ಮುಂಗಾರು ರಾಜ್ಯಕ್ಕೆ ಪ್ರವೇಶವಾಗಿದೆ. ಇನ್ನು ಕಳೆದ ವರ್ಷ ಭಾರೀ ಪ್ರವಾಹದಿಂದ ನಲುಗಿದ್ದ ಕೊಡಗಿಗೆ ಇಂತಹ ವಾಹನಗಳಿಗೆ ನಿಷೇಧ ಹೇರಲಿದೆ. 

ಮಡಿಕೇರಿ: ಮಳೆಗಾಲ ಮುಗಿಯುವರೆಗೆ ಕೊಡಗಿನಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮನಿ ಜಾಯ್‌ ಆದೇಶ ಹೊರಡಿಸಿದ್ದಾರೆ.

ಮಳೆಗಾಲದಲ್ಲಿ ಭಾರೀ ವಾಹನ ಸಾಗಾಟದಿಂದ ರಸ್ತೆ ಹದಗೆಡುವುದರಿಂದಾಗಿ ಹಾಗೂ ಸಾರ್ವಜನಿಕ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ ಮರಳು, ಮರದ ದಿಮ್ಮಿ ಸಾಗಣೆ ಹಾಗೂ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. 16,200 ಕೆ.ಜಿ.ಗಿಂತ ಹೆಚ್ಚಿನ ತೂಕ ಸಾಗಣೆ ಮಾಡದಂತೆ ಆದೇಶಿಸಲಾಗಿದೆ.

ಟ್ರಕ್‌, ಮಲ್ಟಿಆ್ಯಕ್ಸಲ್, ಬುಲೆಟ್‌ ಟ್ಯಾಂಕರ್‌, ಕಾರ್ಗೋ ಕಂಟೈನರ್ಸ್‌ ಸಂಚಾರ ನಿಷೇಧಿಸಲಾಗಿದ್ದು, ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸಾರ್ವಜನಿಕ ಬಸ್‌ಗಳಿಗೆ, ಸರ್ಕಾರಿ ಕೆಲಸಕ್ಕೆ ಬಳಸುವ ಭಾರೀ ವಾಹನ, ಶಾಲಾ ಕಾಲೇಜು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.