ಕೊಡಗಿನಲ್ಲಿ ವರುಣನ ಆರ್ಭಟ: ಶಾಲೆ ಮೇಲೆ ಗುಡ್ಡ ಕುಸಿತ, ತಪ್ಪಿದ ಭಾರೀ ಅನಾಹುತ..!
ಗುಡ್ಡ ಕುಸಿದ ಪರಿಣಾಮ ನೂರಾರು ಲೋಡ್‌ನಷ್ಟು ಮಣ್ಣು ಶಾಲೆಯ ಮೇಲೆ ಬಿದ್ದಿದೆ. ಗುಡ್ಡ ಕುಸಿದ ರಭಸಕ್ಕೆ ಶಾಲೆಯ ನಾಲ್ಕು ಕೊಠಡಿಗಳ ಗೋಡೆಗಳನ್ನು ಒಡೆದುಕೊಂಡು ನುಗ್ಗಿದೆ. ಹೀಗಾಗಿ ನಾಲ್ಕು ಕೊಠಡಿಗಳು ಸಂಪೂರ್ಣ ಹಾನಿಯಾಗಿದ್ದು, ಕೊಠಡಿಗಳ ಒಳಗೂ ಹತ್ತಾರು ಲೋಡಿನಷ್ಟು ಮಣ್ಣು ನುಗ್ಗಿದೆ. ಹೀಗಾಗಿ ಶಾಲಾ ಕೊಠಡಿಗಳ ಒಳಗೆ ಇದ್ದ ಪೀಠೋಪಕರಣ ಹಾಳಾಗಿವೆ. ಮಕ್ಕಳ ಪಠ್ಯೋಪಕರಣಗಳು ಹಾಳಾಗಿವೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಜು.16): ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅನಾಹುತಗಳು ಸಂಭವಿಸುತ್ತಿವೆ. ಮಡಿಕೇರಿ ತಾಲ್ಲೂಕಿನ ಕೊಯನಾಡಿನಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಹಿಂಬದಿಯಲ್ಲಿಯೇ ಇದ್ದ ಗುಡ್ಡ ಕುಸಿದಿದೆ. ಪರಿಣಾಮ ಶಾಲೆಯ ನಾಲ್ಕು ಕೊಠಡಿಗಳಿಗೆ ಸಂಪೂರ್ಣ ಹಾನಿಯಾಗಿದೆ.
ಗುಡ್ಡ ಕುಸಿದ ಪರಿಣಾಮ ನೂರಾರು ಲೋಡ್‌ನಷ್ಟು ಮಣ್ಣು ಶಾಲೆಯ ಮೇಲೆ ಬಿದ್ದಿದೆ. ಗುಡ್ಡ ಕುಸಿದ ರಭಸಕ್ಕೆ ಶಾಲೆಯ ನಾಲ್ಕು ಕೊಠಡಿಗಳ ಗೋಡೆಗಳನ್ನು ಒಡೆದುಕೊಂಡು ನುಗ್ಗಿದೆ. ಹೀಗಾಗಿ ನಾಲ್ಕು ಕೊಠಡಿಗಳು ಸಂಪೂರ್ಣ ಹಾನಿಯಾಗಿದ್ದು, ಕೊಠಡಿಗಳ ಒಳಗೂ ಹತ್ತಾರು ಲೋಡಿನಷ್ಟು ಮಣ್ಣು ನುಗ್ಗಿದೆ. ಹೀಗಾಗಿ ಶಾಲಾ ಕೊಠಡಿಗಳ ಒಳಗೆ ಇದ್ದ ಪೀಠೋಪಕರಣ ಹಾಳಾಗಿವೆ. ಮಕ್ಕಳ ಪಠ್ಯೋಪಕರಣಗಳು ಹಾಳಾಗಿವೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಕೊಡಗು: ಲಾರಿ, ಬೈಕ್ ಮಧ್ಯೆ ಅಪಘಾತ, ಯುವಕರಿಬ್ಬರ ದುರ್ಮರಣ
ಒಂದು ವೇಳೆ ತರಗತಿಗಳು ಇದ್ದ ಸಮಯದಲ್ಲಿ ಈ ಅನಾಹುತ ನಡೆದಿದ್ದರೆ ಘೋರ ದುರಂತವೇ ಆಗುತಿತ್ತು. ಸದ್ಯ ಶಾಲೆಯಲ್ಲಿ ಅಳಿದುಳಿದ ವಸ್ತುಗಳನ್ನು ಸ್ಥಳಾಂತರ ಮಾಡಲಾಗಿದೆ. ಇಡೀ ಪ್ರದೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಅಲ್ಲಿಗೆ ಯಾರೂ ಹೋಗದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದು ಮಳೆಯ ಆರ್ಭಟಕ್ಕೆ ವಿದ್ಯಾರ್ಥಿಗಳ ಕಣ್ಣೆದುರೆ ಶಾಲೆಯ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ರಾತ್ರಿ ಒಂದಷ್ಟು ಗುಡ್ಡ ಕುಸಿದಿತ್ತು. ಹೀಗಾಗಿ ಬೆಳಿಗ್ಗೆ ತಾವು ಓದುತ್ತಿರುವ ಶಾಲೆ ಹೇಗಿದೆ ಎಂದು ನೋಡುವುದಕ್ಕಾಗಿ ವಿದ್ಯಾರ್ಥಿ ಮತ್ತು ಪೋಷಕರು ಶಾಲೆ ಬಳಿಗೆ ಬಂದಿದ್ದಾರೆ. ಈ ವೇಳೆಯೇ ಶಾಲಾ ಕಟ್ಟಡದ ಮೇಲೆ ಗುಡ್ಡ ಕುಸಿದಿದೆ. ಭಾರೀ ಗಾತ್ರದ ಮರಗಳು ಉರುಳಿ ಬಿದ್ದಿವೆ. ಇದನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಪೋಷಕರು ಬೆಚ್ಚಿ ಬಿದ್ದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಡಿಡಿಪಿಐ ರಂಗಧಾಮಪ್ಪ, ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿದ್ದರು. ಅಲ್ಲದೆ ಹಾನಿಗೆ ಒಳಗಾದ ಶಾಲಾ ಕಟ್ಟಡದಲ್ಲಿ ಒಂದಷ್ಟು ಶೈಕ್ಷಣಿಕ ದಾಖಲೆ ಅಗತ್ಯ ಪೀಠೋಪಕರಣಗಳು ಇದ್ದಿದ್ದರಿಂದ ಅವುಗಳನ್ನು ರಕ್ಷಣೆ ಮಾಡುವುದಕ್ಕಾಗಿ ಕೂಡಲೇ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ದೊಡ್ಡ ಗಾತ್ರದ ಮರಗಳನ್ನು ತುಂಡರಿಸಿ ತೆಗೆದರು. ಬಳಿಕ ಶಾಲಾ ಕೊಠಡಿಯೊಳಗೆ ಇದ್ದ ದಾಖಲೆಗಳನ್ನು ರಕ್ಷಿಸಲಾಯಿತು.
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ: ಮನೆ ಕುಸಿತ, ಮರ, ವಿದ್ಯುತ್ ಕಂಬಗಳು ಧರೆಗೆ
ಈ ಸಂದರ್ಭ ಮಾತನಾಡಿ ವಿದ್ಯಾರ್ಥಿಗಳು ನಾವು ಒಂದನೇ ತರಗತಿಯಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದವರು, ನಮ್ಮ ಕಣ್ಣೆದುರೆ ಶಾಲೆಯ ಮೇಲೆ ಗುಡ್ಡ ಕುಸಿದು ಬಿತ್ತು. ತುಂಬಾ ಬೇಜಾರ್ ಆಯ್ತು ಜೊತೆಗೆ ಭಯವೂ ಆಯಿತು ಎಂದು ಸುವರ್ಣ ನ್ಯೂಸ್ ನೊಂದಿಗೆ ಆತಂಕವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಡಿಡಿಪಿಐ ರಂಗಧಾಮಪ್ಪ ಅವರು, ಸದ್ಯ ಶಾಲೆಗೆ ರಜೆ ಘೋಷಿಸಿದ್ದರಿಂದ ಯಾವುದೇ ಜೀವಹಾನಿ ಆಗಿಲ್ಲ. ಅನಾಹುತವಾಗುವ ಸಾಧ್ಯತೆ ಇದೆ ಎಂದು ಮೊದಲೇ ಅರಿವು ಇದ್ದಿದ್ದರಿಂದ ಅಗತ್ಯ ದಾಖಲೆಗಳನ್ನು ಬೇರೆಡೆಗೆ ಸಾಗಿಸಿದ್ದೆವು. ಈ ನಾಲ್ಕು ಕೊಠಡಿಗಳಿಗೆ ತೀವ್ರ ಹಾನಿಯಾಗಿದೆ. ಇದರಿಂದ ಇಡೀ ಶಾಲೆಯನ್ನು ಅಪಾಯದ ಸ್ಥಳವೆಂದು ಪರಿಗಣಿಸಿ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗೆ ಸೇರ್ಪಡೆಗೊಳಿಸಲು ನಿರ್ಧರಿಸಿದ್ದೇವೆ. ಅಲ್ಲದೆ ಶಾಲೆಗೆ ಆಗಿರುವ ಹಾನಿ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ.