ಬೆಂಗಳೂರು(ಅ.21): ನಗರದಲ್ಲಿ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್‌, ಗೋವಿಂದರಾಜನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡು ಅಕ್ಷರಶಃ ದ್ವೀಪದಂತಾಗಿದ್ದವು. ಮನೆಗಳಿಗೆ ನೀರು ನುಗ್ಗಿ, ಬೈಕು ಹಾಗೂ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದವು. ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡು ಜನರು ಪರದಾಡಿದ್ದಾರೆ. 

ಮಂಗಳವಾರ ದಿನವಿಡೀ ಮೋಡ ಕವಿದ ವಾತಾವರಣ ಕಂಡ ಬಂತು ಸಂಜೆ ವೇಳೆಗೆ ಆರಂಭವಾದ ಧಾರಾಕಾರ ಮಳೆ ತಡ ರಾತ್ರಿವರೆಗೆ ಸುರಿಯಿತು. ನಗರದ ದಕ್ಷಿಣ, ಪಶ್ಚಿಮ ಮತ್ತು ಆರ್‌.ಆರ್‌.ನಗರ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್‌, ಗೋವಿಂದರಾಜನಗರ, ಶಂಕರಪ್ಪ ಲೇಔಟ್‌, ಬಿಇಎಂಎಲ್‌ ಮೂರನೇ ಹಂತ ಸೇರಿದಂತೆ ವಿವಿಧ ಭಾಗದ 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಭಾನುವಾರ ತಡರಾತ್ರಿ ಮಳೆಗೆ ಜಲಾವೃತಗೊಂಡಿದ್ದ ಮಲ್ಲತ್ತಹಳ್ಳಿಯ ಎನ್‌ಜಿಎಫ್‌ ಬಡಾವಣೆಯ ಅನೇಕ ಮನೆಗಳಿಗೆ ಮತ್ತೆ ಮಂಗಳವಾರದ ಮಳೆಗೂ ನೀರು ನುಗ್ಗಿ ಅವಾಂತರ ಉಂಟಾಗಿದೆ. ರಾಜರಾಜೇಶ್ವರಿ ನಗರದ ಕಾಫಿಕಟ್ಟೆ ಹೋಟಲ್‌, ಕೆರೆಕೊಡಿಯ ಸೆಲ್ಲಾರಹಳ್ಳಿಯಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮಳೆ ನೀರು ವಾಹನ ನಿಲುಗಡೆಯ ಸೆಲ್ಲರ್‌ಗಳಿಗೆ ನುಗ್ಗುವ ಜೊತೆ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ 20 ಬೈಕ್‌ ಹಾಗೂ 10ಕ್ಕೂ ಹೆಚ್ಚು ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇನ್ನು ಜೆ.ಪಿ.ನಗರ, ಆರ್‌.ಆರ್‌.ನಗರದಲ್ಲಿ ತಲಾ ಒಂದು ಮರ ಹಾಗೂ ಮರ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ.

ಸಿಲಿಕಾನ್ ಸಿಟಿ ಜನರೇ ಎಚ್ಚರ... ಅಬ್ಬರಿಸಲಿದ್ದಾನೆ ವರುಣ

ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು:

ರಾಜರಾಜೇಶ್ವರಿ ನಗರದ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ ಪರಿಣಾಮ ಮದುವೆ ಸಂಭ್ರಮಕ್ಕೆ ಅಡ್ಡಿ ಉಂಟಾಯಿತು. ಅಡುಗೆ ಮನೆ ಹಾಗೂ ಊಟದ ಸಭಾಂಗಣ ಸೇರಿದಂತೆ ಇಡೀ ಕಲ್ಯಾಣ ಮಂಟಪ ಜಲಾವೃತಗೊಂಡಿತು. ಮದುವೆ ಆಗಮಿಸಿದ ಸಂಬಂಧಿಕರು ಮತ್ತು ಬಂಧು ಮಿತ್ರರ ಬೈಕು, ಕಾರು ಸೇರಿದಂತೆ ಇನ್ನಿತರೆ ವಾಹನಗಳು ನೀರಿನಲ್ಲಿ ಮುಳುಗಡೆಯಾದವು. ಬಳಿಕ ಮನೆಗೆ ಹೋಗುವುದಕ್ಕೂ ಪರದಾಡಿದರು.

ತುಂಬಿ ನಿಂತ ರಸ್ತೆಗಳು:

ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆ ಮೇಲ್ಭಾಗದಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಯಾಗಿ ವಾಹನ ಸವಾರರು ಪರದಾಡಬೇಕಾಯಿತು. ವಿಜಯನಗರ ಮುಖ್ಯರಸ್ತೆ, ವಿಲ್ಸನ್‌ಗಾರ್ಡ್‌ನ್‌ ಹಾಗೂ ನಾಯಂಡಹಳ್ಳಿ ಜಂಕ್ಷನ್‌, ಮೆಜೆಸ್ಟಿಕ್‌, ಕೆ.ಆರ್‌.ವೃತ್ತ, ಕಾರ್ಪೊರೇಷನ್‌, ಶಾಂತಿನಗರ ಸೇರಿದಂತೆ ಹಲವು ರಸ್ತೆಗÜಳ ಮೇಲೆ ಎರಡು ಅಡಿಗೂ ಹೆಚ್ಚು ನೀರು ಕಂಡು ಬಂತು. ಓಕಳಿಪುರಂ, ಶಿವಾನಂದ ವೃತ್ತ ಸೇರಿ ಕೆಲವು ಅಂಡರ್‌ಪಾಸ್‌ಗಳಲ್ಲಿ ವಾಹನ ಸವಾರರು ಪರದಾಡಿದರು.

ಅ.22ರ ವರೆಗೆ ಮಳೆ?

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಗಾಳಿಯ ತೀವ್ರತೆ ಹೆಚ್ಚಾಗಿದ್ದರ ಪರಿಣಾಮ ರಾಜಧಾನಿಯಲ್ಲಿ ಮಳೆ ಬೀಳುತ್ತಿದೆ. ಮೋಡ ಕವಿದ ವಾತಾವರಣ ಹಾಗೂ ಆಗಾಗ ಕಂಡು ಬರುತ್ತಿರುವ ಬಿಸಿಲಿನ ವಾತಾವರಣವೆ ಇನ್ನೆರಡು ದಿನ ಮುಂದುವರಿಯವ ಸಾಧ್ಯತೆ ಇದೆ. ನಗರದ ಕೆಲವು ಕಡೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಬೀಳಲಿದೆ. ಮುಂದಿನ 48 ಗಂಟೆಯಲ್ಲಿ ತಾಪಮಾನ ಗರಿಷ್ಠ 26 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟು ಮಳೆ:

ನಗರದಲ್ಲಿ ಮಂಗಳವಾರ ರಾತ್ರಿ 9.30ರ ವೇಳೆಗೆ ಸರಾಸರಿ 20.79 ಮಿ.ಮೀ. ಮಳೆಯಾದ ವರದಿಯಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಅತೀ ಹೆಚ್ಚು 78.5 ಮಿ.ಮೀ ಮಳೆಯಾಗಿದೆ. ಉಳಿದಂತೆ ಕೆಂಗೇರಿ ಮತ್ತು ಬೇಗೂರು ತಲಾ 68.5, ಗೊಟ್ಟಿಗೆರೆ 64, ನಾಗರಭಾವಿ 60, ಜ್ಞಾನಭಾರತಿ, ವಿದ್ಯಾಪೀಠ ಹಾಗೂ ಲಕ್ಕಸಂದ್ರ ತಲಾ 56.5, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ 52, ಮಾರುತಿ ಮಂದಿರ, ವಿವಿಪುರಂ ಮತ್ತು ಪಟ್ಟಾಭಿರಾಮ ನಗರ ತಲಾ 48.5, ಉತ್ತರಹಳ್ಳಿ, ಹಂಪಿನಗರ ಹಾಗೂ ಜ್ಞಾನಭಾರತಿ ಕ್ಯಾಂಪಸ್‌ ತಲಾ 47.5, ಅರಕೆರೆ 43, ಬಿಟಿಎಂ ಬಡಾವಣೆ, ಬಸವನಗುಡಿ ಹಾಗೂ ಸಾರಕ್ಕಿ ತಲಾ 42.5, ದೂರೆಸಾನಿ ಪಾಳ್ಯ 42, ಕೋಣನಕುಂಟೆ 40, ಚಾಮರಾಜಪೇಟೆ 39, ಸಿಂಗಸಂದ್ರ 32, ಕೊಟ್ಟಿಗೆಪಾಳ್ಯ 29.5 ಮಿ.ಮೀ ಮಳೆ ಬಿದ್ದಿದೆ.