ಗಂಗಾವತಿ(ಏ.12): ಲಾಕ್‌ಡೌನ್‌ನಿಂದ ಕೂಲಿ ಕೆಲಸವೂ ಇಲ್ಲದೇ, ಮನೆಯಲ್ಲಿದ್ದ ರೇಷನ್‌ ಸಹ ಖಾಲಿಯಾಗಿ ತೀವ್ರ ತೊಂದರೆಗೆ ಒಳಗಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕುಟುಂಬಕ್ಕೀಗ ಸಾರ್ವಜನಿಕರಿಂದ ಸಾಕಷ್ಟು ನೆರವು ಹರಿದುಬರುತ್ತಿದೆ.

ಈ ಕುಟುಂಬದ ಪಡಿಪಾಟಲಿನ ಕುರಿತು ಕನ್ನಡಪ್ರಭ ಶನಿವಾರ ಬೆಳಕು ಚೆಲ್ಲುತ್ತಿದ್ದಂತೆಯೇ ನೆರವು, ಸಹಾಯ ಹಸ್ತದ ಮಹಾಪೂರ ಹರಿದು ಬಂದಿದೆ. ಈ ಕುಟುಂಬಕ್ಕೆ ರೇಷನ್‌, ಆಹಾರ ನೀಡಿ ಹಲವಾರು ಜನರು ಸ್ಪಂದಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: 'ಉಪವಾಸ ಇದ್ದೇವೆ, ರೇಷನ್‌ ಕೊಟ್ಟು ಪುಣ್ಯ ಕಟ್ಕೊಳ್ಳಿ'

ತಾಲೂಕಿನ ಸಂಗಾಪುರ ಗ್ರಾಮದ ಹೊರಗೆ ಗುಡ್ಡದಲ್ಲಿ ಕೂಲಿ ಕೆಲಸ ಮಾಡುತ್ತ ಜೀವನ ನಿರ್ವಹಿಸುತ್ತಿದ್ದ ಯಶೋಧ ಅವರ ಕುಟಂಬದ ಸಂಕಷ್ಟಕ್ಕೆ ಕನ್ನಡಪ್ರಭ ಕನ್ನಡಿ ಹಿಡಿದಿತ್ತು. ವರದಿಗೆ ಸ್ಪಂದಿಸಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕೂಡಲೇ ಸಂಗಾಪುರ ಗ್ರಾಮ ಪಂಚಾಯಿತಿ ಪಿಡಿಒಗೆ ಸೂಚನೆ ನೀಡಿ, ಗುಡ್ಡದಲ್ಲಿರುವ ಯಶೋಧಮ್ಮ ಕುಟಂಬಕ್ಕೆ ರೇಶನ್‌ ನೀಡುವಂತೆ ಸೂಚನೆ ನೀಡಿದರು. ಕೂಡಲೇ ಅವರಿಗೆ ರೇಶನ್‌ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕೆಂದು ತಿಳಿಸಿದ್ದರಿಂದ ಗ್ರಾಪಂನಿಂದ ರೇಷನ್‌ ತಲುಪಿಸಿ ಸಹಾಯ ಮಾಡಿದ್ದಾರೆ.

ಅಲ್ಲದೇ ಗಂಗಾವತಿ ಮಟ್ಟಿಮಕ್ಕಳ ಆಸ್ಪತ್ರೆಯ ಟೆಕ್ನಿನಿಷಿಯನ್‌ ಆಗಿರುವ ಕಷ್ಣಪ್ಪ ವಡ್ಡರಹಟ್ಟಿ ಕ್ಯಾಂಪ್‌ ಅವರು ಸಹ ಸಂಗಾಪುರ ಗ್ರಾಮಕ್ಕೆ ತೆರಳಿ 25 ಕೆಜಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ನಿತ್ಯ ಜೀವನಕ್ಕೆ ಬೇಕಾದ ಸಾಮಗ್ರಿ ತಲುಪಿಸಿ ಸಹಾಯ ಹಸ್ತ ನೀಡಿದ್ದಾರೆ.

ಕನ್ನಡಪ್ರಭ ವರದಿ: ಹಸಿವಿನಿಂದ ಕಂಗಾಲಾಗಿದ್ದ ಕುಟುಂಬಕ್ಕೆ ತಲುಪಿದ ರೇಷನ್

ಯಶೋಧಮ್ಮ, ಪತಿ, ನಾಲ್ವರು ಮಕ್ಕಳು ಸಂಗಾಪುರ ಗ್ರಾಮದ ಗುಡ್ಡದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ದಿನ ನಿತ್ಯದ ಜೀವನ ನಿರ್ವಹಣೆಗೂ ತೊಂದರೆಯಾಗಿತ್ತು. ಕನ್ನಡಪ್ರಭ ಕುಟಂಬದ ಸಮಸ್ಯೆ ಕುರಿತು ಪ್ರಕಟಿಸಿದ ಬೆನ್ನಲ್ಲೇ ಶಾಸಕರು ಮತ್ತು ಸ್ಥಳೀಯರು ಸಹಾಯ ಮಾಡಿದ್ದಾರೆ.

ಯಶೋಧಮ್ಮಳಿಗೆ ಸಿಪಿಐ ನೆರವು

ಯಶೋಧಮ್ಮಳ ಬಡ ಕುಟುಂಬಕ್ಕೆ ಗ್ರಾಮೀಣ ಪೊಲೀಸ್‌ ಠಾಣೆಯ ಸಿಪಿಐ ಸುರೇಶ ತಳವಾರ ಅವರು ವೈಯಕ್ತಿಕ ವಾಗಿ ನೆರವು ನೀಡಿದ್ದಾರೆ. ಕನ್ನಡಪ್ರಭದಲ್ಲಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ಪೊಲೀಸ್‌ ಅಧಿಕಾರಿ ಸುರೇಶ ತಳವಾರ ಅವರು, ಸಂಗಾಪುರ ಗ್ರಾಮಕ್ಕೆ ಕನ್ನಡಪ್ರಭ ವರದಿಗಾರ ಜತೆ ಯಶೋಧಮ್ಮ ನಿವಾಸಕ್ಕೆ ತೆರಳಿ 25 ಕೆಜಿ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ಖಾರದ ಪುಡಿ, ಬೆಳ್ಳೂಳ್ಳಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ನೀಡಿದರು. ಅಲ್ಲದೇ ಮಾಸ್ಕ್‌ ಮತ್ತು  500 ನೀಡಿದರು. ಕೊರೋನಾ ವೈರಸ್‌ ಹಬ್ಬುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ಜಾಗೃತಿಯಿಂದ ಇರಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡಪ್ರಭ ವರದಿಗಾರ ರಾಮಮೂರ್ತಿ ನವಲಿ, ಸಿದ್ದನಗೌಡ ಖ್ಯಾಡೇದ ಇದ್ದರು.