ಶಿವಾನಂದ ಗೊಂಬಿ

ಹುಬ್ಬಳ್ಳಿ(ನ.25): ರಾಜ್ಯದ ಎರಡನೆಯ ದೊಡ್ಡ ನಗರ, ವಾಣಿಜ್ಯನಗರಿ ಎಂದೆಲ್ಲ ಹೆಸರು ಪಡೆದಿರುವ ಹುಬ್ಬಳ್ಳಿಯ ಪ್ರಮುಖ ವೃತ್ತ ಚೆನ್ನಮ್ಮ ವೃತ್ತ. ಚೆನ್ನಮ್ಮ ವೃತ್ತದಲ್ಲಿ ನಿರಂತರ ಟ್ರಾಫಿಕ್‌ಜಾಮ್‌.ಇದಕ್ಕಾಗಿ ಇಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಕಳೆದ ವರ್ಷವೇ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದಾಗಿದೆ. ಆ ವರದಿ ಇದೀಗ ಮೂಲೆ ಸೇರಿದೆ.

ಚೆನ್ನಮ್ಮ ವೃತ್ತ ಹುಬ್ಬಳ್ಳಿಯ ಹೃದಯ ಭಾಗ. ಆರು ದಿಕ್ಕುಗಳಿಂದಲೂ ನಿರಂತರ ವಾಹನಗಳ ಸಂಚಾರ ಇದ್ದೆ ಇರುತ್ತದೆ. ಈ ಸರ್ಕಲ್‌ನಿಂದ ದಾಟಿ ಹೋಗಬೇಕೆಂದರೆ ಜೀವ ಕೈಯಲ್ಲಿಡಿದುಕೊಂಡೇ ಹೋಗುವಂತಹ ಸ್ಥಿತಿ. ಈ ಸರ್ಕಲ್ ‌ದಾಟಬೇಕೆಂದರೆ ಕನಿಷ್ಠವೆಂದರೂ 10-15 ನಿಮಿಷಗಳೇ ಬೇಕಾಗುತ್ತೆ. ಬೇಗನೆ ಕಚೇರಿಗೆ ಹೋದರಾಯ್ತು ಎಂದುಕೊಂಡು ಮನೆ ಬಿಟ್ಟರೆ ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿ ಕಚೇರಿಗೆ ತಡವಾಗಿ ಹೋಗುವುದು ಮಾಮೂಲಿ. ಈ ಕಾರಣದಿಂದಾಗಿ ‘ಇನ್‌ಸ್ಟಿಟ್ಯೂಟ್‌ಆಫ್‌ಅರ್ಬನ್‌ಟ್ರಾನ್ಸ್‌ಪೋರ್ಟ್‌ಆಫ್‌ಇಂಡಿಯಾ’ (ಐಯುಟಿಐ) ಸಹಯೋಗದಲ್ಲಿ ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಮಹಾದೇವ ಮುಂಜಿ, ಅಶೋಕ ಪಾಟೀಲ, ಆರ್‌.ಎಲ್‌. ಕುಮಾರಸ್ವಾಮಿ ಇದ್ದ ತಂಡ ಅಧ್ಯಯನ ನಡೆಸಿತು.

ಸುಮಾರು 200 ಪುಟಗಳ ವರದಿ. ಅದರಲ್ಲಿ ಯಾವ್ಯಾವ ಇಲಾಖೆಗಳು ಏನೇನು ಕ್ರಮ ಕೈಗೊಂಡರೆ ಟ್ರಾಫಿಕ್‌ಜಾಮ್‌ಕಿರಿಕಿರಿ ತಪ್ಪುತ್ತದೆ, ಸುಗಮ ಸಂಚಾರಕ್ಕೆ ಅನುಕೂಲವಾಗುತ್ತೆ ಎಂಬೆಲ್ಲ ಸಲಹೆಗಳನ್ನು ಅದರಲ್ಲಿ ನೀಡಲಾಗಿತ್ತು. ತಕ್ಷಣ ಕೈಗೊಳ್ಳಬೇಕಾದ ಕ್ರಮಗಳೇನು? ದೀರ್ಘಕಾಲಿಕ ಕ್ರಮಗಳೇನು? ಕಾನೂನಾತ್ಮಕ ಕ್ರಮಗಳೇನು? ಎಂಬ ಬಗ್ಗೆ ವಿವರವಾಗಿ ಮಾಹಿತಿಯುಳ್ಳ ವರದಿಯನ್ನು ತಯಾರಿಸಲಾಗಿತ್ತು. ಅದನ್ನು ಅನುಷ್ಠಾನಾಧಿಕಾರಿಗಳಾದ ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್‌ಆಯುಕ್ತರು ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡಲಾಗಿದೆ.

ಏಕಸ್‌ ಕಂಪನಿಯಿಂದ 3540 ಕೋಟಿ ಹೂಡಿಕೆ, ಸಾವಿವಾರು ಉದ್ಯೋಗ ಸೃಷ್ಟಿ: ಪ್ರಹ್ಲಾದ ಜೋಶಿ

ಮೂಲೆ ಸೇರಿದ ವರದಿ:

ವರದಿಯನ್ನು ಸಿದ್ಧಪಡಿಸಿ 2019ರ ಸೆಪ್ಟೆಂಬರ್‌ನಲ್ಲಿ ನೀಡಲಾಗಿದೆ. ಅದು ಇನ್ನೂ ಅನುಷ್ಠಾನ ಆಗಿಲ್ಲ. ಇದರಿಂದಾಗಿ ಈಗಲೂ ಟ್ರಾಫಿಕ್‌ಜಾಮ್‌ಕಿರಿಕಿರಿ ಮಾತ್ರ ತಪ್ಪುತ್ತಿಲ್ಲ. ಇನ್ನಾದರೂ ವಾಹನ ದಟ್ಟಣೆ ಕಡಿಮೆ ಮಾಡಲು ಆ ವರದಿಯನ್ನು ಅನುಷ್ಠಾನಗೊಳಿಸಬೇಕು ಎನ್ನುವುದು ನಾಗರಿಕರ ಆಗ್ರಹ. ಒಂದು ವರ್ಷದ ಹಿಂದೆ ಇಷ್ಟಿತ್ತು ದಟ್ಟಣೆ. ಈಗ ಇದಕ್ಕಿಂತಲೂ ಹೆಚ್ಚಿದೆ.

- 158396 ದ್ವಿಚಕ್ರ ವಾಹನ
- 31586 ಕಾರುಗಳು
- 14275 ಆಟೋಗಳು
- 4210 ಟ್ರಕ್‌ಮತ್ತು ಲಾರಿ
- 4096 ಬಸ್‌ಗಳು
- 3558 ಮಲ್ಟಿಲಿಕ್ವಲ್‌ಆರ್ಟಿಕ್ಯಲೆಟೆಡ್‌ವಾಹನ
- 2258 ಕ್ಯಾಬ್‌ಗಳು
- 6705 ಇತರೆ ವಾಹನಗಳು
- ಒಟ್ಟು 225084 ವಾಹನಗಳ ಸಂಚಾರ

ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಅಧ್ಯಯನ ನಡೆಸಿ ವರದಿಯನ್ನು ಸಂಬಂಧಪಟ್ಟಇಲಾಖೆಗಳಿಗೆ ಸಲ್ಲಿಸಲಾಗಿದೆ. ಸ್ವಲ್ಪ ಮಟ್ಟಿಗೆ ಅನುಷ್ಠಾನವಾಗಿದೆ. ಇನ್ನಷ್ಟು ಆದರೆ ವಾಹನ ದಟ್ಟಣೆ ತಡೆಗಟ್ಟಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರಾಧಿಕಾರಿ ಅಶೋಕ ಪಾಟೀಲ ತಿಳಿಸಿದ್ದಾರೆ.