ಸರ್ಕಾರಿ ಜಾಗದಲ್ಲಿ ಖಾಸಗಿ ಕಟ್ಟಡ: ನಕ್ಷೆ ಮಂಜೂರು ತನಿಖೆಗೆ ಹೈಕೋರ್ಟ್ ಆದೇಶ
ಸರ್ಕಾರ, ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ, ವರದಿ ನೀಡಲು ಡೀಸಿಗೆ ಕೋರ್ಟ್ ಸೂಚನೆ
ಬೆಂಗಳೂರು(ಅ.28): ನಗರದ ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿ ಖಾಸಗಿ ಕಂಪನಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿ ವಸತಿ ಸಮುಚ್ಛಯ ನಿರ್ಮಿಸಿರುವ ಸಂಬಂಧ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರಿ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಿರುವ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ. ಪ್ರಕರಣದಲ್ಲಿ ನಡೆದಿರುವ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಕೊಡಿಗೆಹಳ್ಳಿಯ ನಿವಾಸಿ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಯಲಹಂಕ ತಹಸೀಲ್ದಾರ್ ಅನಿಲ್ ಕುಮಾರ್ ವರದಿ ಸಲ್ಲಿಸಿ, ಕೊಡಿಗೆಹಳ್ಳಿಯ ಸರ್ವೇ ನಂಬರ್ 209/3, 209/4 ಮತ್ತು 209/7 ಮತ್ತು ಕೋತಿ ಹೊಸಹಳ್ಳಿಯ ಸರ್ವೇ ನಂಬರ್ 39ರಲ್ಲಿನ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಖಾಸಗಿ ಕಂಪನಿಗಳು ವಸತಿ ಕಟ್ಟಡ ನಿರ್ಮಿಸಿವೆ. ಅನಧಿಕೃತ ಒತ್ತುವರಿದಾರರಿಗೆ ಒತ್ತುವರಿ ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಿದ್ದು, ಕೆಲ ಒತ್ತುವರಿಯನ್ನೂ ಈಗಾಗಲೇ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ತಹಸೀಲ್ದಾರ್ ಅವರ ನೋಟಿಸ್‌ಗೆ ಒತ್ತುವರಿದಾರರಿಗೆ ನೋಟಿಸ್ ಪ್ರತಿಕ್ರಿಯೆ ಸಲ್ಲಿಸಬೇಕು. ಒತ್ತುವರಿದಾರರ ಅಹವಾಲು ಆಲಿಸಿದ ನಂತರ ತಹಸೀಲ್ದಾರ್ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಗ್ರಾಚ್ಯುಯಿಟಿ ದುಡ್ಡಲ್ಲಿ ಸಾಲ ಕಡಿತ ಮಾಡುವಂತಿಲ್ಲ: ಹೈಕೋರ್ಟ್
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಎನ್‌ಟಿಐ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ವಸತಿ ಕಟ್ಟಡ ನಿರ್ಮಿಸಿದೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳಳೇ ನಕ್ಷೆ ಮಂಜೂರು ಮಾಡಿದ್ದಾರೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಇದು ಅಧಿಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರಿ ಪ್ರಾಧಿಕಾರಗಳ ನಡುವೆ ಸೂಕ್ತ ಸಹಕಾರ ಇಲ್ಲದಿರುವುದನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ನಕ್ಷೆ ಮಂಜೂರಾತಿ ನೀಡಿರುವ ಅಧಿಕಾರಿಗಳ ವಿಚಾರಣೆ ನಡೆಸಬೇಕು. ಪ್ರಕರಣ ಕುರಿತ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕಾರಿಗಳು ತಪ್ಪು ಎಸಗಿರುವುದನ್ನು ಗಮನಿಸಿದಲ್ಲಿ ಆ ಕುರಿತು ನಾಲ್ಕು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ರಾತ್ರೋರಾತ್ರಿ ಕಟ್ಟಡ ನಿರ್ಮಾಣವಾಗುತ್ತಾ?
ವಿಚಾರಣೆ ವೇಳೆ ಸರ್ಕಾರದ ಜಾಗದಲ್ಲಿ ಖಾಸಗಿ ಕಂಪನಿಗಳು ಬೃಹತ್ ವಸತಿ ಸಮುಚ್ಛಯ ನಿರ್ಮಿಸಿರುವುದಕ್ಕೆ ಅವಕಾಶ ಕಲ್ಪಿಸಿರುವ ಅಧಿಕಾರಿಗಳ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಕಟ್ಟಡ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ಪ್ರಕರಣವು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಕಟ್ಟಡ ರಾತ್ರೋರಾತ್ರಿ ನಿರ್ಮಾಣವಾಯಿತೇ? ಕಟ್ಟಡ ನಿರ್ಮಾಣಕ್ಕೆ ಸಮಯ ಬೇಕಿರುತ್ತದೆಯಲ್ಲವೇ? ಆದರೂ ಅಧಿಕಾರಿಗಳು ಗಮನ ಹರಿಸದಿರುವುದು ಸರಿಯಲ್ಲ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆಗ ಜಾಗ/ನಿವೇಶನದ ಕುರಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುವುದಿಲ್ಲವೇ? ನಗರದಲ್ಲಿ ಕಟ್ಟಡ ನಿರ್ಮಾಣದ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ ನಡೆಸುವುದಿಲ್ಲವೇ? ಅಧಿಕಾರಿಗಳು ಕಚೇರಿಯಲ್ಲಿ ಮೂಕ ಪ್ರೇಕ್ಷರಾಗಿಯೇ ಕೂತಿರುತ್ತಾರೆಯೇ ಎಂದು ಪ್ರಶ್ನಿಸಿತು.
ಅಲ್ಲದೆ, ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳೇ ನಕ್ಷೆ ಮಂಜೂರಾತಿ ನೀಡಿರುವುದು ನ್ಯಾಯಾಲಯಕ್ಕೆ ಬಹಳ ಆಶ್ಚರ್ಯ ಉಂಟು ಮಾಡಿದೆ. ಇನ್ನು ಒತ್ತುವರಿದಾರರ ವಿರುದ್ಧ ಈವರೆಗೂ ಕ್ರಮ ಜರುಗಿಸಿಲ್ಲ. ಇದು ಆಡಳಿತ ಯಂತ್ರ ಕಾರ್ಯ ನಿರ್ವಹಿಸುವ ಪರಿ ಎಂದು ಪ್ರಶ್ನಿಸುವ ಮೂಲಕ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯನ್ಯಾಯಮೂರ್ತಿಗಳು ಚಾಟಿ ಬೀಸಿದರು.