ಬೆಂಗಳೂರು [ಅ.05]:  ದಸರಾ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರಜೆ ಪರಿಣಾಮ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ರಾಜ್ಯದ ಇತರೆ ನಗರಗಳು ಹಾಗೂ ಹೊರ ರಾಜ್ಯಕ್ಕೆ ತೆರಳಲು ಮುಂದಾಗಿದ್ದರಿಂದ ನಗರದ ಬಸ್‌, ರೈಲು ನಿಲ್ದಾಣವಿರುವ ಮೆಜೆಸ್ಟಿಕ್‌ ಪ್ರದೇಶ ಅಕ್ಷರಶಃ ಗಿಜಿಗಿಜಿ ಗಟ್ಟಿತ್ತು.

ಈ ಭಾರಿ ಜನಸಂದಣಿಯ ವೇಳೆಯೇ ಭರ್ಜರಿ ಮಳೆಯೂ ಆಗಿದ್ದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹುದೇ ಪರಿಸ್ಥಿತಿ ಮೈಸೂರು, ತುಮಕೂರು ಹಾಗೂ ಬಳ್ಳಾರಿ ಹೆದ್ದಾರಿಗಳಲ್ಲೂ ನಿರ್ಮಾಣವಾಗಿತ್ತು.

ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ, ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ನೆರೆದಿದ್ದರು. ಸಂಜೆಯಿಂದಲೇ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳತ್ತ ಪ್ರಯಾಣಿಕರು ದೌಡಾಯಿಸುತ್ತಿದ್ದರು. ಧಾರಾಕಾರ ಸುರಿದ ಮಳೆಯನ್ನೂ ಲೆಕ್ಕಿಸದೆ ಊರುಗಳಿಗೆ ತೆರಳಲು ನಿಲ್ದಾಣಗಳಿಗೆ ಬರುತ್ತಿದ್ದರು. ಒಂದೆಡೆ ಮಳೆ ಹಾಗೂ ಮತ್ತೊಂದೆಡೆ ವಾಹನ ಸಂಚಾರ ದಟ್ಟಣೆಯಿಂದ ಮೆಜೆಸ್ಟಿಕ್‌ ಸುತ್ತಮುತ್ತಲ ರಸ್ತೆಗಳಲ್ಲಿ ಸವಾರರು ಕೆಲ ಕಾಲ ಪಡಿಪಾಟಲುಪಟ್ಟರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏಕಕಾಲಕ್ಕೆ ನಗರದ ಹಲವೆಡೆ ಮಳೆ ಸುರಿದಿದ್ದರಿಂದ ವಿವಿಧ ಸ್ಥಳಗಳಿಂದ ಮೆಜೆಸ್ಟಿಕ್‌ ಪ್ರದೇಶಕ್ಕೆ ಬರುವವರು ತೊಂದರೆ ಅನುಭವಿಸಿದರು. ಕೆಲವರು ಚಿಕ್ಕ ಮಕ್ಕಳು, ಪೋಷಕರು ಸೇರಿದಂತೆ ಹಿರಿಯ ನಾಗರಿಕರೊಂದಿಗೆ ಬಸ್‌ ಹಾಗೂ ರೈಲು ನಿಲ್ದಾಣಗಳಿಗೆ ಬಂದಿದ್ದರು. ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲು, ಆಟೋ, ಓಲಾ-ಉಬರ್‌ ಟ್ಯಾಕ್ಸಿಗಳು, ಬಾಡಿಗೆ ಬೈಕ್‌ಗಳಲ್ಲಿ ಬಸ್‌ ನಿಲ್ದಾಣ ತಲುಪಿದರು. ಒಂದೆಡೆ ಪ್ರಯಾಣಿಕರ ದಟ್ಟಣೆ ಮತ್ತೊಂದೆಡೆ ವಾಹನಗಳ ದಟ್ಟಣೆ ನಿಯಂತ್ರಿಸುವಲ್ಲಿ ಸಂಚಾರ ಪೊಲೀಸರು ಹರಸಾಹಸಪಟ್ಟರು.

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ದೂರದ ಜಿಲ್ಲೆಗಳ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇನ್ನು ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತೆಲಂಗಾಣದ ವಿವಿಧ ನಗರಗಳಿಗೆ ಹೆಚ್ಚಿನ ಮಂದಿ ಪ್ರಯಾಣಿಸಿದರು. ಕೆಎಸ್‌ಆರ್‌ಟಿಸಿಯ ನಾಲ್ಕು ಟರ್ಮಿನಲ್‌ಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ಬಿಎಂಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣಗಳಲ್ಲೂ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು. ಹಬ್ಬದ ರಜೆಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿದ್ದರಿಂದ ಬಹುತೇಕ ಬಸ್‌ಗಳು ಭರ್ತಿಯಾಗಿದ್ದವು. ನಗರದ ಮೌರ್ಯ ವೃತ್ತ, ಆನಂದ ರಾವ್‌ ವೃತ್ತ, ರೇಸ್‌ಕೋರ್ಸ್‌ ರಸ್ತೆಗಳಿಂದ ಹೊರಡುವ ಖಾಸಗಿ ಬಸ್‌ಗಳು ಪ್ರಯಾಣಿಕರು ತಮ್ಮ ಊರುಗಳಿಗೆ ಪ್ರಯಾಣಿಸಿದರು.