Asianet Suvarna News Asianet Suvarna News

Heavy Rainfall: ನಸುಕಿನ ಮಳೆಗೆ ನಲುಗಿದ ನವಲಗುಂದ

ನವಲಗುಂದದಲ್ಲಿ ಬೆಳಗ್ಗೆಯೇ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದಾರೆ. ಅರ್ಧಗಂಟೆ ಸುರಿದ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಬಿದ್ದಿವೆ.

Heavy rainfall in navalagunda hubballi rav
Author
Hubli, First Published Jul 29, 2022, 11:30 AM IST | Last Updated Jul 29, 2022, 11:31 AM IST

ನವಲಗುಂದ (ಜು.29): ತಾಲೂಕಿನಲ್ಲಿ ಬೆಳಗಿನ ಜಾವ ಸುರಿದ ಭಾರಿ ಮಳೆ ಜನಜೀವನ ತತ್ತರಗೊಳಿಸಿತು. ಅರ್ಧ ಗಂಟೆ ಮಳೆಗೆ 26 ಮನೆಗಳು ಭಾಗಶಃ ನೆಲ ಕಚ್ಚಿದ್ದು, ಹಳ್ಳ ಉಕ್ಕೇರಿದ ಪರಿಣಾಮ ನಾಲ್ಕೈದು ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಮಳೆಯಾಗದ ಕಾರಣ ಸಂಜೆ ವೇಳೆ ನೆರೆ ಇಳಿದಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ನಸುಕಿನ 4 ಗಂಟೆ ಸುಮಾರಿಗೆ ಆರಂಭವಾದ ಮಳೆ(Rain) ಧಾರಾಕಾರವಾಗಿ ಸುರಿಯಿತು. ಪಟ್ಟಣದಲ್ಲಿ 6 ಮನೆಗಳು, ಅಳಗವಾಡಿ(Alagawadi), ತಡಹಾಳ(Tadahala), ಶಿರಕೋಳ(Shirakola), ಪಡೆಸೂರ ತಲಾ 2 ಮನೆಗಳು, ಸೊಟಕನಾಳ, ಚಿಲಕವಾಡ, ಭೋಗಾನೂರು, ಬಳ್ಳೂರ, ಅಮರಗೋಳ, ಬೆಳವಟಗಿ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಹಾಗೂ ಹನಸಿ ಮತ್ತು ಶಾನವಾಡ ತಲಾ 3 ಮನೆಗಳು ಭಾಗಶಃ ನೆಲಕಚ್ಚಿದವು.

Uttara Kannada: ನೆರೆ:ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹ

ಇಲ್ಲಿನ ಬಸವೇಶ್ವರ ನಗರ(Basaveshwar Nagar) ಹಳ್ಳಿಕೇರಿ(Hallikeri Road) ರಸ್ತೆಗೆ ಹೊಂದಿರುವ ಸುಮಾರು 10 ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಸ್ಥಳಕ್ಕೆ ಮಾಜಿ ಸಚಿವ ಕೆ. ಎನ್‌. ಗಡ್ಡಿ ಆಗಮಿಸಿ ನಿವಾಸಿಗಳಿಗೆ ಆಗಿರುವ ತೊಂದರೆಗಳನ್ನು ಆಲಿಸಿ ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ತಮಗೆ ಬೇಕಾಗಿರುವ ರಸ್ತೆ, ಗಟಾರ ನಿರ್ಮಾಣಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸುವ ಭರವಸೆ ನೀಡಿದರು.

ಇನ್ನು ತಾಲೂಕಿನಲ್ಲಿ ಸುರಿದ ಮಳೆಯಿಂದ ಸಣ್ಣಪುಟ್ಟಹಳ್ಳಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರಿಂದ ಬಸ್‌ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ನವಲಗುಂದದಿಂದ ಇಬ್ರಾಹಿಂಪುರ ಮಧ್ಯದಲ್ಲಿ ಎರಡು ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಮಧ್ಯಾಹ್ನದ ವರೆಗೆ ಸಂಪರ್ಕ ಕಡಿತಗೊಂಡಿತ್ತು. ತಡಹಾಳ ಮತ್ತು ಕೊಂಗವಾಡ ಮಧ್ಯದಲ್ಲಿ ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇನ್ನು ಮಣಕವಾಡ ಮತ್ತು ಶಿಶುವಿನಹಳ್ಳಿ ಮಧ್ಯದಲ್ಲಿ ಸೇತುವೆ ನಿರ್ಮಾಣ ಆಗುತ್ತಿರುವುದರಿಂದ ಪರ್ಯಾಯ ರಸ್ತೆ ಕೂಡ ಮಳೆಯ ನೀರಿನಿಂದ ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ಬಳಿಕ ರಸ್ತೆಯಲ್ಲಿ ಬಿಂದಾಸ್ ಓಡಾಟ!

ಪಟ್ಟಣದಿಂದ ಇಬ್ರಾಹಿಂಪುರ ರಸ್ತೆಗೆ ಹೊಂದಿರುವ ಹುರಕಡ್ಲಿ ಅಜ್ಜನವರ ಶಾಲೆಗೆ ಮಕ್ಕಳು ಹೋಗಲು ಹರಸಾಹಸ ಪಡುವಂಥಾಗಿತ್ತು. ಶಾಲೆಗೆ ಹಳ್ಳ ದಾಟಿ ಹೋಗುವ ಪರಿಸ್ಥಿತಿ ಇರುವುದರಿಂದ ಮಕ್ಕಳನ್ನು ಟ್ರ್ಯಾಕ್ಟರ್‌ ಮುಖಾಂತರ ಕರೆದೋಯ್ಯಲಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಅಂಬ್ಲಿ ಹಳ್ಳವು ನೀರು ಕಡಿಮೆಯಾಗಿತ್ತು.

ಸ್ಕ್ಕ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಪುರಸಭೆ ಸದಸ್ಯ ಮಂಜು ಜಾಧವ ಹಾಗೂ ಸ್ಥಳೀಯರಾದ ಮೈಲಾರಪ್ಪ ತಿರಕೋಡಿ, ಅಜುಬ ಭಾರದ್ವಾಲೆ, ಏಕನಾಥ ಜಾಧವ ಹಾಗೂ ಇತರರಿದ್ದರು.

ಜನತೆ ಆಕ್ರೋಶ:

ಬಸವೇಶ್ವರ ನಗರಕ್ಕೆ ಪುರಸಭೆ ಅಧಿಕಾರಿ ಹಾಗೂ ಸದಸ್ಯರು ಭೇಟಿ ನೀಡಿದರು. ಈ ವೇಳೆ ನಿವಾಸಿಗಳು ಆಕ್ರೋಶಗೊಂಡು ಪ್ರತಿ ಬಾರಿ ಮಳೆ ಬಂದಾಗ ನಾವು ಅಂಗೈಯಲ್ಲಿ ಜೀವ ಹಿಡಿದು ಜೀವನ ಮಾಡುವಂತಹ ಪರಿಸ್ಥಿತಿ ಆಗಿದೆ. ಆದಷ್ಟುಬೇಗನೆ ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು. ಇಲ್ಲದಿದ್ದರೆ ಹೋರಾಟವೇ ದಾರಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಈಗಾಗಲೇ ನಗರೋತ್ಥಾನದಲ್ಲಿ ಇದಕ್ಕೆ ಹಣ ಮೀಸಲಿಡಲಾಗಿದೆ. ಆದಷ್ಟುಬೇಗನೆ ಗಟಾರ ಹಾಗೂ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾದ್ಯಂತ ನಸುಕಿನ ವೇಳೆ ಸುಮಾರು ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದು, ಹುಬ್ಬಳ್ಳಿಯಲ್ಲಿ ಸುರಿದ ಮಳೆಯಿಂದಾಗಿ ತೆಗ್ಗು ಪ್ರದೇಶದಲ್ಲಿ ನೀರು ಆವರಿಸಿ ಜನ ಪರದಾಡಿದರು. ಬಳಿಕ ಮೋಡ ಕವಿದ ವಾತಾವರಣ ಉಂಟಾದರೂ ಮಳೆಯಾಗಲಿಲ್ಲ. ಕುಂದಗೋಳ ಹಾಗೂ ಅಣ್ಣಿಗೇರಿ ತಾಲೂಕುಗಳಲ್ಲೂ ನಸುಕಿನಲ್ಲಿ ಮಳೆಯಾಗಿದೆ.

Latest Videos
Follow Us:
Download App:
  • android
  • ios