ಬೆಂಗಳೂರು [ಆ.24]:  ನಗರ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತು ಅಳವಡಿಕೆ ನಿಷೇಧಿಸುವ ದಿಸೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೂಪಿಸಿರುವ ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ ಅನುಷ್ಠಾನಗೊಳಿಸುವ ಸಂಬಂಧ ಶೀಘ್ರ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ನಗರದಲ್ಲಿ ಅಕ್ರಮ ಜಾಹೀರಾತುಗಳ ಹಾವಳಿ ತಡೆಯಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಸೇರಿದಂತೆ ಇತರರು ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿದ ದಿನಾಂಕ ಮತ್ತು ಆ ನಂತರದ ಬೆಳವಣಿಗೆಗಳ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಬಿಬಿಎಂಪಿಯು ಬೈಲಾ ಅನುಮೋದನೆಗಾಗಿ 2018ರ ಡಿ.31ರಂದು ಸರ್ಕಾರಕ್ಕೆ ಕಳುಹಿಸಿತ್ತು. ಅದನ್ನು 2019ರ ಜ.1ರಂದು ಸರ್ಕಾರ ಸ್ವೀಕರಿಸಿತ್ತು. ಫೆ.19ರಂದು ಬಿಬಿಎಂಪಿಯಿಂದ ಕೆಲ ಸ್ಪಷ್ಟನೆ ಕೇಳಿತ್ತು. ಅದರಂತೆ ಪಾಲಿಕೆಯು ಸರ್ಕಾರಕ್ಕೆ ಸ್ಪಷ್ಟನೆ ಕಳುಹಿಸಿತ್ತು ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಬಿಬಿಎಂಪಿ ಕಳುಹಿಸಿದ ಬೈಲಾವನ್ನು 2019ರ ಜ.1ರಂದು ಸರ್ಕಾರ ಸ್ವೀಕರಿಸಿದೆ. ಅದರಂತೆ 90 ದಿನಗಳಲ್ಲಿ ಬೈಲಾ ಅನುಮೋದನೆ ಕುರಿತು ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ, ಸರ್ಕಾರ ಮಾತ್ರ ನಿಗದಿತದ ಸಮಯದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದಾಗಿ ಕರ್ನಾಟಕ ಮುನ್ಸಿಪಲ್‌ ಕಾಯ್ದೆಯ ಸೆಕ್ಷನ್‌ 425ರ ಅನುಸಾರ ನಿಗದಿತ ಸಮಯದಲ್ಲಿ ಬೈಲಾ ಅನುಮೋದಿಸದೇ ಹೋದರೆ, ಡೀಮ್ಡ್ ಅನುಮೋದನೆ ದೊರೆತಿರುವುದಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿತು.

ನಂತರ ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ಗೆ ಅನುಮೋದನೆ ದೊರೆತಿದೆ ಎಂದು ಪರಿಗಣಿಸಿ ಶೀಘ್ರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿತು. ಇನ್ನೂ ಬಿಬಿಎಂಪಿ ಕಳುಹಿಸಿದ ಬೈಲಾಗೆ ಅನುಮೋದನೆ ನೀಡಲು ನಿರಾಕರಿಸಿ ಕಳೆದ ಜುಲೈ 31ರಂದು ಸರ್ಕಾರ ಆದೇಶಿಸಿದೆ. ಆದರೆ, ಬೈಲಾ ಕುರಿತು ಮೂರು ತಿಂಗಳಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣ ಸರ್ಕಾರ ಜುಲೈ 31ರಂದು ಹೊರಡಿಸಿದ ಆದೇಶವು ಜಾರಿಯಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಎರಡು ವಾರ ಕಾಲವಕಾಶ

ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸಿರುವವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.