ಬೆಂಗಳೂರು [ಮಾ.12]:  ಕುಡಿದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಆರೋಪದ ಮೇಲೆ ಕಳೆದ 235 ದಿನಗಳಿಂದ ಡಿಅಡಿಕ್ಷನ್‌ ಸೆಂಟರ್‌ನಲ್ಲಿ ಬಲವಂತವಾಗಿ ಇರಿಸಿದ್ದ ವ್ಯಕ್ತಿಯೊಬ್ಬನನ್ನು ಬಿಡುಗಡೆ ಮಾಡಲು ಹೈಕೋರ್ಟ್‌ ಆದೇಶಿಸಿತು.

ರವಿ (54) ಎಂಬಾತನನ್ನು ಆತನ ಸಹೋದರಿಯೇ ಕೆಂಗೇರಿಯ 4ಎಸ್‌ ಆಲ್ಕೋಹಾಲ್‌ ಆ್ಯಂಡ್‌ ಸಬ್‌ಸ್ಟ್ಯಾನ್ಸ್‌ ಅಬ್ಯೂಸ್‌ ಟ್ರೀಟ್ಮೆಂಟ್‌ ಆ್ಯಂಡ್‌ ರಿಹ್ಯಾಬಿಲಿಟೇಷನ್‌ ಸೆಂಟರ್‌ ದಾಖಲಿಸಿದ್ದರು,ಕೂಡಲೇ ರವಿಯನ್ನು ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಕೋರಿ ಬಂಧಿತನ ಸಂಬಂಧಿ ಟಿ.ಆರ್‌.ಸಚಿನ್‌ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ನ ಹಿಂದಿನ ಆದೇಶದಂತೆ ಜ್ಞಾನಭಾರತಿ ಪೊಲೀಸರು ರವಿ ಅವರನ್ನು ಡಿಅಡಿಕ್ಷನ್‌ ಸೆಂಟರ್‌ನಿಂದ ಕರೆತಂದು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ಖುದ್ದು ರವಿಯೇ ಹೇಳಿಕೆ ನೀಡಿ, ‘ಸ್ವಾಮಿ ನಾನು 235 ದಿನಗಳಲ್ಲಿ ಡಿಅಡಿಕ್ಷನ್‌ ಸೆಂಟರ್‌ ಅಲ್ಲಿದ್ದೇನೆ. ದಯವಿಟ್ಟು ನನ್ನನ್ನು ಬಿಡುಗಡೆ ಮಾಡಬೇಕು’ ಎಂದು ಕೋರಿದರು.ಆತನ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಮತ್ತು ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣನವರ್‌ ಅವರಿದ್ದ ವಿಭಾಗೀಯ ಪೀಠ, ಕೂಡಲೇ ರವಿಯನ್ನು ಬಿಡುಗಡೆ ಮಾಡಬೇಕು ಎಂದು ಜ್ಞಾನಭಾರತಿ ಠಾಣಾ ಪೊಲೀಸರಿಗೆ ಆದೇಶಿಸಿತು.

ರವಿ ಅಕ್ಕನ ಹಾಜರಾತಿಗೆ ಸೂಚನೆ:  ಹಣ ಹಾಗೂ ಆಸ್ತಿಗಾಗಿ ನನ್ನ ಅಕ್ಕ ನನ್ನನ್ನು ಡಿಅಡಿಕ್ಷನ್‌ ಸೆಂಟರ್‌ಗೆ ಸೇರಿಸಿದ್ದಾರೆ ಎಂದು ರವಿ ಪೊಲೀಸರ ಮುಂದೆ ನೀಡಿದ ಹೇಳಿಕೆಯ ಪ್ರತಿಯನ್ನು ಜ್ಞಾನಭಾರತಿ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಬಸವರಾಜು ಹೈಕೋರ್ಟ್‌ಗೆ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದನ್ನು ಪರಿಗಣಿಸಿದ ಹೈಕೋರ್ಟ್‌, ಮುಂದಿನ ವಿಚಾರಣೆ ವೇಳೆ ರವಿಯ ಸಹೋದರಿ ಆರ್‌.ಶೈಲಾ ಅವರನ್ನು ಕೊರ್ಟ್‌ಗೆ ಹಾಜರುಪಡಿಸುವಂತೆ ಯಶವಂತಪುರ ಠಾಣಾ ಪೊಲೀಸರಿಗೆ ನಿರ್ದೇಶಿಸಿತು. ಬಳಿಕ ಅರ್ಜಿ ವಿಚಾರಣೆಯ್ನು ಮಾಚ್‌ರ್‍ 16ಕ್ಕೆ ಮುಂದೂಡಿದೆ.

ಹಣ ಕೇಳಿದ್ದಕ್ಕೆ ಡಿಅಡಿಕ್ಷನ್‌ ಸೆಂಟರ್‌ಗೆ ಸೇರಿಸಿದ ಅಕ್ಕ!

ನನಗೆ ನಮ್ಮ ತಂದೆ ನಿವೇಶನ ನೀಡಿದ್ದರು. ಅದು ಯಶವಂತಪುರದಲ್ಲಿದೆ. ಆ ನಿವೇಶನದ ಒಂದು ಭಾಗವನ್ನು ಮಾರಾಟ ಮಾಡಿದ್ದರಿಂದ 54 ಲಕ್ಷ ಹಣ ಬಂದಿತ್ತು. ಅದನ್ನು ನನ್ನ ಹಾಗೂ ಅಕ್ಕನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಡಲಾಗಿದೆ. ನಾನು ಮದ್ಯ ಸೇವನೆ ಮಾಡುತ್ತೇನೆ ಎಂಬುದು ನಿಜ. ಆದರೆ, ಮದ್ಯ ಸೇವಿಸಿ ಯಾರಿಗೂ ತೊಂದರೆ ನೀಡುವುದಿಲ್ಲ. ಆದರೆ, ನಾನು ಹಣಕ್ಕೆ ಬೇಡಿಕೆ ಇಟ್ಟಾಗೆಲ್ಲಾ ನನ್ನನ್ನು ಅಕ್ಕ ಡಿಅಡಿಕ್ಷನ್‌ ಸೆಂಟರ್‌ಗೆ ಸೇರಿಸುತ್ತಾಳೆ ಎಂದು ಪೊಲೀಸರ ಮುಂದೆ ರವಿ ಹೇಳಿಕೆ ನೀಡಿದ್ದಾನೆ.