ಬೆಂಗಳೂರು(ಜ.29): ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ಕೆ.ಸಿ. ವ್ಯಾಲಿಯ ಸಂಸ್ಕರಿಸಿದ ನೀರು ಹರಿಸುವ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಅಧ್ಯಯನಕ್ಕೆ ಸರ್ಕಾರ ರಚಿಸಿದ ತಜ್ಞರ ಸಮಿತಿಯ ಕೆಲ ಸದಸ್ಯರ ಬಗ್ಗೆ ಅರ್ಜಿದಾರರು ಆರೋಪ ಮಾಡಿದ ಕಾರಣ ಅರ್ಜಿಯನ್ನು ಹೈಕೋರ್ಟ್‌ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿತು.

ಕೆ.ಸಿ.ವ್ಯಾಲಿ ಯೋಜನೆ ಪ್ರಶ್ನಿಸಿ ಶಾಶ್ವತ ನೀರಾವರಿ ಯೋಜನೆ ಸಮಿತಿ, ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿಯ ಆರ್‌.ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮಂಗಳವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅರ್ಜಿಯ ಹಿಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಜ್ಞರ ಸಮಿತಿಯ ಕೆಲ ಸದಸ್ಯರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಅದರಂತೆ ಅರ್ಜಿದಾರರು ಪ್ರಮಾಣ ಪತ್ರ ಸಲ್ಲಿಸಿದ್ದರು.

ತಜ್ಞರ ಸಮಿತಿಯಲ್ಲಿನ ಕೆಲ ಸದಸ್ಯರು ಮೂಲ ಯೋಜನೆ ಸಿದ್ಧಪಡಿಸಿದವರಾಗಿದ್ದಾರೆ. ಐಐಎಸ್ಸಿಯ ನಾಲ್ಕು ವಿಜ್ಞಾನಿಗಳು ಯೋಜನೆಯ ಅನುಷ್ಠಾನದಲ್ಲಿ ಮೊದಲಿನಿಂದಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಮತ್ತೆ ಇನ್ನೂ ಇಬ್ಬರು ವಿಜ್ಞಾನಿಗಳು ನ್ಯಾಯಾಲಯಕ್ಕೆ ವರದಿಗಳ ರೂಪದಲ್ಲಿ ಸರ್ಕಾರಕ್ಕೆ ಅನುಕೂಲ ಮಾಡಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿತ್ತು. ಜತೆಗೆ, ಐಐಎಸ್‌ಸಿ ಮತ್ತೊರ್ವ ವಿಜ್ಞಾನಿ ನೇತೃತ್ವದಲ್ಲಿ ಐಐಎಸ್ಸಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗವು ಸಣ್ಣ ನೀರಾವರಿ ಇಲಾಖೆಯಿಂದ ಕಾರ್ಯಗತಗೊಂಡ ಕೆ.ಸಿ. ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಯನ್ನು ವಿನ್ಯಾಸಗೊಳಿಸಿದೆ. ಅದಕ್ಕಾಗಿ ಶೇ.50 ರಷ್ಟು ಹಣ ಸಂದಾಯವಾಗಿದೆ. ಸಣ್ಣ ನೀರಾವರಿ ಇಲಾಖೆ ಆಯ್ಕೆ ಮಾಡಿರುವ ಕೆಲವು ವಿಜ್ಞಾನಿಗಳು ಪರೋಕ್ಷವಾಗಿ ಲಾಭದಾಯಕ ಪ್ರಯೋಜನಗಳನ್ನು ಪಡೆದಿದ್ದಾರೆ. ಇದರಿಂದ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸುವ ಪರಿಶೀಲನಾ ಸಮಿತಿಯಲ್ಲಿ ಅಂತಹ ವಿಜ್ಞಾನಿಗಳಿದ್ದರೆ ಪಕ್ಷಪಾತವಾಗುತ್ತದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿತ್ತು.

ಮಂಗಳವಾರ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರರು ಸಲ್ಲಿಸಿರುವ ಪ್ರಮಾಣಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ತಜ್ಞರ ಸಮಿತಿ ಸದಸ್ಯರ ವಿರುದ್ಧ ಪೂರ್ವಾಗ್ರಹ ಪೀಡಿತ ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಹಾಗೂ ದಾಖಲೆ ಒದಗಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆಳೆದ್ದಾರೆ. ಹೀಗಾಗಿ, ಅರ್ಜಿದಾರರು ಪ್ರಕರಣದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ನಂತರ ಅರ್ಜಿದಾರರು ಈ ಪ್ರಕರಣದಲ್ಲಿ ಮುಂದುವರಿಯುವಂತಿಲ್ಲ, ನ್ಯಾಯಾಲಯವೇ ಅರ್ಜಿಯನ್ನು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿಕೊಂಡು ವಿಚಾರಣೆ ಮುಂದುವರಿಸಲಿದೆ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.