ಕಾಫಿನಾಡ ಪಶ್ಚಿಮ ಘಟ್ಟಗಳ ಸಾಲಲ್ಲಿ ಭಾರೀ ಮಳೆ: ಹೆಬ್ಬಾಳೆ ಸೇತುವೆ ಮುಳುಗಡೆಗೆ ಕ್ಷಣಗಣನೆ
ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜೊತೆಗೆ ಕುದುರೆಮುಖ ಘಟ್ಟ ಪ್ರದೇಶದಲ್ಲಿ ರಾತ್ರಿಯಿಡಿ ಧಾರಾಕಾರ ಮಳೆಯಾಗಿದ್ದು, ಮಳೆ ಅಬ್ಬರಕ್ಕೆ ಭದ್ರಾ ನದಿ ಹರಿವಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ.
ಚಿಕ್ಕಮಗಳೂರು (ಜು.04): ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜೊತೆಗೆ ಕುದುರೆಮುಖ ಘಟ್ಟ ಪ್ರದೇಶದಲ್ಲಿ ರಾತ್ರಿಯಿಡಿ ಧಾರಾಕಾರ ಮಳೆಯಾಗಿದ್ದು, ಮಳೆ ಅಬ್ಬರಕ್ಕೆ ಭದ್ರಾ ನದಿ ಹರಿವಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಮಲೆನಾಡು ಭಾಗದಲ್ಲಿ ನಿರಂತರವಾಗಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದ್ದು, ಕ್ಷಣಗಣನೆ ಆರಂಭವಾಗಿದೆ.
ಹೆಬ್ಬಾಳೆ ಸೇತುವೆಗೆ ಭದ್ರಾ ನೀರು ಅಪ್ಪಳಿಸುತ್ತಿದ್ದು, ಅರ್ಧ-ಒಂದು ಅಡಿ ನೀರು ಬಂದ್ರು ಸೇತುವೆ ಜಲಾವೃತವಾಗಲಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದ್ದು, ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದೆ. ಮುಂಜಾಗೃತ ಕ್ರಮವಾಗಿ ಪ್ರವಾಸಿಗರಿಗರು ಹಾಗೂ ಸ್ಥಳೀಯರಿಗೆ ಪೊಲೀಸರು ತಡೆ ನೀಡಿದ್ದು, ಪ್ರವಾಸಿಗರು ಪೊಲೀಸರ ಜೊತೆಗೆ ಕಿರಿಕ್ ಮಾಡ್ತಿದ್ದಾರೆ. ಇನ್ನು ಯಾವುದೇ ಕ್ಷಣದಲ್ಲಿ ಸೇತುವೆ ಮೇಲೆ ಭದ್ರಾ ನದಿ ನೀರು ಉಕ್ಕುವ ಸಾಧ್ಯತೆ ಯಿದ್ದು, ಸ್ಥಳದಲ್ಲಿಯೇ ಕಳಸ ಪೊಲೀಸರು ಮೊಕಂ ಹೂಡಿದ್ದಾರೆ.
ಮಲೆನಾಡಿನಲ್ಲಿ ಭರ್ಜರಿ ಮಳೆಗೆ ತುಂಗಾ, ಶರಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಗಾಜನೂರಿನ ತುಂಗಾ ಜಲಾಶಯದ 14 ಕ್ರಸ್ಟ್ ಗೇಟ್ ತೆರೆದು ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಬಿರುಸುಗೊಂಡ ಮಳೆಗೆ ಜಲಾಶಯಕ್ಕೆ 60 ಸಾವಿರ ಕ್ಯುಸೆಕ್ ನೀರಿನ ಒಳಹರಿವು. ಜಲಾಶಯದ ನೀರಿನ ಮಟ್ಟ 1760 ಅಡಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ,20 ಅಡಿಯಷ್ಟು ಹೆಚ್ಚು ಸಂಗ್ರಹವಾಗಿದೆ. ಇನ್ನು ಅಂಕೋಲಾದಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತವಾಗಿದ್ದು, 35 ಕುಟುಂಬ ಸ್ಥಳಾಂತರಿಸಲಾಗಿದೆ. 3 ಕಾಳಜಿ ಕೇಂದ್ರ ಆರಂಭಿಸಲಾಗಿದೆ.
ದರ್ಶನ್‌ಗೆ ನಾನು ಮದರ್ ಇಂಡಿಯಾ, ಕೊಲೆ ಮಾಡೋ ವ್ಯಕ್ತಿ ಅವನಲ್ಲ: ಮೌನ ಮುರಿದ ಸುಮಲತಾ!
ಜಲಪಾತ, ಕೆರೆಗಳಿಗೆ ಪ್ರವೇಶ ನಿಷೇಧ: ಮಳೆಗಾಲ ಹಿನ್ನಲೆಯಲ್ಲಿ ಕೊಡಗಿನಾದ್ಯಂತ ಜಲಪಾತ, ಕೆರೆಗಳಿಗೆ ಇಳಿಯುವುದಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿಷೇಧ ಹೇರಿದ್ದಾರೆ. ಮಳೆಗಾಲ ಹಿನ್ನಲೆಯಲ್ಲಿ ಕೊಡಗಿನ ಜಲಪಾತಗಳ ವೀಕ್ಷಣೆಗೆ ಬರುವ ಮುನ್ನ ಎಚ್ಚರಿಕೆ ವಹಿಸಬೇಕು. ಮಳೆ ಹೆಚ್ಚುತ್ತಿರುವ ಹಿನ್ನಲೆ ಕೊಡಗಿನಾದ್ಯಂತ ಜಲಪಾತಗಳು ಬೋರ್ಗರೆಯುತ್ತಿವೆ, ಕೆರೆಗಳು ತುಂಬುತ್ತಿವೆ. ಹೀಗಾಗಿ ನೀರಿನಲ್ಲಿ ಇಳಿದು ಕ್ರೀಡೆ, ಫೋಟೋ ತೆಗೆಯುವ ದುಸ್ಸಾಹಕ್ಕೆ ಜಿಲ್ಲಾಧಿಕಾರಿ ಕಡಿವಾಣ ಹಾಕಿದ್ದಾರೆ. ಕೊಡಗಿನ ಕೆರೆ, ತೊರೆಗಳು, ನದಿಗಳು, ಅಣೆಕಟ್ಟು, ಜಲಪಾತಗಳಲ್ಲಿ ಇಳಿಯುವದಕ್ಕೆ , ಈಜುವುದಕ್ಕೆ ಮತ್ತು ಮಳೆಗಾಲ ಮುಗಿಯುವವರೆಗೂ ಸಾಹಸ ಕ್ರೀಡೆಗಳಿಗೂ ಜಿಲ್ಲಾಡಳಿತ ನಿಷೇಧ ಹೇರಿದೆ. ಆದೇಶ ಉಲ್ಲಂಘಿಸಿದವರ ವಿರುದ್ದ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.