Asianet Suvarna News Asianet Suvarna News

ನಾಗಬನ ಅಪವಿತ್ರ ಖಂಡಿಸಿ ಬಂದ್‌ : ಆರೋಪಿಗಳ ಬಂಧನಕ್ಕೆ 24 ದಿನ ಗಡುವು

  • ಕೋಡಿಕಲ್‌ನಲ್ಲಿ ನಾಗ ದೇವರ ಕಲ್ಲು ಎಸೆದು ಅಪವಿತ್ರಗೊಳಿಸಿರುವ ಘಟನೆ
  •  ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿಹಿಂಪ, ಬಜರಂಗದಳ ವತಿಯಿಂದ ಸೋಮವಾರ ಹಗಲಿಡಿ ಕೋಡಿಕಲ್‌ ಬಂದ್‌
Hindu Organisation protest For Nagabhan Demolished issue on Kodikal  snr
Author
Bengaluru, First Published Nov 16, 2021, 6:20 AM IST
  • Facebook
  • Twitter
  • Whatsapp

 ಮಂಗಳೂರು (ನ.16):  ನಗರದ ಕೋಡಿಕಲ್‌ನಲ್ಲಿ ನಾಗ (Nagabana) ದೇವರ ಕಲ್ಲು ಎಸೆದು ಅಪವಿತ್ರಗೊಳಿಸಿರುವ ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿಹಿಂಪ (VHP), ಬಜರಂಗದಳ (bajarangdal) ವತಿಯಿಂದ ಸೋಮವಾರ ಹಗಲಿಡಿ ಕೋಡಿಕಲ್‌ ಬಂದ್‌ ನಡೆಯಿತು. ಆರೋಪಿಗಳನ್ನು ಬಂಧಿಸಲು 24 ದಿನಗಳ ಗಡುವನ್ನು ಹಿಂದೂ ಸಂಘಟನೆ (Hindu organisation) ಮುಖಂಡರು ನೀಡಿದ್ದಾರೆ.

ಬೆಳಗ್ಗೆಯಿಂದ ಸಂಜೆವರೆಗೆ ಕೋಡಿಕಲ್‌ (Kodikal) ಬಂದ್‌ ಪ್ರಯುಕ್ತ ಈ ಪರಿಸರದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು. ಬಸ್‌ (Bus) ಸಂಚಾರ ಸ್ಥಗಿತಗೊಂಡಿತ್ತು. ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

24 ದಿನ ಗಡುವು: ಬಂದ್‌ ಪ್ರಯುಕ್ತ ಕೋಡಿಕಲ್‌ (Kodikal) ಕಟ್ಟೆಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ನಾಗಬನ ಅಪವಿತ್ರಗೊಳಿಸಿದ ಆರೋಪಿಗಳನ್ನು ಮುಂದಿನ 24 ದಿನದೊಳಗೆ ಬಂಧಿಸಬೇಕು. ಇಲ್ಲದಿದ್ದರೆ ದ.ಕ. ಜಿಲ್ಲೆಯೇ ಬಂದ್‌ ಆಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಕಳೆದ ಕೆಲವು ದಿನಗಳ ಅಂತರದಲ್ಲಿ ಮೂರು ಕಡೆ ಉದ್ದೇಶಪೂರ್ವಕವಾಗಿ ಇಂಥ ಕೃತ್ಯ ಎಸಗಲಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ. ಗಲಭೆ ಎಬ್ಬಿಸುವ ಹುನ್ನಾರ ಕಂಡುಬಂದಿದೆ. 24 ದಿನದೊಳಗೆ ನೈಜ ಆರೋಪಿಗಳನ್ನು ಬಂಧಿಸಿದರೆ ಪ್ರತಿಭಟನೆ (Protest) ನಡೆದ ಸ್ಥಳದಲ್ಲಿಯೇ ಪೊಲೀಸರಿಗೆ ಚಿನ್ನದ ಪದಕ ನೀಡಿ ಸನ್ಮಾನಿಸುತ್ತೇವೆ ಎಂದರು.

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ರಕ್ಷಣೆಗಾಗಿ ಸಮಾಜದ ಯುವಕರ ತಂಡವನ್ನು ರಚಿಸಬೇಕಿದೆ. ಕರಾವಳಿಯಲ್ಲಿ ನಡೆಯುತ್ತಿರುವ ಶ್ರದ್ಧಾಕೇಂದ್ರಗಳ ಅಪವಿತ್ರ ಘಟನೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಗೃಹ ಸಚಿವರು ಶೀಘ್ರ ಕರಾವಳಿ ಭಾಗಕ್ಕೆ ಭೇಟಿ ನೀಡಿ ಇಲ್ಲಿ ನಡೆದ ಘಟನೆಗಳ ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಎನ್‌ಕೌಂಟರ್‌ ಮಾಡಿ: ವಿಶ್ವಹಿಂದು ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ (Sharana pumpwell) ಮಾತನಾಡಿ, ಪೊಲೀಸರು ತಮಗೆ ಸಮಯ ನೀಡಿ ಎನ್ನುತ್ತಿದ್ದಾರೆ. ಹೀಗೆ ಮಾಡಿದರೆ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗುತ್ತದೆ. ನಗರ ಪೊಲೀಸ್‌ ಆಯುಕ್ತರು (police commissioner) ಕೂಡಲೆ ಕ್ರಮ ಕೈಗೊಂಡು ಆರೋಪಿಗಳ ಪತ್ತೆಗೆ ಮುಂದಾಗಬೇಕು. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದರೆ ಆರೋಪಿಗಳನ್ನು ಬಂಧಿಸಿ ತಕ್ಷಣ ಎನ್‌ಕೌಂಟರ್‌ ಮಾಡಬೇಕು. ಕರಾವಳಿಯ ಜನತೆ ಹಿಂದುತ್ವಕ್ಕಾಗಿ ಮತ ನೀಡಿದ್ದಾರೆ. ಹಿಂದುತ್ವದ ಓಟ್‌ ಉಳಿಸಿಕೊಳ್ಳಬೇಕಾದರೆ ಕರಾವಳಿಯ ಬಗ್ಗೆ ಸಿಎಂ ಗಮನ ನೀಡಬೇಕು. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಹಿಂದು ಜಾಗರಣ ವೇದಿಕೆ ಪ್ರಾಂತ ಉಪಾಧ್ಯಕ್ಷ ಕಿಶೋರ್‌ ಕುಮಾರ್‌ ಮಾತನಾಡಿದರು. ಧಾರ್ಮಿಕ ಪರಿಷತ್‌ ಸದಸ್ಯ ಪೊಳಲಿ ಗಿರೀಶ ತಂತ್ರಿ, ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್‌, ಕಾರ್ಯದರ್ಶಿ ಶಿವಾನಂದ ಮೆಂಡನ್‌, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್‌, ಜಿಲ್ಲಾ ಸಂಯೋಜಕ ಪುನೀತ್‌ ಅತ್ತಾವರ, ಕೋಡಿಕಲ್‌ ಎಸ್‌ಎನ್‌ಡಿಪಿ ಮಂದಿರ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಕಲ್ಲಕಂಡ ನಾಗಬನ ಅಧ್ಯಕ್ಷ ಭಾಸ್ಕರ ಶೆಟ್ಟಿ, ವಿಹಿಂಪ ಮಣ್ಣಗುಡ್ಡ ಪ್ರಖಂಡ ಅಧ್ಯಕ್ಷ ವಸಂತ ಶೇಟ್‌, ಸಂಚಾಲಕ ಸತೀಶ್‌ ಶೆಟ್ಟಿ, ಸತೀಶ್‌ ಮುಂಚೂರು ಮತ್ತಿತರರಿದ್ದರು.

ಪ್ರತಿಭಟನೆಯ ಬಳಿಯ ಕೋಡಿಕಲ್‌ ಮೈದಾನದಿಂದ ನಾಗಬನದವರೆಗೆ ಮೆರವಣಿಗೆಯಲ್ಲಿ ತೆರಳಿ, ವಜ್ರದೇಹಿ ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.

ವಾಹನ ತಡೆಗೆ ಆಕ್ಷೇಪ

ಬಂದ್‌ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ತಡೆಯೊಡ್ಡುತ್ತಿದ್ದರು. ಇದಕ್ಕೆ ಯುವಕನೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದು ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವಿಚಾರ ಮಾತಿನ ಚಕಮಕಿಗೂ ಕಾರಣವಾಯಿತು. ಬಳಿಕ ಯುವಕನ ವಾಹನವನ್ನು ಬೇರೆ ರಸ್ತೆ ಮೂಲಕ ಕಳುಹಿಸಿ ಪೊಲೀಸರು ಪ್ರಕರಣಕ್ಕೆ ಅಂತ್ಯ ಹಾಡಿದರು.

Follow Us:
Download App:
  • android
  • ios