ಗ್ರಾಚ್ಯುಯಿಟಿ ದುಡ್ಡಲ್ಲಿ ಸಾಲ ಕಡಿತ ಮಾಡುವಂತಿಲ್ಲ: ಹೈಕೋರ್ಟ್‌

ಗೃಹ ಸಾಲಕ್ಕೆ ಗ್ರಾಚ್ಯುಯಿಟಿ ಮೊತ್ತ ಹೊಂದಾಣಿಕೆ ಮಾಡಿದ್ದ ಬ್ಯಾಂಕ್‌ ಕ್ರಮ ರದ್ದು: ಹೈಕೋರ್ಟ್‌

Loan Cannot be Deducted from Gratuity Money Says High Court of Karnataka grg

ಬೆಂಗಳೂರು(ಅ.26): ಉದ್ಯೋಗಿಯ ಸಾಲದ ಬಾಕಿಯನ್ನು ಆತನ ಗ್ರಾಚ್ಯುಯಿಟಿ ಹಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ದುರ್ನಡತೆ ಆರೋಪದ ಮೇಲೆ ಖಾಸಗಿ ಬ್ಯಾಂಕ್‌ನ ಗುಮಾಸ್ತರೊಬ್ಬರು ಕಡ್ಡಾಯ ನಿವೃತ್ತಿ ಶಿಕ್ಷೆಗೆ ಒಳಪಟ್ಟಿದ್ದರು. ಆದರೆ, ಅವರು ಪಡೆದಿದ್ದ ಗೃಹ ಸಾಲಕ್ಕೆ ಅವರ ಗ್ರಾಚ್ಯುಯಿಟಿ ಹಣವನ್ನು ಹೊಂದಾಣಿಕೆ ಮಾಡಿಕೊಂಡ ಬ್ಯಾಂಕಿನ ಕ್ರಮವನ್ನು ರದ್ದುಪಡಿಸಿ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನ್ಯಾಯಪೀಠ ಆದೇಶ ಮಾಡಿದೆ.

ಗ್ರಾಚ್ಯುಯಿಟಿ ಪಾವತಿ ಕಾಯ್ದೆ-1972 ಅಡಿಯಲ್ಲಿ ನಿವೃತ್ತಿಯ ಸಂದರ್ಭದಲ್ಲಿ ಉದ್ಯೋಗಿಗೆ ಹಣಕಾಸು ಭದ್ರತೆ ಕಲ್ಪಿಸಲು ‘ಉದ್ಯೋಗಿ ಕಲ್ಯಾಣ ನಿಧಿ’ಯಡಿ ಗ್ರಾಚ್ಯುಯಿಟಿಗೆ ರಕ್ಷಣೆ ಕಲ್ಪಿಸಲಾಗಿರುತ್ತದೆ. ಕಾಯ್ದೆಯ ಸೆಕ್ಷನ್‌ 17ರ ಅಡಿಯಲ್ಲಿ ಗ್ರಾಚ್ಯುಯಿಟಿ ಬಿಡುಗಡೆಗೆ ಉದ್ಯೋಗಿ ಅರ್ಜಿ ಸಲ್ಲಿಸಿದರೆ, ಉದ್ಯೋಗದಾತ ನಿಗದಿತ ಅವಧಿಯಲ್ಲಿ ಪಾವತಿ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ನೌಕರಿ ಬಿಟ್ಟ 30 ದಿನದಲ್ಲಿ ಗ್ರಾಚ್ಯುಟಿ: ಹೈಕೋರ್ಟ್‌

ಪ್ರಕರಣದಲ್ಲಿ ಗೃಹ ಸಾಲದ ಬಾಕಿ ಸಂಬಂಧ ಉದ್ಯೋಗಿಯ ಗ್ರಾಚ್ಯುಯಿಟಿ ಹಣ 1,29,691 ರು. ಹೊಂದಾಣಿಕೆ ಮಾಡಿಕೊಳ್ಳಲು ಬ್ಯಾಂಕ್‌ ಮುಂದಾಗಿದೆ. ಆದರೆ, ಉದ್ಯೋಗಿ ಕಲ್ಯಾಣ ನಿಧಿಯು ‘ಸೇವಾ ಷರತ್ತು’ಗಳ ವ್ಯಾಪ್ತಿಗೆ ಒಳಪಟ್ಟಿದ್ದರೆ, ಗೃಹ ಸಾಲವು ‘ಸಾಲ ಒಪ್ಪಂದ ನಿಯಮ’ಗಳ ನಿಯಂತ್ರಣದಲ್ಲಿರುತ್ತದೆ. ಸಾಲವು ಬ್ಯಾಂಕ್‌ ಮತ್ತು ಸಾಲಗಾರನ ನಡುವಿನ ವಾಣಿಜ್ಯ ವ್ಯವಹಾರವಾಗಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಕರಣದಲ್ಲಿ ಗೃಹ ಸಾಲ ಮೊತ್ತ ಮರು ಪಾವತಿಸುವಂತೆ ಉದ್ಯೋಗಿಗೆ ಅಥವಾ ಅವರ ಸಾವಿನ ನಂತರ ಕಾನೂನಾತ್ಮಕ ವಾರಸುದಾರರಿಗೆ ಬ್ಯಾಂಕ್‌ ಬೇಡಿಕೆ ಇಟ್ಟಿಲ್ಲ. ಸಾಲದ ಮೊತ್ತವನ್ನು ಗ್ರಾಚ್ಯುಯಿಟಿ ಹಣದಿಂದ ವಸೂಲಿ ಮಾಡಿಕೊಳ್ಳಲು ಬ್ಯಾಂಕ್‌ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದೆ. ಸಾಲದ ಒಪ್ಪಂದ ನಿಯಮಗಳ ಅನುಸಾರ ಬ್ಯಾಂಕ್‌ ನಡೆದು ಕೊಳ್ಳಬೇಕಾಗುತ್ತದೆ. ಒಪ್ಪಂದದ ಅನುಸಾರ ಸಾಲಗಾರರ ವಿರುದ್ಧ ಎಲ್ಲ ಹಕ್ಕು ಚಲಾಯಿಸಬಹುದು. ಆದರೆ, ಸಾಲದ ಬಾಕಿಯನ್ನು ಗ್ರಾಚ್ಯುಯಿಟಿ ಹಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಮೇಲ್ಮನವಿ ಪ್ರಾಧಿಕಾರದ ಆದೇಶವು ಸೂಕ್ತವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ:

ಡಿ.ಶ್ರೀಮಂತ ಎಂಬುವರು 1975ರಲ್ಲಿ ರಾಷ್ಟ್ರೀಯ ಬ್ಯಾಂಕ್‌ವೊಂದರಲ್ಲಿ ಜವಾನ ಆಗಿ ನೇಮಕಗೊಂಡಿದ್ದು, 1987ರಲ್ಲಿ ಗುಮಾಸ್ತ ಆಗಿ ಬಡ್ತಿ ಪಡೆದಿದ್ದರು. ಸೇವಾವಧಿಯಲ್ಲಿ ಅದೇ ಬ್ಯಾಂಕಿನಿಂದ ಗೃಹ ಸಾಲ ಪಡೆದುಕೊಂಡು ಕಾಲ ಕಾಲಕ್ಕೆ ಪಾವತಿಸುತ್ತಿದ್ದರು. 2005ರಲ್ಲಿ ದುರ್ನಡತೆ ಆರೋಪಕ್ಕೆ ಒಳಗಾಗಿ ವಿಚಾರಣೆ ನಡೆದು, ದೋಷಾರೋಪ ಪಟ್ಟಿಸಲ್ಲಿಕೆಯಾಗಿತ್ತು. ವಿಚಾರಣಾಧಿಕಾರಿ ಶ್ರೀಮಂತ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ವರದಿಯಲ್ಲಿ ತಿಳಿಸಿದ್ದರು. ನಂತರ ಉದ್ಯೋಗಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿ ಬ್ಯಾಂಕಿನ ಶಿಸ್ತು ಪ್ರಾಧಿಕಾರ 2006ರ ಜು.27ರಂದು ಆದೇಶಿಸಿತ್ತು.

ಇನ್ನು 1-3 ವರ್ಷ ಕೆಲಸ ಮಾಡಿದ ನೌಕರರಿಗೂ ಗ್ರಾಚ್ಯುಟಿ?

ಈ ಆದೇಶ ಪ್ರಶ್ನಿಸಿ ಶ್ರೀಮಂತ ಅವರು ಕೈಗಾರಿಕಾ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಗ್ರಾಚ್ಯುಯಿಟಿ ಹಣ ಬಿಡುಗಡೆ ಕೋರಿ ಶ್ರೀಮಂತ ಅವರು ಸಲ್ಲಿಸಿದ್ದ ಅರ್ಜಿಯನ್ನು ಬ್ಯಾಂಕ್‌ ವಜಾಗೊಳಿಸಿತ್ತು. ಹಾಗಾಗಿ, ಅವರು ನಿಯಂತ್ರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಶ್ರೀಮಂತ ಅವರು ಸಾವನ್ನಪ್ಪಿದ್ದರು. ಗೃಹ ಸಾಲ ಬಾಕಿಯಿದ್ದ ಕಾರಣ ಅದಕ್ಕೆ ಗ್ರಾಚ್ಯುಯಿಟಿ ಹಣವನ್ನು ಹೊಂದಾಣಿಕೆ ಮಾಡಲಾಗಿದೆ ಎಂದು ಪ್ರಾಧಿಕಾರಕ್ಕೆ ಬ್ಯಾಂಕ್‌ ತಿಳಿಸಿತ್ತು. ಆ ಕ್ರಮವನ್ನು ನಿಯಂತ್ರಣ ಪ್ರಾಧಿಕಾರ ಪುರಸ್ಕರಿಸಿತ್ತು.

ಇದರಿಂದ ಮೃತ ಶ್ರೀಮಂತ ಅವರ ಕುಟುಂಬದವರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅದು ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸಿ, ಉದ್ಯೋಗಿಯ ಕುಟುಂಬದವರಿಗೆ ವಾರ್ಷಿಕ ಶೇ.10ರಷ್ಟು ಬಡ್ಡಿ ದರದಲ್ಲಿ ಗ್ರಾಚ್ಯುಯಿಟಿ ಹಣ ಪಾವತಿಸಲು ಬ್ಯಾಂಕಿಗೆ 2019ರ ಅ.21ರಂದು ನಿರ್ದೇಶಿಸಿತ್ತು. ಅದನ್ನು ಬ್ಯಾಂಕ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಬ್ಯಾಂಕಿನ ಕ್ರಮ ರದ್ದುಪಡಿಸಿರುವ ಹೈಕೋರ್ಟ್‌, ಮೇಲ್ಮನವಿ ಪ್ರಾಧಿಕಾರದ ಆದೇಶ ಪಾಲಿಸಲು ನಿರ್ದೇಶಿಸಿದೆ.
 

Latest Videos
Follow Us:
Download App:
  • android
  • ios