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಎಚ್ಚರಿಸಿದರು.

ದೇಶಕ್ಕೆ ಇದೀಗ ಮಾದರಿ ಸರ್ಕಾರವನ್ನು ನರೇಂದ್ರ ಮೋದಿ ನೀಡುತ್ತಿದ್ದಾರೆ. ಉತ್ತಮ ಆಡಳಿತ ನೀಡುತ್ತಿರುವ ಮೋದಿ ತ್ರಿವಳಿ ತಲಾಖ್‌, ಆರ್ಟಿಕಲ್‌ 370, ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರೆ ದೇಶದ ಮುಸ್ಲಿಮರು ಸ್ವಾಗತಿಸಿದ್ದಾರೆ. ಆದರೆ, ಈಗ ದೇಶದ ಒಳಿತಿಗಾಗಿ ಜಾರಿಗೆ ತರಲಾಗುತ್ತಿರುವ ಸಿಎಎ ಕಾಯ್ದೆ ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಬೆಂಕಿ ಹಚ್ಚಲು ಹೊರಟಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅದನ್ನು ಆರಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ಪ್ರಗತಿಪರರು, ಬುದ್ಧಿಜೀವಿಗಳು ಸಿಎಎ ವಿರೋಧಿಸುವ ಮೂಲಕ ಸುದ್ದಿ ಜೀವಿಗಳಾಗಲು ಪ್ರಯತ್ನಿಸುತ್ತಿದ್ದಾರೆ. ಲೇಖಕ ರಾಮಚಂದ್ರ ಗುಹಾನಂಥ ಬುದ್ಧಿಗೇಡಿಗಳಿಗೆ ಬುದ್ಧಿ ಕಲಿಸಬೇಕಿದೆ ಎಂದು ಕಿರಿಡಿಕಾರಿದರು.

ಸಿಎಎ ಕಾಯ್ದೆ ಎಲ್ಲ ಕಾಯ್ದೆಗಳ ತಾಯಿ ಇದ್ದಂತೆ. ನಮ್ಮ ದೇಶಕ್ಕೆ ಎನ್‌ಆರ್‌ಸಿ, ಎನ್‌ಆರ್‌ಪಿ ಏಕೆ ಬೇಡ ಎಂಬುವುದನ್ನು ಕಾಂಗ್ರೆಸ್‌ನವರು ಜನತೆಗೆ ತಿಳಿಸಬೇಕು. ಇನ್ನು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಪಾಕಿಸ್ತಾನದ ಮುಸ್ಲಿಮರಿಗೆ ಭಾರತದಲ್ಲಿ ಪೌರತ್ವ ನೀಡುತ್ತೇವೆ ಎಂಬುವುದನ್ನು ಘೋಷಿಸಬೇಕು ಎಂದು ಸವಾಲು ಹಾಕಿದರು.

ಬಿಜೆಪಿ ಕಾರ್ಯಕರ್ತರು ಹಿಂದೂಗಳು ಅಷ್ಟೇ ಅಲ್ಲದೇ ಮುಸ್ಲಿಂ ಸಮುದಾಯದವರ ಮನೆಗೂ ಹೋಗಿ ಸಿಎಎ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ಕಾಂಗ್ರೆಸ್‌ ಬಂಡವಾಳ ಬಯಲಿಗೆ ಎಳೆಯಬೇಕ ಎಂದರು.

ಸಭೆಯಲ್ಲಿ ರಾಣಿಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ, ಶಿರಹಟ್ಟಿಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರಾದ ಯು.ಬಿ. ಬಣಕಾರ, ಸೀಮಾ ಮಸೂತಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ಶಿವರಾಜ ಸಜ್ಜನರ, ಶೋಭಾ ನಿಸ್ಸಿಮಗೌಡರ, ಸಿದ್ದರಾಜ ಕಲಕೋಟಿ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘಾರ್‌, ಜಯತೀರ್ಥ ಕಟ್ಟಿ, ನಾಗೇಶ ಕಲಬುರ್ಗಿ, ಈರಣ್ಣ ಜಡಿ ಸೇರಿದಂತೆ ಧಾರವಾಡ ವಿಭಾಗಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.