ಚಿಕ್ಕಮಗಳೂರು(ಆ.05): ಮಲೆನಾಡಿನಲ್ಲಿ ಕಳೆದ ಮೂರು ದಿನಗಳಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯ ಆರ್ಭಟ ಮಂಗಳವಾರವೂ ಜೋರಾಗಿತ್ತು. ಭಾರಿ ಗಾಳಿಗೆ ವಿದ್ಯುತ್‌ ಕಂಬಗಳು, ಮರಗಳು ಬಿದ್ದು ಹಲವೆಡೆ ಬಿದ್ದ ಪರಿಣಾಮ ಪಟ್ಟಣಗಳು ಸೇರಿದಂತೆ ಹಲವು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್‌ ಸರಬರಾಜು ಇಲ್ಲದಂತಾಗಿದೆ.

ಶೃಂಗೇರಿ ತಾಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಬಿಡುವಿಲ್ಲದೇ ಮಳೆ ಸುರಿಯುತ್ತಿದೆ. ಇದರಿಂದ ತುಂಗಾನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ತುಂಗೆಯ ದಡದಲ್ಲಿರುವ ಕಪ್ಪೆ ಶಂಕರ ದೇವಾಲಯ ನೀರಿನಲ್ಲಿ ಮುಳುಗಿದೆ. ನದಿತೀರ ಪ್ರದೇಶದಲ್ಲಿರುವ ತಗ್ಗಿನ ಪ್ರದೇಶಗಳು ಜಲಾವ್ರತವಾಗಿವೆ.

ಕಳೆದ 24 ಗಂಟೆಗಳಿಗೆ ಹೋಲಿಕೆ ಮಾಡಿದರೆ ಮಂಗಳವಾರ ಮೂಡಿಗೆರೆ ತಾಲೂಕಿನಲ್ಲಿ ಮಳೆಯ ಪ್ರಮಾಣ ಏರಿಕೆಯಾಗಿದೆ. ಬಾಳೂರು, ಕೊಟ್ಟಿಗೆಹಾರ, ಕಳಸ, ದಾರದಹಳ್ಳಿ ಬಿಡುವಿಲ್ಲದೆ ಮಳೆ ಸುರಿಯುತ್ತಿರುವ ಜತೆಗೆ ಬಲವಾಗಿ ಗಾಳಿ ಬೀಸುತ್ತಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೇಮಾವತಿ ಹಾಗೂ ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಚಿಕ್ಕಮಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಂಗಳವಾರ ಮಳೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಜನರು ಮನೆಗಳಿಂದ ಹೊರಗೆ ಬರಲಾರದ ಸ್ಥಿತಿ ಇದ್ದು, ನಿರಂತರವಾಗಿ ಥಂಡಿ ಗಾಳಿ ಬೀಸುತ್ತಿದೆ. ಕೊಪ್ಪ, ಎನ್‌.ಆರ್‌.ಪುರ, ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ.

ಗಾಳಿ - ಮಳೆ ಆರ್ಭಟ:

ಶೃಂಗೇರಿ ತಾಲೂಕಿನಾದ್ಯಂತ ಮಳೆ ಮತ್ತು ಗಾಳಿಯ ಆರ್ಭಟ ಮಂಗಳವಾರ ಜೋರಾಗಿತ್ತು. ಮರಗಳು ಬಿದ್ದು ವಿದ್ಯುತ್‌ ಸಂಪರ್ಕ ಅಸ್ತವ್ಯಸ್ತವಾಗಿತ್ತು. ಕೆರೆಕಟ್ಟೆ, ಕಿಗ್ಗಾ, ನೆಮ್ಮಾರು ಸೇರಿದಂತೆ ಗ್ರಾಮೀಣ ಪ್ರದೇಶದ ಹಲವೆಡೆ ಕಳೆದೆರಡು ದಿನಗಳಿಂದ ವಿದ್ಯುತ್‌, ದೂರವಾಣಿ, ಮೊಬೈಲ್‌ ಸಂಪರ್ಕಗಳು ಸ್ಥಗಿತಗೊಂಡಿದೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ಶ್ರೀಮಠದ ತುಂಗಾನದಿ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ನೀರಿನಲ್ಲಿ ಮುಳುಗಿದೆ. ತುಂಗಾನದಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರೆದರೆ ಪ್ರವಾಹ ಸಾಧ್ಯತೆ ಹೆಚ್ಚಿದೆ.

ಭಾರೀ ಗಾಳಿಗೆ ಬಾಳೆ, ಅಡಕೆ ತೋಟಗಳಲ್ಲಿ ಮರಗಳು ಮುರಿದು ಧರೆಗುರುಳುತ್ತಿವೆ. ವಿದ್ಯುತ್‌ ಲೈನ್‌ ಮೇಲೆ ಮರಗಳು ಬೀಳುತ್ತಿವೆ. ಇದರಿಂದ ವಿದ್ಯುತ್‌ ತಂತಿಗಳು, ಕಂಬಗಳು ತುಂಡಾಗಿ ಬೀಳುತ್ತಿವೆ. ಕೆಲವೆಡೆ ಸಣ್ಣ ಪ್ರಮಾಣದ ಗುಡ್ಡ ಕುಸಿತಗಳು ಉಂಟಾಗುತ್ತಿವೆ.

ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆ:

ನರಸಿಂಹರಾಜಪುರ ತಾಲೂಕಿನಲ್ಲಿ ಮಳೆ ಮುಂದುವರಿದಿದ್ದು, ಬಲವಾಗಿ ಬೀಸುತ್ತಿರುವ ಗಾಳಿಯಿಂದ ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆ ಉಂಟಾಗಿದೆ. ಪಟ್ಟಣ ವ್ಯಾಪ್ತಿ, ಗುಬ್ಬಿಗಾ, ಅಳೇಹಳ್ಳಿ, ಹಂತುವಾನಿ, ಕಾನೂರು, ಸೀತೂರು, ಆರಂಬಳ್ಳಿ ಮುಂತಾದ ಕಡೆಗಳಲ್ಲಿ ವಿದ್ಯುತ್‌ ತಂತಿಯ ಮೇಲೆ ಅಕೇಶಿಯಾ ಮರಗಳು ಉರುಳುತ್ತಿದ್ದು ತಂತಿಗಳು ತುಂಡಾಗಿ ಬಿದ್ದಿದೆ. ಗಂಟೆಗೊಮ್ಮೆ ಭಾರಿ ಮಳೆ ಬೀಳುತ್ತಿದ್ದು, ಮತ್ತೆ ಕೆಲವು ಸಮಯ ಮಳೆ ಬಿಡುವು ನೀಡುತ್ತಿದೆ. ಥಂಡಿ ಗಾಳಿ ಬೀಸುತ್ತಿದ್ದು ಮನೆಯಿಂದ ಹೊರಗೆ ಬರದ ವಾತಾವರಣ ನಿರ್ಮಾಣವಾಗಿದೆ.

ತರೀಕೆರೆಯಲ್ಲಿ ದಿನವಿಡೀ ಸುರಿದ ಮಳೆ:

ತರೀಕೆರೆ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ, ಮಂಗಳವಾರ ದಿನವಿಡೀ ಉತ್ತಮವಾಗಿ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಶುರುವಾದ ಮಳೆಯು ಪಟ್ಟಣದಲ್ಲಿ ಕೆಲವೊಮ್ಮೆ ಸಾಧಾರಣವಾಗಿ ಮತ್ತು ಕೆಲವೊಮ್ಮೆ ಧಾರಾಕಾರವಾಗಿ ಸುರಿಯಿತು. ದಿನವಿಡೀ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದಾಗಿ ರಸ್ತೆ ಚರಂಡಿಗಳಲ್ಲಿ ಯಥೇಚ್ಚವಾಗಿ ನೀರು ತುಂಬಿ ಹರಿಯಿತು. ಮಳೆಯ ಜೊತೆ ಥಂಡಿ ಗಾಳಿಯೂ ಕೂಡ ಬೀಸುತ್ತಿದೆ.

ಜನ ಜೀವನ ಅಸ್ತವ್ಯಸ್ತ:

ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸೋಮವಾರದ ಬಳಿಕ ಬಿರುಸುಗೊಂಡಿದೆ. ಸೋಮವಾರ ರಾತ್ರಿ ಒಂದೇ ಸಮನಾಗಿ ಸುರಿದಿದೆ. ಮಂಗಳವಾರವೂ ಇಡೀ ದಿನ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯೊಂದಿಗೆ ಭಾರಿ ಪ್ರಮಾಣದಲ್ಲಿ ಗಾಳಿಯೂ ಸಹ ಬೀಸುತ್ತಿದೆ. ಕುದುರೆಮುಖ, ಕಳಸ ಭಾಗದಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಕಾರಣ ಭದ್ರಾನದಿಯಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಗೊಂಡು ಅಪಾಯದಂಚಿನಲ್ಲಿ ಭದ್ರೆ ಹರಿಯುತ್ತಿದ್ದಾಳೆ. ಪಟ್ಟಣದ ಚಿಕ್ಕಮಗಳೂರು ರಸ್ತೆಯಲ್ಲಿ ಭದ್ರಾನದಿಗೆ ನೂತನವಾಗಿ ಕಟ್ಟುತ್ತಿರುವ ಸೇತುವೆ ಫಿಲ್ಲರ್‌ವೊಂದರ ರಾಡ್‌ಗಳು ನೀರಿನ ಹರಿವಿನ ರಭಸಕ್ಕೆ ವಾಲಿಕೊಂಡು ಹೋಗಿವೆ.

ಖರ್ಚಿಲ್ಲದೆ ಔಷಧಿಗುಣವುಳ್ಳ ಮಾಸ್ಕ್, ಮನಗೆದ್ದ ಬುಡಕಟ್ಟು ಐಡಿಯಾ!

ಪಟ್ಟಣದ ಹೊಳೆಬಾಗಿಲು ಗ್ರಾಮದ 5 ಮನೆಗಳಿಗೆ ಭದ್ರಾನದಿಯ ಪ್ರವಾಹದ ನೀರು ನುಗ್ಗಬಹುದು ಎಂಬ ಹಿನ್ನೆಲೆಯಲ್ಲಿ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿ ನಾಡಕಚೇರಿ ವತಿಯಿಂದ ನೋಟಿಸ್‌ ಜಾರಿ ಮಾಡಲಾಗಿದೆ. ಇನ್ನುಳಿದಂತೆ ಬಂಡಿಮಠ, ಮಾರ್ಕೆಟ್‌ ರಸ್ತೆ ಹಾಗೂ ಎನ್‌.ಆರ್‌.ಪುರ ರಸ್ತೆಯ ಅಂಗಡಿ ಮುಂಗಟ್ಟು ಮಾಲೀಕರು, ವಾಸವಿರುವ ನಿವಾಸಿಗಳಿಗೆ ಕಳೆದ ವರ್ಷದಂತೆ ಈ ವರ್ಷವೂ ಪ್ರವಾಹ ಬರುವ ಸಾಧ್ಯತೆ ಇರುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಾಡ ಕಚೇರಿಯಿಂದ ಸೂಚಿಸಲಾಗಿದೆ. ಗಾಳಿಯ ಪರಿಣಾಮ ಸೋಮವಾರ ರಾತ್ರಿಯಿಂದಲೇ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕೆಲವು ಕಡೆಗಳಲ್ಲಿ ವಿದ್ಯುತ್‌ ಲೈನ್‌ ಮೇಲೆ ಮರ, ಕೊಂಬೆಗಳು ಬಿದ್ದು ಲೈನ್‌ ತುಂಡಾಗಿವೆ.

ಕಡೂರಿನಲ್ಲಿ ಸೋನೆ ಜಡಿಮಳೆ:

ಕಡೂರು ಆಶ್ಲೇಷ ಮಳೆಯು ಮಂಗಳವಾರ ಪಟ್ಟಣದಲ್ಲಿ ಬೆಳಗಿನ ಜಾವದಿಂದ ಸಂಜೆಯವರೆಗೂ ಜಡಿಮಳೆಯಂತೆ ಸುರಿಯಿತು. ಕಳೆದ ನಾಲ್ಕು ದಿನಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ಬರುತ್ತಿದ್ದ ಮಳೆ ಕಡೂರು ಪಟ್ಟಣ, ಬೀರೂರು ಪಟ್ಟಣದಲ್ಲಿ ಸ್ವಲ್ಪ ಮಟ್ಟಿಗೆ ಬಿಡುವು ಕೊಟ್ಟಿತ್ತು. ಆದರೆ ಮಂಗಳವಾರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆ ನಿರಂತರವಾಗಿ ಮಳೆ ಸುರಿಯಿತು. ತಾಲೂಕಿನ ಮತ್ತಿಘಟ್ಟ, ಸಖರಾಯಪಟ್ಟಣ, ಸಿಂಗಟಗೆರೆ, ಹಿರೇನಲ್ಲೂರು ಹೋಬಳಿ ಸೇರಿದಂತೆ ತಾಲೂಕಿನ ಎಲ್ಲೆಡೆ ಉತ್ತಮವಾಗಿ ಮಳೆ ಬಿದ್ದಿರುವ ವರದಿಗಳು ಬಂದಿದೆ.