ಮಂಗಳೂರು(ಅ.02): ಪ್ರವಾಸಿ ಹಡಗುಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ ಮಂಗಳೂರಿನಿಂದ 150 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್‌ ಸೇವೆ ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ ತಿಳಿಸಿದ್ದಾರೆ.

ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್‌ ಸೇವೆಯಿಂದ ಎನ್‌ಎಂಪಿಟಿಗೆ ಹೆಚ್ಚಿನ ಪ್ರವಾಸಿ ಹಡಗುಗಳನ್ನು ನಿರೀಕ್ಷಿಸಬಹುದಾಗಿದೆ. ಈ ಕುರಿತು ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುಳ್ಯದಲ್ಲಿ ಭೀಕರ ಅಪಘಾತ, ಕೊಡಗಿನ ಕುಟುಂಬದ ನಾಲ್ವರ ದುರ್ಮರಣ

ಹಡಗುಗಳ ಮೂಲಕ ಬರುವ ಪ್ರಯಾಣಿಕರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರೇ ಆಗಿರುತ್ತಾರೆ. ಎನ್‌ಎಂಪಿಟಿಯಿಂದ ಪ್ರವಾಸಿ ಸ್ಥಳಗಳಿಗೆ ಹೋಗಿ ವಾಪಸ್‌ ಬರಲು ಒಂದೆರಡು ದಿನಗಳೇ ಬೇಕಾಗುತ್ತವೆ. ಅಷ್ಟುಸಮಯ ಅವರಲ್ಲಿ ಇರುವುದಿಲ್ಲ. ಹೆಲಿ ಟೂರಿಸಂ ಸೇವೆ ಆರಂಭಿಸಿದರೆ ಎಲ್ಲ ಪ್ರವಾಸಿ ತಾಣಗಳಿಗೆ ತೆರಳಿ ಇಲ್ಲಿನ ವೈವಿಧ್ಯತೆಗಳ ಪರಿಚಯ ಮಾಡಿಸಬಹುದು. ಇದರಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ ಎಂದರು.

ಕರಿದ ಅಡುಗೆ ಎಣ್ಣೆ ಕೊಡಿ, ಬಯೋ ಡೀಸೆಲ್‌ ಒಯ್ಯಿರಿ!

ಕಳೆದ ವರ್ಷ ಒಟ್ಟು 26 ಪ್ರವಾಸಿ ಹಡಗುಗಳು ಎನ್‌ಎಂಪಿಟಿಗೆ ಬಂದಿದ್ದವು. ಈ ಬಾರಿ 23 ಹಡಗುಗಳು ತಮ್ಮ ಭೇಟಿಯನ್ನು ಖಚಿತಪಡಿಸಿವೆ. ವರ್ಷದ ಮೊದಲ ಕ್ರೂಸ್‌ ಹಡಗು ನ.4ರಂದು ಬಂದರಿಗೆ ಬರಲಿದ್ದು, ಈ ವರ್ಷ 26ಕ್ಕೂ ಹೆಚ್ಚಿನ ಪ್ರವಾಸಿ ಹಡಗುಗಳನ್ನು ನಿರೀಕ್ಷೆ ಮಾಡಲಾಗಿದೆ ಎಂದು ಎ.ವಿ. ರಮಣ ತಿಳಿಸಿದರು.

ಪ್ರವಾಸಿ ಸಂಚಾರಕ್ಕೆ ವಿಶೇಷ ವ್ಯವಸ್ಥೆ:

ಎನ್‌ಎಂಪಿಟಿಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಬಂದರಿನಲ್ಲಿ ಪ್ರವಾಸಿಗರ ಸಂಚಾರಕ್ಕೆ ವಿಶೇಷವಾದ ಗೇಟ್‌ ಮತ್ತು ರಸ್ತೆ ನಿರ್ಮಿಸುವ ಯೋಜನೆಯಿದೆ. ಪ್ರವಾಸಿಗರಿಗೆ ಪ್ರೀಪೇಯ್ಡ್‌ ಟ್ಯಾಕ್ಸಿ ಕೌಂಟರ್‌ ತೆರೆಯಲಾಗುವುದು. ನ.4ರಂದು ಮೊದಲ ಪ್ರವಾಸಿ ಹಡಗು ಬಂದರಿಗೆ ಬರುವಾಗ, ಪ್ರವಾಸಿಗರಿಗೆ ಉತ್ತಮ ಭಾವನೆ ಮೂಡಿಸಲು ಬಂದರಿನ ಮಲ್ಯ ಗೇಟಿನ ದಟ್ಟಣೆಯನ್ನು ಇತರ ಗೇಟ್‌ಗಳಿಗೆ ತಿರುಗಿಸಲಾಗುತ್ತದೆ ಎಂದರು.

ಡ್ರೆಜ್ಜಿಂಗ್‌ ಸಮೀಕ್ಷೆ ಪೂರ್ಣ:

ಬಂದರಿನಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್‌) ಸಮೀಕ್ಷೆ ಬಹುಪಾಲು ಪೂರ್ಣಗೊಂಡಿದೆ. ಡ್ರೆಜ್ಜರ್‌ ವಿಶಾಖಪಟ್ಟಣಂನಿಂದ ಮಂಗಳೂರಿಗೆ ಹೊರಟಿದ್ದು, ಅಕ್ಟೋಬರ್‌ ಮಧ್ಯ ಭಾಗದಿಂದ ಹೂಳೆತ್ತುವ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.

ಶೇ.11 ಸರಕು ನಿರ್ವಹಣೆ ಕುಸಿತ

ಮಾಚ್‌ರ್‍- ಏಪ್ರಿಲ್‌ ತಿಂಗಳಲ್ಲಿ ಮಂಗಳೂರಿನಲ್ಲಿ ನೀರಿನ ಕೊರತೆಯಿಂದಾಗಿ ಎಂಆರ್‌ಪಿಎಲ್‌ ಭಾಗಶಃ ಸ್ಥಗಿತಗೊಂಡಿದ್ದರಿಂದ ಎನ್‌ಎಂಪಿಟಿಯ ಸರಕು ನಿರ್ವಹಣೆ ಕಳೆದ ವರ್ಷಕ್ಕಿಂತ ಶೇ.11ರಷ್ಟುಕುಸಿತ ಕಂಡಿದೆ. ಭೂಕುಸಿತ ಮತ್ತು ಪ್ರತಿಕೂಲ ಹವಾಮಾನವು ಒಳನಾಡಿನಿಂದ ರಸ್ತೆ ಮೂಲಕ ಆಗಮಿಸುವ ಸರಕುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದೂ ಇದಕ್ಕೆ ಕಾರಣವಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ವರ್ಷದ ಗುರಿ ಸಂಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಎ.ವಿ. ರಮಣ ತಿಳಿಸಿದರು.

ಸ್ವಚ್ಛತಾ ಕಾರ್ಯ

ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ಕರೆಯ ಮೇರೆಗೆ ಎನ್‌ಎಂಪಿಟಿ ವತಿಯಿಂದ ವಿವಿಧೆಡೆ ಸ್ವಚ್ಛತಾ ಶ್ರಮದಾನಗಳು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅ.2ರಂದು ಈ ಸ್ವಚ್ಛತಾ ಪಖ್ವಾಡಾ ಸಮಾರೋಪ ನಡೆಯಲಿದೆ. ನಂತರ ಪಣಂಬೂರು ಬೀಚ್‌ನಲ್ಲಿ ಬೀಚ್‌ ಕ್ಲೀನಿಂಗ್‌ ನಡೆಯಲಿದೆ. ಸ್ವಚ್ಛತಾ ಕಾರ್ಯಕ್ರಮ ಇಲ್ಲಿಗೇ ನಿಲ್ಲುವುದಿಲ್ಲ. ಪ್ರತಿ ಹದಿನೈದು ದಿನಗಳಿಗೊಮ್ಮೆ ಅಭಿಯಾನ ಮುಂದುವರಿಯಲಿದೆ ಎಂದು ಹೇಳಿದರು.