ಬೆಂಗಳೂರು(ಫೆ.01): ನಗರದ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸಿದ ಆದೇಶ ಪಾಲಿಸದೆ ರಾಜಕಾರಣಿಗಳೊಂದಿಗೆ ಸಭೆ ನಡೆಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ಮತ್ತೆ ಚಾಟಿ ಬೀಸಿದೆ. 

ನಗರದಲ್ಲಿ ರಸ್ತೆಗುಂಡಿಗಳನ್ನು ದುರಸ್ತಿ ಗೊಳಿಸಲು ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿ ಕೋರಮಂಗಲದ ವಿಜಯ್ ಮೆನನ್ 2015 ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ರಸ್ತೆ ಗುಂಡಿಗಳಿಂದ ಸಂಭವಿಸಿದ ಆಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಈ ಸಂ ಬಂಧ ಜಾಹೀರಾತು ಪ್ರಕಟಣೆ ನೀಡಬೇಕು ಎಂದು 2019ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿತ್ತು. ಈ ಆದೇಶವನ್ನು ಬಿಬಿಎಂಪಿ ಆಯು ಕ್ತರು ಪಾಲಿಸಿರಲಿಲ್ಲ. ಬದಲಾಗಿ ಮೇಯರ್, ಉಪ ಮೇಯರ್ ಮತ್ತು ವಿರೋಧ ಪಕ್ಷದ ನಾಯಕರು ಸಭೆ ನಡೆಸಿ, ಕೋರ್ಟ್ ಆದೇಶ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ನಿರ್ಣಯ ಕೈಗೊಂಡಿದ್ದರು. 

ಇದರಿಂದ ಜ.20ರಂದು ಆಯುಕ್ತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಹೈಕೋರ್ಟ್, ನ್ಯಾ ಯಾಲಯದ ಆದೇಶವನ್ನು ಧಿಕ್ಕರಿಸಲಾಗಿದೆ. ಹೀಗಾಗಿ, ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ಹೆಸರು ಹಾಗೂ ವಿಳಾಸದ ವಿವರ ತಿಳಿಸುವಂತೆ ತಾಕೀತು ಮಾಡಿತ್ತು. ಆದರೆ, ಅರ್ಜಿ ಶುಕ್ರವಾರ ಮತ್ತೆ ವಿಚಾರಣೆಗೆ ಬಂದಾಗ, ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ವಿವರ ಗಳನ್ನು ಒದಗಿಸಲು ವಿಫಲರಾದ ಕಾರಣ ಆಯುಕ್ತರ ವಿರುದ್ಧ ನ್ಯಾಯಪೀಠ ಕಿಡಿಕಾರಿತು. 

ನಾವು ಕೇಳಿದ ವಿವರಗಳನ್ನು ಒದಗಿಸುತ್ತಿರೋ? ಅಥವಾ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳನ್ನು ನ್ಯಾಯಪೀಠದ ಮುಂದೆ ಖುದ್ದು ಹಾಜರು ಪಡಿಸುತ್ತೀರೋ? ಇಲ್ಲವೇ ಕೋರ್ಟ್ ಆದೇಶದ ವಿರುದ್ಧ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇನ್ನು ಮುಂದೆ ಇಂತಹ ಸಭೆಗಳನ್ನು ನಡೆಸುವುದಿಲ್ಲ ಎಂಬುದಾಗಿ ದೃಢೀಕರಿಸಿ ಹಾಗೂ ಕೋರ್ಟ್‌ಗೆ ಕ್ಷಮೆಯಾಚಿಸಿ ಅವರಿಂದಲೇ ಪ್ರಮಾಣಪತ್ರ ಸಲ್ಲಿಸುತ್ತಿರೋ? ಆಯುಕ್ತರಿಗೆ ನ್ಯಾಯಪೀಠ ಪ್ರಶ್ನಿಸಿತು. 

ಬಿಬಿಎಂಪಿ ಪರ ವಕೀಲರು, ಕೋರ್ಟ್ ಆದೇಶ ವನ್ನು ಧಿಕ್ಕರಿಸುವ ಯಾವುದೇ ಉದ್ದೇಶ ಆಯುಕ್ತರಿಗಾಗಲಿ ಹಾಗೂ ಪಾಲಿಕೆಗಾಗಲಿ ಇಲ್ಲ. ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ನಿಯಮ ರೂಪಿಸುವುದಕ್ಕೆ ಚರ್ಚಿಸಲು ಮೇಯರ್, ಉಪ ಮೇಯರ್ ಜೊತೆಗೆ ಆಯುಕ್ತರು ಸಭೆ ನಡೆಸಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಅದನ್ನು ಒಪ್ಪದ ನ್ಯಾಯಪೀಠ, 2019ರ ಸೆಪ್ಟೆಂಬರ್‌ನಲ್ಲಿ ಕೋರ್ಟ್ ಹೊರಡಿಸಿದ ಆದೇಶ ಪಾಲಿಸುವ ವಿಚಾರವನ್ನು ಕೌನ್ಸಿಲ್ ಸಭೆ ಮುಂದಿಡಲು ಸಭೆ ನಡೆಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆಯುಕ್ತರಿಗೆ ಪ್ರಮಾಣಪತ್ರ ಸಲ್ಲಿಸಿ ಒಪ್ಪಿಕೊಂಡಿದ್ದಾರೆ.

ಅದ್ದರಿಂದ ಈಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಷ್ಟಕ್ಕೂ ಆಯುಕ್ತರು ಅನಕ್ಷರಸ್ಥರೇ? ಅಥವಾ ಶಾಲೆಗೆ ಹೋಗುವ ಮಗುವೇ? ಎಂದು ಪ್ರಶ್ನಿಸಿತು. ಅಲ್ಲದೆ, ನಿಮಗೆ ಕೋರ್ಟ್ ಆದೇಶ ಸರಿ ಇಲ್ಲ ಎನಿಸಿದರೆ, ಅದನ್ನು ಪ್ರಶ್ನಿಸಬಹುದಾಗಿತ್ತು. ಅದು ಬಿಟ್ಟು ಆದೇಶವನ್ನು ಧಿಕ್ಕರಿಸಿದರೆ ಸಹಿಸುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು. ನಂತರ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ಹೆಸರು ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿ ಸಿದ ನ್ಯಾಯಪೀಠ, ಒಂದೊಮ್ಮೆ ಅವರು ಕೋರ್ಟ್‌ಗೆ ಹಾಜರಾಗಬಾರದು ಎನ್ನುವುದು ನಿಮ್ಮ ಭಾವನೆಯಾಗಿದ್ದರೆ, ಈ ವಿಚಾರದಲ್ಲಿ ನೀವೇ ತಪ್ಪಿತಸ್ಥರು ಎಂದು ಒಪ್ಪಿಕೊಳ್ಳಬೇಕು. 

ನ್ಯಾಯಾಲಯದ ಆದೇಶ ಧಿಕ್ಕರಿಸಿ ಸಭೆ ನಡೆಸಿರುವುದಾಗಿ ಸಮ್ಮತಿಸಬೇಕು. ಉದ್ದೇಶ ಪೂರ್ವಕವಾಗಿಯೇ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ, ತಪ್ಪು ಮಾಡಲಾಗಿದೆ. ಕೋರ್ಟ್ ಮುಂದೆ ನೀಡಲಾದ ಹೇಳಿಕೆಗಳನ್ನು ಹಿಂಪಡೆಯಲಾಗುವುದು ಎಂದು ದೃಢೀಕರಿಸಿ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಈ ವಿಚಾರದಲ್ಲಿ ತನ್ನದೇ ಆದ ಆದೇಶ ಹೊರಡಿಸಲಿದೆ ಎಂದು ಆಯುಕ್ತರಿಗೆ ತಾಕೀತು ಮಾಡಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು.