ನಮಾಜ್‌ ವೇಳೆ ಮಿತಿ ಮೀರಿದ ಶಬ್ದ: ಲೈಸೆನ್ಸ್ ಕೇಳಿದ ಕೋರ್ಟ್‌

ನಮಾಜ್‌ ಮಾಡುವ ವೇಳೆ ಧ್ವನಿವರ್ಧಕ ಬಳಸಿ ಮಿತಿಮೀರಿದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಿಚಾರ ಆರೋಪ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಸಲು ಪಡೆದಿರುವ ಪರವಾನಗಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಸೀದಿ ಮುಖ್ಯಸ್ಥರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

high sound during  namaz high court asks to produce licence copy

ಬೆಂಗಳೂರು[ಫೆ.11]: ಗೋವಿಂದರಾಜ ನಗರದ ಕಾರ್ಪೊರೇಷನ್‌ ಕಾಲೋನಿಯ ಆಯೆಷಾ ಮಸೀದಿಯಲ್ಲಿ ನಮಾಜ್‌ ಮಾಡುವ ವೇಳೆ ಧ್ವನಿವರ್ಧಕ ಬಳಸಿ ಮಿತಿಮೀರಿದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಿಚಾರ ಆರೋಪ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಸಲು ಪಡೆದಿರುವ ಪರವಾನಗಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಸೀದಿ ಮುಖ್ಯಸ್ಥರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಮಸೀದಿಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಯಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಸ್ಥಳೀಯ ನಿವಾಸಿ ಸುಮಂಗಳ ಎ. ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.

ಇಂಧನದ ಮೇಲಿನ ತೆರಿಗೆ ಇಳಿಕೆ?

ಜತೆಗೆ, ಆಯೆಷಾ ಮಸೀದಿಯ ಧ್ವನಿವರ್ಧಕಗಳಿಂದ ನಿಗದಿತ ಪ್ರಮಾಣಕ್ಕಿಂತ ಧ್ವನಿ ತರಂಗಗಳ ತೀವ್ರತೆ ಹೆಚ್ಚಿದ್ದರೆ, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ವಿಜಯನಗರ ಠಾಣಾ ಪೊಲೀಸರಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿತು.

ಆಯೆಷಾ ಮಸೀದಿಯಲ್ಲಿ ನಿತ್ಯ ಐದು ಬಾರಿ ನಮಾಜ್‌ ಮಾಡಲಾಗುತ್ತಿದೆ. ಈ ವೇಳೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಅವುಗಳ ಬಳಕೆಯಿಂದ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಪ್ರಾರ್ಥನೆ ಮಾಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ, ಪ್ರಾರ್ಥನೆ ವೇಳೆ ಶಬ್ದ ಮಾಲಿನ್ಯ ಉಂಟಾಗಿ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿರುವುದನ್ನು ಆಕ್ಷೇಪಿಸುತ್ತಿದ್ದೇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕ್ರಮ ಕೈಗೊಳ್ಳಲು ಕೋರಿ ಪೊಲೀಸರಿಗೆ ಮನವಿ ಮಾಡಲಾಗಿತ್ತು. ಆದರೆ, ಧ್ವನಿವರ್ಧಕ ಬಳಸಲು ಮಸೀದಿಯವರಿಗೆ ಸರ್ಕಾರವೇ ಅನುಮತಿ ನೀಡಿದೆ. ಮೇಲಾಗಿ ಇದೊಂದು ಧಾರ್ಮಿಕ ವಿಚಾರದ ಭಾಗವಾಗಿದ್ದು, ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಮಸೀದಿಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ನಿಯಂತ್ರಿಸಲು ಪೊಲೀಸರು ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Latest Videos
Follow Us:
Download App:
  • android
  • ios