ಯಾದಗಿರಿ(ಸೆ.17): ಕೋವಿಡ್‌ನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಯುವಕರ ಸಂಘ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ಜಿಲ್ಲೆಯ ವಡಗೇರಾದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಬಾರದಿದ್ದಾಗ, ತಡರಾತ್ರಿವರೆಗೂ ಕಾದು ಸುಸ್ತಾದ ನಂತರ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಯುವಕರ ತಂಡ ಅಂತ್ಯಸಂಸ್ಕಾರ ನಡೆಸಿದೆ.

'ಸಿಎಂ ಸ್ಥಾನದಿಂದ ಬಿಎಸ್‌ವೈ ತೆಗೆಯಬಹುದು : ಬದಲಾವಣೆ ಖಚಿತ'

ಕೋವಿಡ್‌ನಿಂದ ಬಳಲುತ್ತಿದ್ದ ವಡಗೇರಾ ಪಟ್ಟಣದ ನಿವಾಸಿ ಕಲಬುರಗಿಯಲ್ಲಿ ಮೃತಪಟ್ಟಿದ್ದರು. ಮಂಗಳವಾರ ರಾತ್ರಿ ಮೃತದೇಹ ಅ್ಯಂಬುಲೆನ್ಸ್‌ ಮೂಲಕ ಬಂದಾಗ, ಆರೋಗ್ಯ ಇಲಾಖೆಯ ಸಿಬ್ಬಂದಿ ಬರಲೇ ಇಲ್ಲ. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ತಡವಾಗುತ್ತಿದೆ ಎಂದರಾದರೂ, ತಡರಾತ್ರಿವರೆಗೂ ಯಾರೂ ಬಾರದೆ ಇದ್ದಾಗ, ಪಿಎಫ್‌ಐ ತಂಡ ಮುಂದೆ ಬಂದಿದೆ. ಗ್ರಾಮಸ್ಥರಲ್ಲಿಯೂ ಕೆಲವರು ಅಂತ್ಯಕ್ರಿಯೆಗೆ ಮುಂದಾಗದ ಕಾರಣ ಶಹಾಪೂರದಲ್ಲಿನ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದವರು ಮಧ್ಯರಾತ್ರಿ ಬಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ಕೋವಿಡ್‌ ಸೇರಿ ವಿವಿಧ ಕಾರಣಗಳಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಂಬಂಧಿಕರು, ಗ್ರಾಮಸ್ಥರೂ ಹಿಂದೇಟು ಹಾಕುತ್ತಿರುವುದು ಕೆಲವೆಡೆ ಕಂಡು ಬರುತ್ತಿರುವುದರಿಂದ ಪಿಎಫ್‌ಐ ಸಂಘಟನೆ ಇದಕ್ಕೆ ಮುಂದಾಗಿದೆ. ಯಾವುದೇ ಜಾತಿ-ಧರ್ಮದ ವ್ಯಕ್ತಿಯಾಗಿರಲಿ ಹಿಂದೇಟು ಹಾಕದೆ, ನಿಯಮಗಳ ಪ್ರಕಾರ ಅಂತ್ಯಸಂಸ್ಕಾರಕ್ಕೆ ಮುಂದಾಗುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ. ಆರೋಗ್ಯ ಇಲಾಖೆ ವೈಖರಿ ಇಲ್ಲಿ ಟೀಕೆಗೊಳಗಾದರೆ, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಷ್ಟು ದೊಡ್ಡ ಗ್ರಾಮದಲ್ಲಿ ಹೆಗಲು ಕೊಡಲು ನಾಲ್ವರು ಸಿಗಲಿಲ್ಲವೇ ಎಂಬ ನೋವು ಅತಿಯಾಗಿ ಕಾಡಿದೆ ಎನ್ನಲಾಗಿದೆ.