Asianet Suvarna News Asianet Suvarna News

ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ!

ತಾನು ಹೊರಡಿಸಿದ ಆದೇಶ ಪಾಲಿಸದೆ ಇರುವ ಬಿಬಿಎಂಪಿ ವಿರುದ್ಧ ಹೈ ಕೋರ್ಟ್ ಕೆಂಡಾಮಂಡಲವಾಗಿದೆ. ರಸ್ತೆ ಗುಂಡಿ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದೆ. 

High court Slams BBMP For Potholes
Author
Bengaluru, First Published Jan 21, 2020, 8:07 AM IST

ಬೆಂಗಳೂರು [ಜ.21]:  ನಗರದ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ದೇಶಿಸಿ ತಾನು ಹೊರಡಿಸಿದ ಆದೇಶ ಪಾಲಿಸದೆ, ರಾಜಕಾರಣಿಗಳೊಂದಿಗೆ ಚರ್ಚಿಸಿ, ಆದೇಶವನ್ನು ಕೌನ್ಸಿಲ್‌ ಸಭೆ ಮುಂದಿಡಲು ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರನ್ನು ಹೈಕೋರ್ಟ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ರಾಜಕಾರಣಿಗಳೊಂದಿಗೆ ಯಾಕೆ ಸಭೆ ನಡೆಸಲಾಯಿತು, ಅದರ ಉದ್ದೇಶವೇನು, ಸಭೆಯಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳ ಹೆಸರು ಮತ್ತು ವಿಳಾಸದ ವಿವರಗಳನ್ನು ಜ.30ರೊಳಗೆ ಒದಗಿಸಬೇಕು. ಅದನ್ನು ಪರಿಗಣಿಸಿ ಕೋರ್ಟ್‌ ಆದೇಶ ಉಲ್ಲಂಘಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಹೈಕೋರ್ಟ್‌ ತಾಕೀತು ಮಾಡಿದೆ.

ನಗರದ ರಸ್ತೆಗಳು ಗುಂಡಿಯಿಂದ ಹದಗೆಟ್ಟಿವೆ ಎಂದು ಆರೋಪಿಸಿ ಕೋರಮಂಗಲದ ವಿಜಯ್‌ ಮೆನನ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸೋಮವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಬೆಂಗಳೂರು : ಮನೆ ನಿರ್ಮಿಸುವವರೇ ಎಚ್ಚರ!...

ನಗರದ ರಸ್ತೆ ಗುಂಡಿಗಳಿಂದ ಉಂಟಾದ ಆಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಈ ಸಂಬಂಧ ಜಾಹೀರಾತು ಪ್ರಕಟಣೆ ನೀಡಬೇಕು ಎಂದು ಕಳೆದ 2019ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಅದನ್ನು 2020ರ ಜ.9ರಂದು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ತದ ನಂತರವೂ ಹೈಕೋರ್ಟ್‌ ಆದೇಶ ಜಾರಿಗೆ ಕ್ರಮ ಜರುಗಿಸಲಿಲ್ಲ. ಬದಲಾಗಿ ಬಿಬಿಎಂಪಿ ಆಯುಕ್ತರು, ಮೇಯರ್‌ ಹಾಗೂ ಉಪ ಮೇಯರ್‌ ಸೇರಿದಂತೆ ಇತರೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಬಳಿಕ ಕೋರ್ಟ್‌ ಆದೇಶ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಲು ನಿರ್ಣಯ ಕೈಗೊಂಡಿದ್ದರು.

ಸೋಮವಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಸುಪ್ರೀಂ ಕೊರ್ಟ್‌ ಮೇಲ್ಮನವಿಯನ್ನು ವಜಾಗೊಳಿಸಿದ ನಂತರವೂ ಹೈಕೋರ್ಟ್‌ ಆದೇಶ ಜಾರಿಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕನಿಷ್ಠ ಪಕ್ಷ ನ್ಯಾಯಾಲಯಕ್ಕೆ ಕ್ಷಮೆ ಕೋರುವ ಸೌಜನ್ಯವೂ ಇಲ್ಲ. ಮುಖ್ಯವಾಗಿ ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಬಿಬಿಎಂಪಿಯ ಕರ್ತವ್ಯ. ಅದು ಬಿಟ್ಟು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಟೀಕಿಸಿತು.

ಬಿಬಿಎಂಪಿ ವಕೀಲ ಕೆ.ಎನ್‌.ಪುಟ್ಟೇಗೌಡ ಉತ್ತರಿಸಿ, ಆಯುಕ್ತರು ಮತ್ತು ಬಿಬಿಎಂಪಿಗೆ ನ್ಯಾಯಾಲಯದ ಆದೇಶದ ಬಗ್ಗೆ ಅತಿ ಹೆಚ್ಚು ಗೌರವ ಇದೆ. ನ್ಯಾಯಾಲಯದ ಆದೇಶ ಪಾಲನೆ ಮಾಡದಿರಲು ಸಭೆ ನಡೆಸಿ ಚರ್ಚಿಸಿಲ್ಲ. ಆದೇಶ ಕುರಿತು ಎಲ್ಲಾ ಚುನಾಯಿತ ಸದಸ್ಯರ ಗಮನಕ್ಕೆ ತರಲು ಮತ್ತು ಆದೇಶ ಜಾರಿಗೆ ಮಾರ್ಗಸೂಚಿ ರಚಿಸಲು ಸಭೆ ನಡೆಸಲಾಗಿತ್ತು ಎಂದು ಸಮಜಾಯಿಷಿ ನೀಡಿದರು.

ಅದನ್ನು ಒಪ್ಪದ ನ್ಯಾಯಪೀಠ, ಕೋರ್ಟ್‌ ಆದೇಶ ಪಾಲನೆ ಮಾಡಬೇಕು ಎಂಬ ಉದ್ದೇಶವು ನಿಮ್ಮದಾಗಿದ್ದರೆ ಸುಪ್ರೀಂ ಕೋರ್ಟ್‌ ಮೇಲ್ಮನವಿ ವಜಾಗೊಳಿಸಿದ ಕೂಡಲೇ ಹೈಕೋರ್ಟ್‌ ಆದೇಶ ಜಾರಿಗೆ ಮುಂದಾಗಬಹುದಿತ್ತು. ಆದರೆ, ಆಯುಕ್ತರು ಕೋರ್ಟ್‌ ಆದೇಶ ಜಾರಿ ಮಾಡಲು ಇಷ್ಟವಿಲ್ಲ. ಅದಕ್ಕಾಗಿ ರಾಜಕಾರಣಿಗಳ ಬೆಂಬಲ ಬೇಕಿತ್ತು. ಹೀಗಾಗಿ, ರಾಜಕಾರಣಿಗಳೊಂದಿಗೆ ಸಭೆ ನಡೆಸಿದ್ದಾರೆ. ಹೈಕೋರ್ಟ್‌ನ ಯಾವ ಆದೇಶವನ್ನೂ ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ ಎಂದು ಕೆಂಡಾಮಂಡಲವಾಯಿತು.

ಅಲ್ಲದೆ, ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದವರೋ ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಲು ಇದು ಸರಿಯಾದ ಸಮಯ. ಅವರು ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಲಿ. ಅವರಿಗೂ ಪಾಠ ಕೂಡ ಆಗಲಿ. ನ್ಯಾಯಾಲಯವು ಈ ಕೆಲಸ ಮಾಡದೆ ಹೋದರೆ ತಾನು ಸಂವಿಧಾನಬದ್ಧವಾಗಿ ನಿರ್ವಹಿಸಬೇಕಾದ ಕರ್ತವ್ಯಗಳಲ್ಲಿ ವಿಫಲವಾದಂತೆ ಎಂದು ಕಟುವಾಗಿ ನುಡಿಯಿತು.

 ಗುಂಡಿ ಮುಕ್ತ ರಸ್ತೆ ನಾಗರಿಕರ ಹಕ್ಕು

ನಗರದಲ್ಲಿನ 108 ರಸ್ತೆಗಳ 401.8 ಕಿಲೋ ಮೀಟರ್‌ ರಸ್ತೆಗಳು ಹದಗೆಟ್ಟಿವೆ. ಅವುಗಳನ್ನು ದುರಸ್ತಿ ಮಾಡಲಾಗುವುದು ಎಂದು ತಿಳಿಸಿ ಕಳೆದ ಬಾರಿ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಎಷ್ಟುದುರಸ್ತಿ ಮಾಡಲಾಗಿದೆ? ಎಷ್ಟುಬಾಕಿ ಇದೆ? ಎಂಬ ವಿಚಾರಗಳ ಬಗ್ಗೆ ಇಂದು ಸಲ್ಲಿಸಿದ ವರದಿಯಲ್ಲಿ ಹೇಳಿಲ್ಲ. ಗುಂಡಿರಹಿತ ರಸ್ತೆಗಳನ್ನು ಹೊಂದುವುದು ನಾಗರಿಕರ ಮೂಲಭೂತ ಹಕ್ಕು. ಅದನ್ನು ಪಾಲಿಕೆ ಒದಗಿಸಿ ಕೊಡಬೇಕು. ಆದ್ದರಿಂದ ಕಳೆದ ಜುಲೈನಲ್ಲಿ ನೀಡಿದ್ದ ಆದೇಶದಂತೆ 108 ರಸ್ತೆಗಳ 401 ಕಿಮೀ ರಸ್ತೆಯನ್ನು ಗುಂಡಿ ರಹಿತಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Follow Us:
Download App:
  • android
  • ios