ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಕಲಾಪ, ಈ ವೇಳೆ ವಿದ್ಯಾರ್ಥಿಗಳ ಅನಗತ್ಯ ಚಾಟಿಂಗ್‌, ಕಾಲೇಜಿನಲ್ಲಿ ವರ್ತಿಸಿದಂತೆ ಕೋರ್ಟ್‌ ಮುಂದೆ ನಡೆದುಕೊಳ್ಳಬಾರದು: ನ್ಯಾಯಾಧೀಶರ ತಾಕೀತು. 

ಬೆಂಗಳೂರು(ಜ.11): ಹೈಕೋರ್ಟ್‌ ಕಲಾಪವನ್ನು ವೀಕ್ಷಿಸುತ್ತಿದ್ದ ವೇಳೆ ಅನಗತ್ಯವಾಗಿ ‘ಚಾಟಿಂಗ್‌’ ಮಾಡಿದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳ ವರ್ತನೆಗೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಚಾರಣೆ ವೇಳೆ ಸಭ್ಯತೆ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕೆಂದು ತಾಕೀತು ಮಾಡಿದ ಪ್ರಸಂಗ ನಡೆಯಿತು.

2022ನೇ ಸಾಲಿನಲ್ಲಿ ನಡೆದ ಎಂಬಿಬಿಎಸ್‌ ಪದವಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ವಿವಿ ಸಲ್ಲಿಸಿದ್ದ ತಕರಾರು ಮೇಲ್ಮನವಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಹೈಕೋರ್ಟ್‌ ಕಲಾಪ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಸಾರವಾಗುತ್ತಿತ್ತು. ಮೇಲ್ಮನವಿಯಲ್ಲಿ ಪಕ್ಷಗಾರರು ಆಗಿರುವ ಹಲವು ವಿದ್ಯಾರ್ಥಿಗಳ ಜ್ಯೂಮ್‌ ಆ್ಯಪ್‌ ಮೂಲಕ ನ್ಯಾಯಾಲಯದ ಕಲಾಪವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಆಡಿಯೋ ‘ಮ್ಯೂಟ್‌’ ಮಾಡಿಕೊಳ್ಳದೆ ಮಾತನಾಡುತ್ತಿದ್ದರು. ಆಗ ಕೋರ್ಟ್‌ ಅಧಿಕಾರಿಯು ಆಡಿಯೋ ಮ್ಯೂಟ್‌ ಮಾಡಿಕೊಳ್ಳುವಂತೆ ಹಲವು ಬಾರಿ ವಿದ್ಯಾರ್ಥಿಗಳ ಗಮನಕ್ಕೆ ತಂದರು. ನಂತರ ವಿದ್ಯಾರ್ಥಿಗಳು, ‘ಯಾವಾಗ ನಮ್ಮ ಪ್ರಕರಣ ವಿಚಾರಣೆಗೆ ಬರುತ್ತದೆ? ಸದ್ಯ ಯಾವ ಪ್ರಕರಣ ವಿಚಾರಣೆ ನಡೆಯುತ್ತಿದೆ? ಒಂದು ಪ್ರಕರಣದ ವಿಚಾರಣೆ ಮುಗಿಸಲು ಎಷ್ಟು ಸಮಯ ಬೇಕಾಗುತ್ತದೆ’ ಎಂದು ಚಾಟ್‌ ಭಾಗದಲ್ಲಿ ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ಮತ್ತೊಂದಷ್ಟು ವಿದ್ಯಾರ್ಥಿಗಳು ಕಾಮೆಂಟ್‌ ಮಾಡುತ್ತಿದ್ದರು. ಇದು ಇತರರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.

Bengaluru: ಸೆಪ್ಟೆಂಬರೊಳಗೆ ಎಲ್ಲಾ ಟ್ರಾನ್ಸ್‌ಫಾರ್ಮರ್‌ ಫುಟ್‌ಪಾತ್‌ನಿಂದ ಸ್ಥಳಾಂತರ, ಹೈಕೋರ್ಟ್‌ಗೆ ಬೆಸ್ಕಾಂ ಮಾಹಿತಿ

ನೀವು ಕೋರ್ಟಲ್ಲಿದ್ದೀರಿ, ಕಾಲೇಜಲ್ಲಲ್ಲ:

ಇದರಿಂದ ಬೇಸತ್ತ ಕೋರ್ಟ್‌ ಅಧಿಕಾರಿ, ‘ವಿದ್ಯಾರ್ಥಿಗಳೇ, ನ್ಯಾಯಾಲಯದ ಮೇಲೆ ಕಾಮೆಂಟ್‌ ಮಾಡುವ ಮುನ್ನ ಯೋಚನೆ ಮಾಡಬೇಕು. ನೀವು ನ್ಯಾಯಾಲಯದ ಮುಂದೆ ಇದ್ದೀರ ಹೊರತು ನಿಮ್ಮ ಕಾಲೇಜಿನಲ್ಲಿ ಅಲ್ಲ’ ಎಂದು ಕಟುವಾಗಿ ಉತ್ತರಿಸಿ ಎಚ್ಚರಿಸಿದರು.

ಮಧ್ಯಾಹ್ನದ ಕಲಾಪದ ವೇಳೆ ನ್ಯಾಯಪೀಠದ ಮುಂದೆ ವಿವಿಯ ಮೇಲ್ಮನವಿ ವಿಚಾರಣೆಗೆ ಬಂದ ವೇಳೆ ವಿದ್ಯಾರ್ಥಿಗಳ ನಡವಳಿಕೆ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ಕೋರ್ಟ್‌ ಅಧಿಕಾರಿ ತಂದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ಪರ ಹಾಜರಿದ್ದ ವಕೀಲರಲ್ಲಿ ಬೇಸರ ವ್ಯಕ್ತಪಡಿಸಿದರು.

Karnataka Private Schools Fee: ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೂ ಶುಲ್ಕ ನಿಗದಿ ಮಾಡುವಂತಿಲ್ಲ: ಹೈಕೋರ್ಟ್

‘ಸಾಕಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕಲಾಪಕ್ಕೆ ಹಾಜರಾಗುತ್ತಿದ್ದಾರೆ. ಹೀಗೆ ಸಂದೇಶ ಕಳುಹಿಸುತ್ತಿದ್ದರೆ ಕೋರ್ಟ್‌ ಅಧಿಕಾರಿ ಹೇಗೆ ಮತ್ತು ಎಷ್ಟುಜನರಿಗೆ ಉತ್ತರಿಸಲು ಸಾಧ್ಯ? ವಿದ್ಯಾರ್ಥಿಗಳ ಕಾತರ ಹಾಗೂ ಕಳವಳವನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳುತ್ತದೆ. ಅಂದ ಮಾತ್ರಕ್ಕೆ ಇತರೆ ಪ್ರಕರಣಗಳನ್ನು ಪಟ್ಟಕ್ಕಿಟ್ಟು ಮೊದಲಿಗೆ ನಿಮ್ಮ ಪ್ರಕರಣದ ವಿಚಾರಣೆ ನಡೆಸಬೇಕೆ?’ ಎಂದು ವಕೀಲರನ್ನು ಪ್ರಶ್ನಿಸಿದರು. ಅಲ್ಲದೆ, ‘ಕೋರ್ಟ್‌ ಕಲಾಪ ವೀಕ್ಷಣೆ ಮಾಡುತ್ತಿರುವಾಗ ವಿದ್ಯಾರ್ಥಿಗಳ ಸಭ್ಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ಹೇಗಿರುತ್ತದೆ, ಕೋರ್ಟ್‌ ಶಿಷ್ಟಾಚಾರವೇನು, ಕೋರ್ಟ್‌ ಮುಂದೆ ಇರುವಾಗ ಹೇಗೆ ವರ್ತಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಕಾಲೇಜಿನಲ್ಲಿ ವರ್ತಿಸಿದಂತೆ ನ್ಯಾಯಾಲಯದ ಮುಂದೆ ನಡೆದುಕೊಳ್ಳಬಾರದು. ಬಹಳ ಎಚ್ಚರದಿಂದ ಇರಬೇಕಾಗುತ್ತದೆ’ ಎಂದು ಮೌಖಿಕವಾಗಿ ಸೂಚಿಸಿದರು.

ಈ ವೇಳೆ ವಿದ್ಯಾರ್ಥಿಗಳ ಸಂದೇಶ ಮತ್ತವರ ಹೆಸರು ಪರಿಶೀಲಿಸಿದ ವಕೀಲರು, ಈ ವಿದ್ಯಾರ್ಥಿಗಳು ತಮ್ಮ ಪಕ್ಷಗಾರರು ಅಲ್ಲ. ಆದರೂ, ನ್ಯಾಯಾಲಯದ ಸೂಚನೆಯನ್ನು ತಮ್ಮ ಪಕ್ಷಗಾರರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಅಂತಿಮವಾಗಿ ಮೇಲ್ಮನವಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿತು.