*  ಸಂಜೆ ಗುಡುಗು ಸಹಿತ ಧಾರಾಕಾರ ಮಳೆ*  ತಗ್ಗು ಪ್ರದೇಶಗಳಿಗೆ ನುಗ್ಗಿದ ಕೊಳಚೆ ನೀರು*  ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ವ್ಯಾಪಾರ ನಷ್ಟ 

ಬೆಂಗಳೂರು(ನ.16): ನಗರದಲ್ಲಿ(Bengaluru) ಸೋಮವಾರ ಸಂಜೆ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ(Rain) ನಾಲ್ಕು ಮರ ಉರುಳಿದ್ದು, ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಿದರು. ಕೆಲವು ಮನೆಗಳಿಗೆ ಮಳೆಯೊಂದಿಗೆ ಕೊಳಚೆ ನೀರು ನುಗ್ಗಿದ ಪರಿಣಾಮ ಪರಿತಪಿಸಿದರು. ಹಲವಾರು ಮುಖ್ಯರಸ್ತೆಗಳು ಹಾಗೂ ರಸ್ತೆ ಅಂಡರ್‌ಪಾಸ್‌ಗಳು ಕೆರೆಯಂತಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕೆಲವು ದಿನಗಳಿಂದ ತುಂತುರು ರೂಪದಲ್ಲಿದ್ದ ಹಿಂಗಾರು ಸೋಮವಾರ ಸಂಜೆ 6ರ ನಂತರ ಅಬ್ಬರಿಸಿತು. ಬೆಳಗ್ಗೆಯಿಂದಲೇ ಹಲವೆಡೆ ಅಲ್ಲಲ್ಲಿ ಚದುರಿದಂತೆ ಮಳೆ ಬಿದ್ದರೆ, ಸಂಜೆ ಬಂದ ಧಾರಾಕಾರ ಮಳೆಗೆ ಹೆಬ್ಬಾಳ, ಆನಂದ ನಗರ ಮತ್ತು ಏರ್‌ಟೆಲ್‌ ಕಚೇರಿ ಬಳಿ, ವಿನೋಬಾ ಕಾಲೋನಿಯ ವಾರ್ಡ್‌ 156ರಲ್ಲಿ ತಲಾ ಒಂದು ಮರ ಉರುಳಿಬಿದ್ದವು. ಜನರ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಬಿಬಿಎಂಪಿ(BBMP) ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.

15ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು:

ಬಾಣಸವಾಡಿ ರೈಲು ನಿಲ್ದಾಣ ಹಿಂಭಾಗ ಒಂದು ಮನೆ, ಸರ್ವಜ್ಞ ನಗರ ಕಾಳಮ್ಮ ರಸ್ತೆಯಲ್ಲಿನ ನಾಲ್ಕು ಮನೆಗಳು, ಕಾವಲ್‌ ಬೈರಸಂದ್ರದ ಕಾವೇರಿ ನಗರದ ಎ.ಬ್ಲಾಕ್‌ನಲ್ಲಿನ ಸುಮಾರು 8 ಮನೆಗಳಿಗೆ ನೀರು(Water) ನುಗ್ಗಿದೆ. ಇನ್ನು ಕೆಲವು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಕೊಳಚೆ ಸಹಿತ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮನೆಗೆ ನುಗ್ಗಿದ ದುರ್ವಾಸನೆಯ ಮಳೆ ನೀರನ್ನು ಹೊರಹಾಕಲು ಮನೆ ಮಂದಿಯೆಲ್ಲಾ ಪರದಾಡಿದರು. ನಾಗವಾರದಲ್ಲಿ ಮನೆಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿದ್ದರಿಂದ ವ್ಯಾಪಾರವೆಲ್ಲ ಹಾಳಾಯಿತು. ಮಾಲೀಕರಿಗೆ ನೀರು ಹೊರಹಾಕುವುದೇ ತಲೆನೋವಾಯಿತು.

ಬೆಂಗ್ಳೂರಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಸುಕಿದ ವಾತಾವರಣ

ಸುಮ್ಮನಹಳ್ಳಿ ಜಂಕ್ಷನ್‌, ನಾಯಂಡಹಳ್ಳಿ ಜಂಕ್ಷನ್‌, ಎಂಜಿ ರಸ್ತೆ, ಅನಿಲ್‌ ಕುಂಬ್ಳೆ ವೃತ್ತ, ಟ್ರಿನಿಟಿ ವೃತ್ತದ ಸಮೀಪ, ರೇಸ್‌ಕೋರ್ಸ್‌ ರಸ್ತೆ, ಕೆ.ಆರ್‌.ವೃತ್ತ, ರಾಜಾಜಿ ನಗರ, ಶೇಷಾದ್ರಿಪುರಂ ಮತ್ತು ಹಂಪಿನಗರದ ಕೆಲವು ರಸ್ತೆಗಳಲ್ಲಿ ಕೆಲ ಸಮಯ ಮಳೆ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು. ಶಿವಾನಂದ ವೃತ್ತದ ರೈಲ್ವೆ ಬ್ರಿಡ್ಜ್‌ ಕೆಳಗೆ ಸುಮಾರು 2 ಅಡಿಯಷ್ಟುನೀರು ಕೋಡಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು. ಕೆಲವು ರಸ್ತೆ ಅಂಡರ್‌ಪಾಸ್‌ಗಳಲ್ಲಿ ಒಳಚರಂಡಿ ಸಹಿತ ಮಳೆ ನೀರು ಉಕ್ಕಿ ಹರಿಯಿತು.

ಯಲಹಂಕ, ಅಟ್ಟೂರು, ಹೂಡಿ, ಬನಶಂಕರಿ, ಜಯನಗರ, ಹೆಬ್ಬಾಳ, ಮಲ್ಲೇಶ್ವರಂ, ರಾಜಾಜಿನಗರ, ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಸಂಜಯನಗರ, ವಿಜಯನಗರ, ಮೈಸೂರು ರಸ್ತೆ, ತುಮಕೂರು ರಸ್ತೆ, ಜ್ಞಾನಭಾರತಿ, ಕೆಂಗೇರಿ, ಚಾಮರಾಜಪೇಟೆ, ಕಾಟನ್‌ಪೇಟೆ, ಮೆಜೆಸ್ಟಿಕ್‌ ಸೇರಿದಂತೆ ನಗರದೆಲ್ಲಡೆ ಚದುರಿದಂತೆ ತುಂತುರು ಮಳೆ ಸುರಿಯಿತು. ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಸಂಜೆ ಹಲವು ಬಡಾವಣೆಗಳಲ್ಲಿ ಜೋರು ಮಳೆ ಸುರಿದರೆ ರಾತ್ರಿಯಿಡಿ ಅನೇಕ ಪ್ರದೇಶಗಳಲ್ಲಿ ಜಿಟಿಜಿಟಿ ರೂಪದಲ್ಲಿ ಮಳೆ ಮುಂದುವರಿಯಿತು.

ಕನ್ನೂರಲ್ಲಿ 53 ಮಿ.ಮೀ. ಮಳೆ

ರಾತ್ರಿ 10ಗಂಟೆ ವೇಳೆಗೆ ಕನ್ನೂರಿನಲ್ಲಿ ಅಧಿಕ 53 ಮಿ.ಮೀ ಮಳೆ ದಾಖಲಾಗಿದೆ. ಹಂಪಿನಗರ 43.5 ಮಿ.ಮೀ, ಸಂಪಂಗಿರಾಮ ನಗರ (2) 40, ಹೆಸರಘಟ್ಟ 34, ಕೋರಮಂಗಲ 33, ನಾಗಪುರ ಮತ್ತು ಕೆಎಐಎಲ್‌ ವಾಚ್‌ಟವರ್‌ (4) 30, ಹಗದೂರು 32, ಮಾದನಾಯಕನಹಳ್ಳಿ 29.5, ಆರ್‌ಆರ್‌ ನಗರ 29, ಜ್ಞಾನಭಾರತಿ 24, ಕೆಂಗೇರಿ 23, ಸಾತನೂರು 20, ದಾಸನಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 19.5 ಮಿ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ(Department of Meteorology) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru| ಮಳೆ-ಚಳಿ ಜುಗಲ್‌ ಬಂಧಿ, ಐಟಿ ಸಿಟೀಲಿ ಮಲ್ನಾಡ್‌ ಹವೆ..!

ಇಂದೂ ಗುಡುಗು ಸಹಿತ ಮಳೆ ಸಾಧ್ಯತೆ

ನ.16ರ ಮಂಗಳವಾರವೂ ಸಹ ಗುಡುಗು ಹಸಿತ ಧಾರಾಕಾರ ಮಳೆ ಬೀಳಲಿದೆ. ಗರಿಷ್ಠ 26 ಹಾಗೂ ಕನಿಷ್ಠ 20ಡಿಗ್ರಿ ಸೆಲ್ಸಿಯಸ್‌ ತಾಪಮಾನ(Temperature) ದಾಖಲಾಗಲಿದೆ. ಇಡಿ ದಿನ ಮೋಡ ಮುಸುಕಿದ ವಾತಾವರಣ(Cloudy) ನಿರ್ಮಾಣವಾಗಲಿದ್ದು, ಕೆಲವೆಡೆ ತುಂತುರು ಇನ್ನು ಕೆಲವೆಡೆ ಸಾಧಾರಣದಿಂದ ಜೋರು ಮಳೆ ಆಗಬಹುದು. ನ.17ರಂದು ಹಿಂಗಾರಿನ ಚುರುಕು ಕಡಿಮೆಯಾಗಲಿದ್ದು, ಕೆಲವೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಶಾಸಕರ ಕಚೇರಿಗೆ ನುಗ್ಗಿದ ಮಳೆ ನೀರು

ಸಂಜೆ ಬಿದ್ದ ಜೋರು ಮಳೆಯಿಂದ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಗಿರಿ ನಗರದ ಗೃಹ ಕಚೇರಿಗೆ ಮಳೆ ನೀರು ನುಗ್ಗಿತು. ಶಾಸಕರ(MLA) ಮನೆ ತಗ್ಗು ಪ್ರದೇಶದಲ್ಲಿರುವ ಕಾರಣ ರಸ್ತೆ ಮೇಲೆ ಹರಿಯುವ ನೀರು, ಮನೆ ಹಾಗೂ ಪಾರ್ಕಿಂಗ್‌ ಸ್ಥಳಕ್ಕೆ ಹರಿಯಿತು. ನೋಡ ನೋಡುತ್ತಲೇ ಮನೆಯಲ್ಲಿ ಮಳೆ ನೀರು ತುಂಬಿಕೊಂಡು ತಡರಾತ್ರಿವರೆಗೂ ಸಮಸ್ಯೆ ಉಂಟಾಯಿತು. ನಂತರ ಮೋಟಾರು ಬಳಸಿ ಶಾಸಕರೆ ನೀರು ಹೊರ ಹಾಕಿದರು.