ಹೇಮಾವತಿ ನದಿ ನೀರಿಗೆ ಸಾಂಕ್ರಾಮಿಕ ರೋಗದ ಭೀತಿ: ಒಡಲಿಗೆ ವೇಸ್ಟ್ ಮೀನು ಸುರಿಯುವ ವ್ಯಾಪಾರಿಗಳು
ಮೀನು ವ್ಯಾಪಾರಿಗಳು ಹಾಗೂ ಗೂಡ್ಸ್ ವಾಹನಗಳ ಚಾಲಕರಿಂದ ನಾಡಿನ ಜೀವ ನದಿಯಾದ ಹೇಮಾವತಿ ಮಲೀನಗೊಳ್ಳುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ ಅಸಮಾಧಾನ ಹೊರಹಾಕಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.03): ಮೀನು ವ್ಯಾಪಾರಿಗಳು ಹಾಗೂ ಗೂಡ್ಸ್ ವಾಹನಗಳ ಚಾಲಕರಿಂದ ನಾಡಿನ ಜೀವ ನದಿಯಾದ ಹೇಮಾವತಿ ಮಲೀನಗೊಳ್ಳುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ ಅಸಮಾಧಾನ ಹೊರಹಾಕಿದ್ದಾರೆ. ಹೇಮಾವತಿ ನದಿ ಹುಟ್ಟೋದೆ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ. ಜಾವಳಿಯಲ್ಲಿ ಹುಟ್ಟಿ ಮೂಡಿಗೆರೆ ತಾಲೂಕಿನಲ್ಲಿ ಹರಿದು ಹಾಸನ ಜಿಲ್ಲೆ ಗೊರೂರು ಡ್ಯಾಂ ಮೂಲಕ ಕೆ.ಆರ್.ಎಸ್. ಡ್ಯಾಂ ಸೇರಿ ಬೆಂಗಳೂರು ಮುಟ್ಟುತ್ತೆ. ಆದರೆ, ಮಂಗಳೂರಿನಿಂದ ಮೀನು ತರುವ ಗೂಡ್ಸ್ ವಾಹನಗಳು, ಮೀನು ಮಾರಾಟಗಾರರಿಂದ ಹೇಮಾವತಿ ನದಿ ಮಲೀನವಾಗ್ತಿದೆ ಎಂದು ಸ್ಥಳಿಯರು ಕಿಡಿಕಾರಿದ್ದಾರೆ.
ಹೇಮಾವತಿ ಒಡಲಿಗೆ ವೇಸ್ಟ್ ಮೀನು ಸುರಿಯುವ ವ್ಯಾಪಾರಿಗಳು: ಮೀನು ತರುವ ಗೂಡ್ಸ್ ವಾಹನಗಳು ಹಾಗೂ ಮೀನು ವ್ಯಾಪಾರಿಗಳು ಉಳಿದ ಮೀನು, ಹಾಳಾದ ಮೀನು ಹಾಗೂ ಮೀನು ಕ್ಲೀನ್ ಮಾಡಿದ ಕಸವನ್ನ ಹೇಮಾವತಿ ನದಿ ದಡದಲ್ಲಿ ಎಸೆದು ವಾಹನಗಳನ್ನ ಕ್ಲೀನ್ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ನದಿ ಹಾಳಾಗುತ್ತಿದೆ ಎಂದು ವ್ಯಾಪಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಹೇಮಾವತಿ ನದಿ ನೀರನ್ನ ಮೂಡಿಗೆರೆ ತಾಲೂಕಿನ ಲಕ್ಷಾಂತರ ಜನ ಕುಡಿಯಲು ಆಶ್ರಯಿಸಿದ್ದಾರೆ. ಸಾವಿರಾರು ಎಕರೆ ಹೊಲ-ಗದ್ದೆ-ತೋಟಗಳಿಗೂ ಇದೇ ನೀರು. ಆದ್ರೆ, ಮೀನು ವ್ಯಾಪಾರಿಗಳು, ಗೂಡ್ಸ್ ವಾಹನಗಳ ಚಾಲಕರ ನಡೆಯಿಂದ ಮೂಡಿಗೆರೆ ಜನ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಮನುಷ್ಯನ ಮನಸ್ಥಿತಿ ಬದಲಾಗದೆ ಮಾದಕ ವಸ್ತು, ಅಕ್ರಮ ಅನೈತಿಕತೆ ತಡೆಯುವುದು ಕಷ್ಟ: ನ್ಯಾಯಾಧೀಶ ದೊಡ್ಡಮನಿ
ಮೀನು ಮಾರಾಟಗಾರರ ವಿರುದ್ಧ ಕಿಡಿ: ಹೇಮಾವತಿ ನದಿ ಮೇಲೆ ಇಡೀ ಹಾಸನ ಜಿಲ್ಲೆ ಆಶ್ರಯಿಸಿದೆ. ಹಾಸನದಲ್ಲೂ ಕುಡಿಯೋದು ಇದೇ ನೀರನ್ನ. ಗೊರೂರು ಡ್ಯಾಂ ಮೂಲಕ ಕೆ.ಆರ್.ಎಸ್. ಸೇರಿ ಬೆಂಗಳೂರಿಗೂ ಇದೇ ನೀರು ಹೋಗುತ್ತೆ. ನದಿ ತಟದಲ್ಲೇ ಈ ರೀತಿ ಮಲೀನವಾದ್ರೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಾಲದಕ್ಕೆ ಈಗಾಗಲೇ ಡೆಂಗ್ಯೂವಿನಿಂದ ಇಡೀ ರಾಜ್ಯವೇ ಬಳಲುತ್ತಿದೆ ಎಂದು ಸ್ಥಳಿಯರು ಮೀನು ಮಾರಾಟಗಾರರ ವಿರುದ್ಧ ಕಿಡಿಕಾರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ಗೂಡ್ಸ್ ವಾಹನಗಳ ಚಾಲಕರು ಹಾಗೂ ಮೀನು ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.