ಮೈಸೂರು(ಸೆ.29): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಹೆಲಿರೈಡ್‌ ಹಾಗೂ ಓಪನ್‌ ಬಸ್‌ ಸಂಚಾರಕ್ಕೆ ಶನಿವಾರ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಚಾಲನೆ ನೀಡಿದ್ದಾರೆ.

ನಗರದ ಲಲಿತಮಹಲ್‌ ಹೆಲಿಪ್ಯಾಡ್‌ನಿಂದ ಹೆಲಿರೈಡ್‌ ಸೇವೆ ಆರಂಭವಾಗಿದೆ. ಒಬ್ಬರಿಗೆ 2,500 ರು. ನಿಗದಿ ಮಾಡಲಾಗಿದೆ. ಸಚಿವ ರವಿ ಅವರು ಹೆಲಿರೈಡ್‌ಗೆ ಚಾಲನೆ ನೀಡಿದರೂ ಸಹ ಅವರಿಗೆ ಹಾರಾಟ ಮಾಡಲು ಅವಕಾಶ ಸಿಗಲಿಲ್ಲ. ಸಿಂಗಲ್‌ ಎಂಜಿನ್‌ ಹೆಲಿಕಾಪ್ಟರ್‌ ಆಗಿರುವುದರಿಂದ ಗಣ್ಯರ ಹಾರಾಟಕ್ಕೆ ಅವಕಾಶ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಬಳಿ ತೆರೆದ ಬಸ್‌ ಸಂಚಾರಕ್ಕೆ ಚಾಲನೆ ನೀಡಿದಾಗ ರವಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಎಲ್‌. ನಾಗೇಂದ್ರ, ದಸರಾ ಪ್ರವಾಸೋದ್ಯಮ ಸಮಿತಿಯ ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು.