ಬೆಂಗಳೂರು(ಫೆ.15): ನಿಗದಿತ ಅರ್ಹತೆ ಹೊಂದಿರದಿದ್ದರೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಶಿಫಾರಸ್ಸು ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯ ಸ್ಥಾನಕ್ಕೆ ರುದ್ರೇಗೌಡ ಅವರನ್ನು ನೇಮಿಸಿದ ಕ್ರಮದ ಬಗ್ಗೆ ಹೈಕೋರ್ಟ್‌ ತೀವ್ರ ಅಸಮಾಧಾನದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಮೂರು ವಾರಗಳಲ್ಲಿ ಜಲಮಂಡಳಿಯ ಆಡಳಿತ ಮಂಡಳಿಯನ್ನು ಪುನರ್‌ ರಚಿಸಲಾಗುವುದು ಎಂದು ತಿಳಿಸಿದೆ.

ರುದ್ರೇಗೌಡ ಅವರ ನೇಮಕಾತಿ ಆದೇಶ ಪ್ರಶ್ನಿಸಿ ಜಲಮಂಡಳಿಯ ಎಸ್ಸಿ-ಎಸ್ಟಿನೌಕರರ ಕಲ್ಯಾಣ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ರುದ್ರೇಗೌಡ ಅವರ ನೇಮಕಾತಿಯ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕೇಂದ್ರ ಸಚಿವ ಡಿ.ವಿ. ಸದಾದನಂದ ಗೌಡ ಅವರ ಶಿಫಾರಸ್ಸಿನಂತೆ ಜಲಮಂಡಳಿ ಸದಸ್ಯರ ಹುದ್ದೆಗೆ ರುದ್ರೇಗೌಡ ಅವರನ್ನು ನೇಮಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಆದರೆ, ರುದ್ರೇಗೌಡ ಅವರಿಗೆ ಜಲಮಂಡಳಿಯ ಸದಸ್ಯರಾಗಲು ನಿಗದಿತ ಅರ್ಹತೆ ಇಲ್ಲ. ಅವರ ನೇಮಕಾತಿ ಮುನ್ನ ಅರ್ಹತೆ ಪರಿಶೀಲಿಸಿದ ಬಗ್ಗೆ ಸರ್ಕಾರದ ಆದೇಶದಲ್ಲಿ ಉಲ್ಲೇಖವಿಲ್ಲ. ಆದ್ದರಿಂದ ಅವರ ನೇಮಕಾತಿ ಬಗ್ಗೆ ಸಂಜೆ 4.45ರೊಳಗೆ ಸರ್ಕಾರ ವಿವರಣೆ ನೀಡಬೇಕು. ಇಲ್ಲವಾದರೆ ಕೇಂದ್ರ ಸಚಿವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಬಿಜೆಪಿ ನಾಯಕರಿಗೆ ಕೋರ್ಟ್ ಬಿಗ್ ಶಾಕ್: ಅನಂತಕುಮಾರ್ ಹೆಗಡೆ, ಸಿಟಿ ರವಿಗೆ ಸಂಕಷ್ಟ

ಸಂಜೆ 4.45ಕ್ಕೆ ಅರ್ಜಿ ಮತ್ತೆ ವಿಚಾರಣೆಗೆ ಕರೆದಾಗ ಸರ್ಕಾರಿ ವಕೀಲರು ಹಾಜರಾಗಿ, ಜಲಮಂಡಳಿಯ ಆಡಳಿತ ಮಂಡಳಿಯನ್ನು ಮೂರು ವಾರದಲ್ಲಿ ಪುನರ್‌ ರಚಿಸಲಾಗುವುದು ಎಂದು ತಿಳಿಸಿದರು. ಆ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು.

ರುದ್ರೇಗೌಡ ಅವರನ್ನು ಜಲಮಂಡಳಿ ಸದಸ್ಯ ಸ್ಥಾನಕ್ಕೆ ನೇಮಿಸಲಾಗಿದೆ. ಆದರೆ, ಸದಸ್ಯರಾಗಲು ಅವರು ನಿಗದಿತ ಅರ್ಹತೆ ಹೊಂದಿಲ್ಲ. ಕೇವಲ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಶಿಫಾಸ್ಸಿನಂತೆ ಮುಖ್ಯಮಂತ್ರಿಗಳು ರುದ್ರೇಗೌಡ ಅವರನ್ನು ನೇಮಕ ಮಾಡಿ ಆದೇಶಿಸಿದ್ದು, ಅದನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು.