ಮರ ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿ, ರಸ್ತೆಗೆ ಹರಿದ ಕೊಳಚೆ ನೀರು, ಜೂನ್ 16ರವರೆಗೂ ಮಳೆ ಸಾಧ್ಯತೆ, ವರ್ತೂರಲ್ಲಿ ಅತಿ ಹೆಚ್ಚು 88.50 ಮಿ.ಮೀ ಮಳೆ
ಬೆಂಗಳೂರು(ಜೂ.13): ನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಯ ಪರಿಣಾಮ ಎರಡು ಕಡೆಗಳಲ್ಲಿ ಮರಗಳು ನೆಲಕ್ಕುರುಳಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸೋಮವಾರ ಮಧ್ಯಾಹ್ನದಿಂದಲೇ ಹಲವೆಡೆ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಕೆಲವು ಕಡೆಗಳಲ್ಲಿ ಗಡುಗು ಸಹಿತ ಮಳೆ ಸುರಿಯಿತು. ವರ್ತೂರು, ಮಾರತ್ತಹಳ್ಳಿ, ಎಚ್‌ಎಎಲ್, ವನ್ನಾರ್‌ಪೇಟೆ, ಕೋರಮಂಗಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೆಲವೆಡೆ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದರೂ ಯಾವುದೇ ಅಪಾಯವಾಗಿಲ್ಲ.
ನಗರದ ಸಿದ್ದಯ್ಯ ರಸ್ತೆ, ವಿನೋಬನಗರದ ಗಣೇಶ ದೇವಸ್ಥಾನ ಸಮೀಪ ಮಳೆಯಿಂದ ಚರಂಡಿಯಲ್ಲಿ ಕಸ ಕಟ್ಟಿಕೊಂಡ ಪರಿಣಾಮ ಮಳೆ ನೀರಿನೊಂದಿಗೆ ಕೊಳಚೆ ನೀರು ರಸ್ತೆಗೆ ಹರಿದು ಮೂರ್ನಾಲ್ಕು ಮನೆಗಳಿಗೆ ನುಗ್ಗಿತ್ತು. ಆರ್. ವಿ. ರಸ್ತೆಯಲ್ಲಿ ಸಣ್ಣ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು ಯಾವುದೇ ಅನಾಹುತವಾಗಿಲ್ಲ. ಮಲ್ಲೇಶ್ವರದ 7ನೇ ಕ್ರಾಸ್ ಮತ್ತು ಬಸವನಗುಡಿಯ ಗೋವಿಂದಪ್ಪ ರಸ್ತೆ, ಎಚ್‌ಎಎಲ್ 2ನೇ ಹಂತದ ಕೋಡಿಹಳ್ಳಿಯ ಲೀಲಾಪ್ಯಾಲೆಸ್ ಹಿಂಭಾಗದ ಅಂಬೇಡ್ಕರ್ ಸ್ಕೂಲ್ ಸಮೀಪ ಮರವೊಂದು ಬಿದ್ದಿದ್ದು ತೆರವುಗೊಳಿಸಲಾಗಿದೆ.
ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ
ಇಂದಿನಿಂದ ನಾಲ್ಕು ದಿನ ಮಳೆ:
ಜೂನ್ 13ರಿಂದ 16ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಾಧಾರಣ ಮಳೆಯಾಗಲಿದೆ. ಜೂನ್ 13ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಹಗುರವಾದ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಮೇಲ್ಮೈಗಾಳಿ ಹೆಚ್ಚಾಗಿರುವ ಸಾಧ್ಯತೆ ಇದೆ. ಜೂನ್ 14ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ಅಥವಾ ರಾತ್ರಿ ವೇಳೆ ಗುಡುಗು, ಮಿಂಚು ಸಹಿತ ತುಂತುರು ಮಳೆಯಾಗಲಿದೆ. ಜೂನ್ 16ರವರೆಗೂ ಇದೇ ವಾತಾವರಣ ಮುಂದುವರೆಯಲಿದೆ. ಈ ದಿನಗಳಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ, ಎಷ್ಟು ಮಳೆ ?
ವರ್ತೂರು 88.50 ಮಿ.ಮೀ, ಮಾರತ್ತಹಳ್ಳಿ 83.50 ಮಿ.ಮೀ, ಎಚ್‌ಎಎಲ್ 83 ಮಿ.ಮೀ, ಹಗದೂರು 49 ಮಿ.ಮೀ, ವನ್ನಾರ್‌ಪೇಟೆ 41.50 ಮಿ.ಮೀ, ಬೆಳ್ಳಂದೂರು 38 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣ 37.50 ಮಿ.ಮೀ, ಸಂಪಂಗಿರಾಮನಗರ 34 ಮಿ.ಮೀ, ವಿಶ್ವೇಶ್ವರಪುರಂ 31 ಮಿ.ಮೀ, ಕೋರಮಂಗಲ 30.50 ಮಿ.ಮೀ, ದೊಡ್ಡನೆಕ್ಕುಂದಿ 26.50 ಮಿ.ಮೀ, ಬಸವನಪುರ 23 ಮಿ.ಮೀ, ವಿಜಿನಾಪುರ 21.50 ಮಿ.ಮೀ, ಹಂಪಿನಗರ 19.50 ಮಿ.ಮೀ, ಕಾಡುಗೋಡಿ 18.50 ಮಿ.ಮೀ, ಎಚ್‌ಎಸ್‌ಆರ್ ಲೇಔಟ್ 16.50, ರಾಮಮೂರ್ತಿನಗರ 12 ಮಿ.ಮೀ, ಹೊರಮಾವು, ಹೊಯ್ಸಳನಗರ, ಸಿಂಗಸಂದ್ರ ತಲಾ 10.50 ಮಿ.ಮೀ ಮಳೆಯಾಗಿದೆ.
