ಕೋಲಾರ (ನ.02):  ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ  ಸುಸೂತ್ರವಾಗಿ ನಡೆಯಿತಾದರೂ, ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್‌ ತಡೆ ನೀಡಿದೆ.

ಒಟ್ಟು 35 ಸದಸ್ಯರು, ಶಾಸಕ, ಸಂಸದ, ವಿಧಾನಪರಿಷತ್‌ ಸದಸ್ಯ ಸೇರಿ 38 ಸದಸ್ಯ ಬಲದ ಕೋಲಾರ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಹತ್ತು ಮಂದಿ ಗೈರು ಹಾಜರಾಗಿದ್ದು, 28 ಸದಸ್ಯ ಬಲದೊಂದಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಕಡೆಯಿಂದ ಶ್ವೇತಾ ಶಬರೀಶ್‌, ಉಪಾಧ್ಯಕ್ಷ ಸ್ಥಾನಕ್ಕೆ ಪ್ರವೀಣ್‌ಗೌಡ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಅಜ್ರನಸ್ರೀನ್‌, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಮಂಜುನಾಥ್‌ ನಾಮಪತ್ರ ಸಲ್ಲಿಸಿದ್ದರು.

ಡಿಸೆಂಬರಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರಿ ಬದಲಾವಣೆ ಬಿರುಗಾಳಿ?

ಮ್ಯಾಜಿಕ್‌ ಸಂಖ್ಯೆ 15ಕ್ಕೆ ಕುಸಿತ :  ಚುನಾವಣೆಗೂ ಮುನ್ನ ಯಾರಿಗೂ ಬಹುಮತವಿರಲಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಗೆಲ್ಲಲು ಒಟ್ಟು 38 ಸದಸ್ಯರ ಪೈಕಿ ಕನಿಷ್ಠ 20 ಸದಸ್ಯರ ಬೆಂಬಲವನ್ನು ಪಡೆಯುವ ಅಗತ್ಯವಿತ್ತು. ಆದರೆ, ಚುನಾವಣಾ ಪ್ರಕ್ರಿಯೆಗೆ ಹಾಜರಾದವರ ಸಂಖ್ಯೆ ಕೇವಲ 28 ಆಗಿದ್ದರಿಂದ ಗೆಲುವಿನ ಮ್ಯಾಜಿಕ್‌ ಸಂಖ್ಯೆ 15 ಕ್ಕೆ ಕುಸಿಯುವಂತಾಗಿತ್ತು.

ಚುನಾವಣೆಗೂ ಮುನ್ನ ಕಾಂಗ್ರೆಸ್‌ 12, ಜೆಡಿಎಸ್‌ 8, ಬಿಜೆಪಿ 3, ಎಸ್‌ಡಿಪಿಐ 4 ಮತ್ತು ಪಕ್ಷೇತರರು 8 ಮಂದಿ ಸದಸ್ಯ ಬಲವನ್ನು ಹೊಂದಿದ್ದರು. ಇವರೊಂದಿಗೆ ಶಾಸಕ ಕೆ.ಶ್ರೀನಿವಾಸಗೌಡ, ಸಂಸದ ಎಸ್‌.ಮುನಿಸ್ವಾಮಿ, ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಅವರಿಗೂ ಮತದಾನದ ಹಕ್ಕಿತ್ತು.

ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ 12 ಸದಸ್ಯರ ಪೈಕಿ 7 ಮಂದಿ ಹಾಜರಾಗಿ 5 ಮಂದಿ ಗೈರು ಹಾಜರಾಗಿದ್ದರು. ಜೆಡಿಎಸ್‌ನ 8 ಮಂದಿ ಹಾಜರಾತಿ ತೋರಿದ್ದರು. ಬಿಜೆಪಿಯ 3 ಸದಸ್ಯರ ಪೈಕಿ ಒಬ್ಬರು ಮತದಾನದಲ್ಲಿ ಪಾಲ್ಗೊಂಡಿದ್ದರು. ಶಾಸಕ ಕೆ.ಶ್ರೀನಿವಾಸಗೌಡ, ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಹಾಜರಾಗಿದ್ದರೆ, ಸಂಸದ ಎಸ್‌.ಮುನಿಸ್ವಾಮಿ ಗೈರು ಹಾಜರಾಗಿದ್ದರು.

ಚುನಾವಣಾ ಪ್ರಕ್ರಿಯೆಗೂ ಮುನ್ನ ಜೆಡಿಎಸ್‌ ಹೊರತುಪಡಿಸಿ ಬೇರಾವುದೇ ಪಕ್ಷವು ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದ್ದು, ಕೋಲಾರ ನಗರಸಭೆ ಚುನಾವಣಾ ಹಾಜರಾತಿಯ ಮೂಲಕ ಬಹಿರಂಗವಾಯಿತು.

ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಕಾರ್ಯನಿರ್ವಹಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಿರ್ವಹಿಸಲಾಗಿದ್ದು, ಫಲಿತಾಂಶವನ್ನು ಹೈಕೋರ್ಟ್‌ ಸೂಚನೆ ಮೇರೆಗೆ ತಡೆ ಹಿಡಿಯಲಾಗಿದೆಯೆಂದು ಘೋಷಿಸಿದರು.