*  ಗುಡುಗು, ಮಿಂಚಿನೊಂದಿಗೆ ಸುರಿದ ಮಳೆ*  ಮುರಿದು ಬಿದ್ದ 40ಕ್ಕೂ ಅಧಿಕ ಮರ, ಕೊಂಬೆಗಳು*  ಇಂದೂ ಮಳೆ ಸಾಧ್ಯತೆ 

ಬೆಂಗಳೂರು(ಜೂ.04): ನಗರದಲ್ಲಿ ಶುಕ್ರವಾರ ನೈಋುತ್ಯ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಸಂಜೆ ಆರರ ಹೊತ್ತಿಗೆ ಗುಡುಗು, ಮಿಂಚು ಮತ್ತು ಬಿರುಸಿನ ಗಾಳಿ ಸಹಿತ ಭರ್ಜರಿ ಮಳೆಗೆ ಸುಮಾರು 40ಕ್ಕೂ ಹೆಚ್ಚು ಮರ ಮತ್ತು ಕೊಂಬೆಗಳು ಮುರಿದು ಬಿದ್ದಿದೆ.

ಮಳೆ ಅಬ್ಬರದ ನಡುವೆ ಭಾರಿ ಗಾಳಿ ಬೀಸಿದ ಪರಿಣಾಮ ಸಿಟಿ ಸಿವಿಲ್‌ ಕೋರ್ಚ್‌, ಮಾಗಡಿ ರಸ್ತೆಯ ಜಿಟಿ ಮಾಲ್‌, ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆ, ಜೀವನ್‌ ಭೀಮಾ ನಗರ, ಶಿವಾಜಿ ಸರ್ಕಲ್‌, ಚಿನ್ನಸ್ವಾಮಿ ಕ್ರಿಡಾಂಗಣ, ಕಾಮಾಕ್ಷಿಪಾಳ್ಯ, ತುರೇಹಳ್ಳಿ, ನಂದಿನಿ ಬಡಾವಣೆ, ವಿಜಯ ನಗರ, ಪಟೇಗಾರ ಪಾಳ್ಯ, ವಿದ್ಯಾಪೀಠ, ಬಂಡಿರೆಡ್ಡಿ ಸರ್ಕಲ್‌, ಎಸ್‌ವಿಜೆ ನಗರ ಸೇರಿದಂತೆ ಅನೇಕ ಕಡೆ ಮರಗಳು ಧರೆಗುರುಳಿವೆ.

Land Slides: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶುರುವಾಗಿದೆ ಗುಡ್ಡ ಕುಸಿತದ ಆತಂಕ!

ಸಂಜೆ ತಮ್ಮ ಕೆಲಸ ಕಾರ್ಯಗಳನ್ನು ಮುಕ್ತಾಯಗೊಳಿಸಿ ಮನೆಗೆ ಹಿಂತಿರುಗುವ ಹೊತ್ತಿಗೆ ಧಾರಾಕಾರ ಮಳೆ ಸುರಿದಿದ್ದರಿಂದ ನಗರದಾದ್ಯಂತ ಟ್ರಾಫಿಕ್‌ ಸಮಸ್ಯೆ ತಲೆದೋರಿತು. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು. ಅದೇ ರೀತಿ ಬೈಕ್‌ ಸವಾರರು, ಸಾರ್ವಜನಿಕರು ಮಳೆಯ ಹೊಡೆತದಿಂದ ಪಾರಾಗಲು ಮೆಟ್ರೋ ಮಾರ್ಗ, ಫ್ಲೈ ಓವರ್‌ಗಳ ಕೆಳಗಡೆ, ಬಸ್‌ ನಿಲ್ದಾಣ, ಅಂಗಡಿ ಮುಗ್ಗಟ್ಟುಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಓಕಳೀಪುರ ಅಂಡರ್‌ ಪಾಸ್‌, ಶಿವಾನಂದ ರೈಲ್ವೆ ಕೆಳ ಸೇತುವೆ, ಅನಂದ ರಾವ್‌ ವೃತ್ತ, ನೃಪತುಂಗ ರಸ್ತೆ, ಮೈಸೂರು ರಸ್ತೆ, ಸುಲ್ತಾನ್‌ ಪಾಳ್ಯದ ಮುಖ್ಯ ರಸ್ತೆ, ಶಿವಾಜಿ ನಗರ, ಶಾಂತಿ ನಗರ ಡಬಲ್‌ ರೋಡ್‌ ಸೇರಿದಂತೆ ಪ್ರಮುಖ ರಸ್ತೆ ಮತ್ತು ಅಂಡರ್‌ಪಾಸ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.

ಹೆಮ್ಮಿಗೆಪುರದಲ್ಲಿ ಅಧಿಕ 3.8 ಸೆಂ.ಮೀ. ಮಳೆ

ರಾತ್ರಿ 9ರ ಹೊತ್ತಿಗೆ ಮತ್ತೊಮ್ಮೆ ಮಳೆ ಸುರಿಯಿತು. ಹೆಮ್ಮಿಗೆಪುರ (1) 3.8 ಸೆಂ.ಮೀ, ಎಚ್‌.ಗೊಲ್ಲಹಳ್ಳಿ 3.6, ಹೆಮ್ಮಿಗೆಪುರ (2) 3, ಬೇಗೂರು 2.8, ಸಂಪಂಗಿರಾಮ ನಗರ 2.6, ವಿ.ವಿ.ಪುರ, ಗೊಟ್ಟಿಗೆರೆ 2.4, ದಯಾನಂದ ನಗರ, ಜ್ಞಾನಭಾರತಿ, ನಾಯಂಡಹಳ್ಳಿ, ಕಾಟನ್‌ಪೇಟೆ 2.1, ಹಂಪಿ ನಗರ, ಗಾಳಿ ಆಂಜನೇಯ ದೇಗುಲ ವಾರ್ಡ್‌, ಅಂಜನಾಪುರು, ಚಾಮರಾಜಪೇಟೆಯಲ್ಲಿ 2 ಸೆಂ.ಮೀ ಮಳೆಯಾಗಿದೆ.

Monsoon Rain ಈ ವರ್ಷ 103% ಮಳೆ ಸಾಧ್ಯತೆ, ವಾಡಿಕೆಗಿಂತ ಹೆಚ್ಚು ಎಂದ IMD!

ಉಳಿದಂತೆ ಶಿವಾಜಿ ನಗರ, ವಿಧಾನ ಸೌಧ, ಮಲ್ಲೇಶ್ವರ, ಶೇಷಾದ್ರಿಪುರ, ರಾಜಾಜಿ ನಗರ, ವಿಜಯನಗರ, ಎಂ.ಜಿ.ರಸ್ತೆ, ಟ್ರಿನಿಟಿ, ಹಲಸೂರು, ಹೆಬ್ಬಾಳ, ಜಯ ನಗರ, ಜೆ.ಪಿ.ನಗರ, ಕೋರಮಂಗಲ, ಲಕ್ಕಸಂದ್ರ, ಮೆಜೆಸ್ಟಿಕ್‌, ಕೆ.ಆರ್‌.ಸರ್ಕಲ್‌, ಗೊರಗುಂಟೆಪಾಳ್ಯ, ಪೀಣ್ಯ, ವರ್ತೂರು, ಹೂಡಿ, ಕಸ್ತೂರಿ ನಗರ, ನಾಗಪುರ, ಕೊಟ್ಟಿಗೆಪಾಳ್ಯ, ನಾಗರಬಾವಿ, ದೊರೆಸಾನಿಪಾಳ್ಯ ಭಾಗದಲ್ಲಿ ಭಾರಿ ಮಳೆ ಸುರಿದಿದೆ.

ಇಂದೂ ಮಳೆ ಸಾಧ್ಯತೆ

ನಗರದಲ್ಲಿ ಶನಿವಾರ ಮೋಡ ಕವಿದ ವಾತಾವರಣ ಇರಲಿದ್ದು ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 32 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.