ಬೆಳಗಾವಿ: ಮಾಂಸ ಸಾಗಿಸುತ್ತಿದ್ದ ವಾಹನ ತಡೆದ ಹಿಂದೂ ಕಾರ್ಯಕರ್ತರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಮಾರ್ಗವಾಗಿ ಬೆಳಗಾವಿ ರಸ್ತೆಯ ತಿಗಡಿ ಕ್ರಾಸ್ ಹತ್ತಿರ ಟಾಟಾ ಮ್ಯಾಜಿಕ್ ವಾಹನದಲ್ಲಿ ಸುಮಾರು 4 ಕ್ವಿಂಟಲ್‌ಗೂ ಹೆಚ್ಚು ಮಾಂಸವನ್ನು ಬೆಳಗಾವಿಗೆ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿ ಮಾಂಸವಿದ್ದ ವಾಹನ ತಡೆದು ಪೊಲೀಸರಿಗೆ ಮಾಹಿತಿ ನೀಡಿದ ತಿಗಡಿ ಗ್ರಾಮದ ಭಜರಂಗದಳ ಸಂಘಟನೆ ಮುಖಂಡರು, ಕಾರ್ಯಕರ್ತರು, ಗ್ರಾಮದ ಯುವಕರು.
ಬೈಲಹೊಂಗಲ(ಆ.06): ಜಾನುವಾರು ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆ ಹಿಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ತಾಲೂಕಿನ ಸಂಪಗಾಂವ ಮಾರ್ಗವಾಗಿ ಬೆಳಗಾವಿ ರಸ್ತೆಯ ತಿಗಡಿ ಕ್ರಾಸ್ ಹತ್ತಿರ ಟಾಟಾ ಮ್ಯಾಜಿಕ್ ವಾಹನದಲ್ಲಿ ಸುಮಾರು 4 ಕ್ವಿಂಟಲ್‌ಗೂ ಹೆಚ್ಚು ಮಾಂಸವನ್ನು ಬೆಳಗಾವಿಗೆ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ತಿಗಡಿ ಗ್ರಾಮದ ಭಜರಂಗದಳ ಸಂಘಟನೆ ಮುಖಂಡರು, ಕಾರ್ಯಕರ್ತರು, ಗ್ರಾಮದ ಯುವಕರು ಮಾಂಸವಿದ್ದ ವಾಹನ ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಮಾಂಸವಿದ್ದ ವಾಹನವನ್ನು ಠಾಣೆಗೆ ತಂದು ಆರೋಪಿ ಮಹ್ಮದರಫೀಕ್ ಕಡಬಿ, ಶಾನೂರ ಬೇಫಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಗೆ ಸ್ಪರ್ಧೆ: ಸಚಿವ ಜಾರಕಿಹೊಳಿ ಹೇಳಿದ್ದಿಷ್ಟು
ಅಕ್ರಮವಾಗಿ ಮಾಂಸ ಸಾಗಾಣಿಕೆ ಪ್ರಕರಣಕ್ಕೆ ಸಮಂಧಸಿದಂತೆ ಪಶು ವೈದ್ಯಾಧಿಕಾರಿಗಳಿಂದ ಮಾಂಸ ಪರಿಕ್ಷೀಸಲಾಗಿದ್ದು, ಅದು ಎಮ್ಮೆಯ ಮಾಂಸ ಎಂದು ಗೊತ್ತಾಗಿದೆ. ಜಾನುವಾರು ಹತ್ಯೆ ಕಾಯ್ದೆಯನ್ವಯ ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಪಿಐ - ಪಂಚಾಕ್ಷರಿ ಗಣಾಚಾರಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಶಿಸ್ತು ಕಾನೂನು ಕ್ರಮ ಕೈಕೊಳ್ಳಬೇಕು. ಇದು ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಎಲ್ಲ ಹಿಂದೂಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭಜರಂಗದಳ ಜಿಲ್ಲಾ ಸಂಯೋಜಕ ಸಂತೋಷ ಹೇಳಿದ್ದಾರೆ.
ಸರ್ಕಾರ ಜಾನುವಾರು ಹತ್ಯೆ ನಿಷೇಧಿಸಿದ್ದರೂ ಬೈಲಹೊಂಗಲ ಪಟ್ಟಣ, ಸಂಪಗಾಂವ, ಸುತ್ತ-ಮುತ್ತಲಿನಿಂದ ಪದೇ, ಪದೇ ಗೋವುಗಳ ಕಳ್ಳ ಸಾಗಾಣಿಕೆ, ಮಾಂಸ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮವಾಗಿ ಗೋವು, ಜಾನವಾರು ಮಾಂಸ ಸಾಗಿಸುವಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಕಟುನಿಟ್ಟಿನ ಕ್ರಮದ ಅವಶ್ಯಕತೆ ಇದೆ ಎಂದು ಕಿತ್ತೂರು ತಾಲೂಕು ಸಹ ಸಂಯೋಜಕ ಕುಮಾರ ಗಣಾಚಾರಿ ತಿಳಿಸಿದ್ದಾರೆ.