ಹಾಸನ(ಆ.18): ದೇಶದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಹಾಸನದಲ್ಲಿಯೂ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಉಗ್ರರು ದಾಳಿ ನಡೆಸಬಹುದೆಂಬ ಮಾಹಿತಿ ಆಧಾರದ ಮೇಲೆ ಹಾಸನ ನಗರದ ಪ್ರಮುಖ ಕೇಂದ್ರಗಳಿಗೆ ಪೊಲೀಸ್‌ ಬಿಗಿ ಭದ್ರತೆ ಒದಗಿಸಿದ್ದು, ಅಲ್ಲಿಗೆ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಉಗ್ರಾತಂಕ: ಈಗ ಸಮುದ್ರದಲ್ಲೂ ರೆಡ್‌ ಅಲರ್ಟ್‌

ಹಾಸನ ತಾಲೂಕು ಗೊರೂರು ಬಳಿ ಇರುವ ಹೇಮಾವತಿ ಜಲಾಶಯ, ಬಾಹ್ಯಾಕಾಶ ನಿಯಂತ್ರಣ ಕೇಂದ್ರ (ಎಂಸಿಎ) ಮತ್ತು ಹಾಸನ ತಾಲೂಕು ಶಾಂತಿಗ್ರಾಮದ ಬಳಿ ಇರುವ ವಿದ್ಯುತ್‌ ವಿತರಣಾ ಕೇಂದ್ರ (ಪವರ್‌ ಗ್ರೀಡ್‌)ದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸುವ ಮೂಲಕ ಭದ್ರತೆ ಒದಗಿಸಲಾಗಿದೆ.