ಉಡುಪಿ(ಜ.21): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಹೈ ಅಲರ್ಟ್‌ ಘೋಷಿಸಲಾಗಿದೆ ಮತ್ತು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಉಡುಪಿ ಪೊಲೀಸರು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಬರುವ ರೈಲುಗಳ ಮೇಲೆ ನಿಗಾ ಇರಿಸಿದ್ದಾರೆ. ರೈಲಿನಿಂದ ಇಳಿಯುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿದ್ದಾರೆ ಮತ್ತು ಸಂಶಯಾಸ್ಪದ ವ್ಯಕ್ತಿಗಳನ್ನು ತನಿಖೆಗೊಳಪಡಿಸಿದ್ದಾರೆ. ಅದೇ ರೀತಿ ಮಣಿಪಾಲದ ಬಸ್‌ ನಿಲ್ದಾಣ, ಉಡುಪಿಯ ಸರ್ವಿಸ್‌ ಮತ್ತು ಸಿಟಿ ಬಸ್‌ ನಿಲ್ದಾಣಗಳಲ್ಲಿಯೂ ಪೊಲೀಸ್‌ ಪಹರೆಯನ್ನು ಹಾಕಲಾಗಿದೆ.

ಏರ್‌ಪೋರ್ಟ್‌ನಲ್ಲಿ ಬಾಂಬ್ ಪ್ರಕರಣ; ಮಂಗಳೂರಿಗೆ ಎನ್‌ಐಎ ತಂಡ

ಉಡುಪಿ ಕೃಷ್ಣ ಮಠ ಪರಿಸರದಲ್ಲಿ, ಪಾರ್ಕಿಂಗ್‌ ಪ್ರದಶದಲ್ಲಿ, ರಥಬೀದಿಯಲ್ಲಿ ಪೊಲೀಸ್‌ ಪಹರೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್‌ ಶ್ವಾನದಳದ ಮೂಲಕ ಮೂಲೆಮೂಲೆಗಳಲ್ಲಿ ಶೋಧನೆ ಮಾಡಲಾಗಿದೆ.

ಕಳೆದ ವಾರ ಕೇರಳದಲ್ಲಿ ಪೊಲೀಸ್‌ ಅಧಿಕಾರಿಯನ್ನು ಕೊಲೆ ಮಾಡಿ, ಕೇರಳದಿಂದ ಮುಂಬೈಗೆ ಪರಾರಿಯಾಗುತ್ತಿದ್ದ ಇಬ್ಬರು ಉಗ್ರರನ್ನು, ತಮಿಳುನಾಡು ಪೊಲೀಸರ ಸೂಚನೆಯಂತೆ ಉಡುಪಿ ಪೊಲೀಸರು ಬಂಧಿಸಿದ ಘಟನೆ ಜನರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮಂಗಳೂರಿನಲ್ಲಿ ಬಾಂಬ್‌ ಪತ್ತೆಯಾಗಿರುವುದು, ಉಡುಪಿಯಲ್ಲಿ ಪೊಲೀಸರು ಶೋಧನೆ ನಡೆಸಿರುವುದು ಇನ್ನಷ್ಟುಆತಂಕಕ್ಕೆ ಕಾರಣವಾಗಿದೆ.

ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!