ಹುಬ್ಬಳ್ಳಿ(ನ.25): ಹುಬ್ಬಳ್ಳಿಯಲ್ಲಿ ಏಕಸ್‌ ಕಂಪನಿ 3540 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಕಂಪನಿಯೂ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಬಾಳಿಕೆ ಬರುವ ಸರಕುಗಳ ಕ್ಲಸ್ಟರ್‌ ಆರಂಭಿಸಲು ಯೋಜಿಸಿದೆ. ಈ ಹೂಡಿಕೆಯಿಂದ 20 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಈ ಸಂಬಂಧ ಕಂಪನಿಯ ಚೇರಮನ್‌ ಅರವಿಂದ ಮೆಳ್ಳಿಗೇರಿ, ಎಂಡಿ ಮತ್ತು ಸಿಇಒ ರಾಜೀವ್‌ ಗೌಲ್‌ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. ಇದು ಇಲ್ಲಿನ ಯುವ ಸಮೂಹದಲ್ಲಿ ಸಂತಸವನ್ನುಂಟು ಮಾಡಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಜೋಶಿ ಅವರನ್ನು ಈ ಇಬ್ಬರು ಮಂಗಳವಾರ ಭೇಟಿಯಾಗಿ ಸಭೆ ನಡೆಸಿದ್ದಾರೆ. ಕಂಪನಿಯೂ ಯಾವ ರೀತಿ ಸರಕುಗಳನ್ನು ತಯಾರಿಸಲಿದೆ. ಅದರಿಂದ ಏನೇನು ಲಾಭ ಎಂಬ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ಬಳಿಕ ಮೆಳ್ಳಿಗೇರಿ ಹಾಗೂ ರಾಜೀವ ಗೌಲ್‌ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಇನ್ವೆಸ್ಟ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ ಬಾಗ್ಲಾ ಅವರನ್ನು ಭೇಟಿಯಾಗಿ ಹೂಡಿಕೆ ಸಂಬಂಧಿಸಿದರಂತೆ ಚರ್ಚೆ ನಡೆಸಿದರು. ಗೋಯಲ್‌ ಅವರು ಅಗತ್ಯ ನೆರವು ನೀಡುವುದಾಗಿ ಭರವಸೆಯನ್ನೂ ನೀಡಿದರು.

ಧಾರವಾಡ ಜಿಲ್ಲೆಯಲ್ಲಿ 6 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ಶೆಟ್ಟರ್‌

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಚಿವ ಜೋಶಿ, ಈ ಹೂಡಿಕೆಯೂ ಭಾರತದ ಮೊದಲ ವಲಯ ನಿರ್ದಿಷ್ಟ ಹೂಡಿಕೆಯಾಗಲಿದೆ. ಪ್ರಧಾನಿ ಮೋದಿ ಅವರ ಕನಸಿನ ಕೂಸಾದ ಆತ್ಮನಿರ್ಭರ ಭಾರತ ಯೋಜನೆಗೆ ಅನುಗುಣವಾಗಿರಲಿದೆ. ಈ ಹೂಡಿಕೆಯಿಂದ 20 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಸಲಿದೆ ಎಂದು ಜೋಶಿ ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಈ ಹೂಡಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಮ್ಮತಿ ಸೂಚಿಸಿತ್ತು ಎಂದು ಜೋಶಿ ಸ್ಮರಿಸಿದ್ದಾರೆ. ಸಿಎಂ ಯಡಿಯೂರಪ್ಪ, ಸಚಿವ ಜಗದೀಶ ಶೆಟ್ಟರ್‌, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಜೋಶಿ ಧನ್ಯವಾದ ಹೇಳಿದ್ದಾರೆ. ಈ ಸಂಬಂಧ ಟ್ವೀಟ್‌ನಲ್ಲೂ ಬರೆದುಕೊಂಡಿದ್ದಾರೆ.