ಚಿಕ್ಕಬಳ್ಳಾಪುರ: ಆದಿಯೋಗಿ ಪ್ರತಿಮೆ ಸ್ಥಳ, ಯಥಾಸ್ಥಿತಿಗೆ ಹೈಕೋರ್ಟ್ ಆದೇಶ
ಚಿಕ್ಕಬಳ್ಳಾಪುರದ ಆವಲಗುರ್ಕಿ ಗ್ರಾಮದ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮುಂದುವರಿಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ‘ಈಶ ಯೋಗ ಕೇಂದ್ರ‘ಕ್ಕೆ ಹೈಕೋರ್ಟ್ ಆದೇಶ.
ಬೆಂಗಳೂರು(ಜ.12): ಚಿಕ್ಕಬಳ್ಳಾಪುರದ ಆವಲಗುರ್ಕಿ ಗ್ರಾಮದ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮುಂದುವರಿಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ‘ಈಶ ಯೋಗ ಕೇಂದ್ರ‘ಕ್ಕೆ ಹೈಕೋರ್ಟ್ ಬುಧವಾರ ಆದೇಶಿಸಿದೆ. ಚಿಕ್ಕಬಳ್ಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ನಿವಾಸಿ ಎಸ್.ಕ್ಯಾತಪ್ಪ ಸೇರಿ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಸ್ವರೂಪದಿಂದ ಕೂಡಿರುವ ಹಿನ್ನೆಲೆಯಲ್ಲಿ ಈಶ ಯೋಗ ಕೇಂದ್ರಕ್ಕೆ ಭೂಮಿ ಮಂಜೂರು ಮಾಡಿ ಸರ್ಕಾರ 2019ರ ಮಾ.6ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ, ಒಂದು ವಾರದೊಳಗೆ ಅರ್ಜಿ ತಿದ್ದುಪಡಿ ಮಾಡಲು ಅರ್ಜಿದಾರರಿಗೆ ನ್ಯಾಯಪೀಠ ಅನುಮತಿ ನೀಡಿ ವಿಚಾರಣೆಯನ್ನು ಜ. 13ಕ್ಕೆ ಮುಂದೂಡಿತು.
Chikkaballapur Utsav: ಡಾ.ಸುಧಾಕರ್ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ
ಈಶ ಯೋಗ ಕೇಂದ್ರದ ಪರ ವಕೀಲರು ಮಧ್ಯಾಹ್ನ ನ್ಯಾಯಪೀಠದ ಮುಂದೆ ಹಾಜರಾಗಿ ಯಥಾಸ್ಥಿತಿ ಆದೇಶ ತೆರವಿಗೆ ಕೋರಿ ಅರ್ಜಿ ಸಲ್ಲಿಸಿ ಆದಿಯೋಗಿ ಪ್ರತಿಮೆ ಬಳಿ ಜ.15ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಥಾಸ್ಥಿತಿ ಆದೇಶದಿಂದ ಕಾರ್ಯಕ್ರಮಕ್ಕೆ ತೊಂದರೆಯಾಗುತ್ತದೆಂದರು.
ಅರ್ಜಿದಾರರು ತಿದ್ದುಪಡಿ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಾದ ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠ, ವಿಚಾರಣೆಯನ್ನು ಜ. 13ಕ್ಕೆ ಮುಂದೂಡಿತು.