ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ನಡೆದ ಡಿಜಿಟಲ್‌ ಮೌಲ್ಯಮಾಪನ’ದಲ್ಲಿ ಅಕ್ರಮಗಳು ನಡೆದಿವೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ. 

ಬೆಂಗಳೂರು(ಫೆ.29): ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ನಡೆದ 2015ನೇ ಸಾಲಿನ ಎ ಮತ್ತು ಬಿ ಶ್ರೇಣಿಯ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಅನುಸರಿಸಲಾದ ‘ಡಿಜಿಟಲ್‌ ಮೌಲ್ಯಮಾಪನ’ದಲ್ಲಿ ಅಕ್ರಮಗಳು ನಡೆದಿವೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ ದೂರುದಾರರು ಅರ್ಜಿ ವಾಪಸು ಪಡೆದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ರಾಜ್ಯದೆಲ್ಲೆಡೆ ಮಹದಾಯಿ ರೈತರಿಂದ ಸಂಭ್ರಮಾಚರಣೆ

‘ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಡಿಜಿಟಿಲ್‌ ಮೌಲ್ಯಮಾಪನ ಪದ್ಧತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೀರಿ. ನೀವು ಡಿಜಿಟಲ್‌ ವ್ಯವಸ್ಥೆಯ ತಜ್ಞರೇ? ತಜ್ಞರು ಅಲ್ಲದಿದ್ದರೆ, ಡಿಜಿಟಲ್‌ ಮೌಲ್ಯಮಾಪನದಲ್ಲಿ ಲೋಪಗಳಿವೆ ಎಂದು ನಿಮಗೆ ಹೇಳಿದವರು ಯಾರು? ಅದಕ್ಕೆ ನಿಮ್ಮ ಬಳಿ ಯಾವ ಪುರಾವೆ ಇದೆಯೇ?’ ಎಂದು ಪ್ರಶ್ನೆ ಮಾಡಿತು.

‘ಎಲ್ಲಾ ವ್ಯವಸ್ಥೆಗಳಲ್ಲಿ ಸ್ವಲ್ಪ ಮಟ್ಟಿಗೆ ಲೋಪಗಳು ಇರುತ್ತವೆ. ಅದರಿಂದ ಯಾರೋ ಬಂದು ಅರ್ಜಿ ಸಲ್ಲಿಸಿದ್ದ ಮಾತ್ರಕ್ಕೆ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲು ಉದ್ಯೋಗಕಾಂಕ್ಷಿಗಳ ಬದುಕಿನೊಂದಿಗೆ ಚೆಲ್ಲಾಟವಾಡಲು ಆಗುತ್ತದೆಯೇ? ಡಿಜಿಟಲ್‌ ಮೌಲ್ಯಮಾಪನದಲ್ಲಿ ತಪ್ಪುಗಳು ಅಥವಾ ಅಕ್ರಮಗಳು ನಡೆದಿವೆ. ಇಲ್ಲವೇ ನಡೆದಿರುವ ಸಾಧ್ಯತೆಗಳಿವೆ ಎಂದು ಕಲ್ಪಿಸಿಕೊಂಡು ಹಾಗೂ ಅನುಮಾನ ವ್ಯಕ್ತಪಡಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಕಟುವಾಗಿ ನುಡಿಯಿತು.

'ಮಹದಾಯಿ ನೀರು ಹಂಚಿಕೆ ಸಂಪೂರ್ಣ ತೃಪ್ತಿ ತಂದಿಲ್ಲ'

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ದುರಪಯೋಗ ಪ್ರವೃತ್ತಿ ಕೊನೆಯಾಗಬೇಕು. ಇದು ದಂಡ ಹಾಕಲು ಅರ್ಹ ಪ್ರಕರಣ. ಹೀಗಾಗಿ, ಅರ್ಜಿ ವಾಪಸ್‌ ಪಡೆದುಕೊಳ್ಳುತ್ತೀರಾ? ಅಥವಾ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ದುರುಪಯೋಗ ಎಂದು ಅಭಿಪ್ರಾಯ ದಾಖಲಿಸಿ ಅರ್ಜಿ ವಜಾಗೊಳಿಸಬೇಕೇ?’ ಎಂದು ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು ಕೇಳಿತು.

ಅರ್ಜಿದಾರರ ಪರ ವಕೀಲರು ಉತ್ತರಿಸಿ, ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿತು.