ಮಂಗಳೂರು(ಜು.10): ದ.ಕ. ಜಿಲ್ಲೆಯಲ್ಲಿ ಗುರುವಾರ ಹಗಲು ಎಡೆಬಿಡದೆ ಸಾಧಾರಣ ಮಳೆಯಾಗಿದೆ. ಉಡುಪಿಯಲ್ಲಿ ಗುರುವಾರ ಮಳೆ ಬಿರುಸು ತಗ್ಗಿದೆ ಶುಕ್ರವಾರ ಕರಾವಳಿಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಕನ್ನಡದ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ನಸುಕಿನ ಜಾವದಿಂದಲೇ ತುಂತುರು ಮಳೆ ಸುರಿಯತೊಡಗಿತ್ತು. ಇದೇ ರೀತಿ ಹಗಲು ಪೂರ್ತಿ ಆಗಾಗ ಬಿಟ್ಟುಬಿಟ್ಟು ಮಳೆಯಾಗುತ್ತಲೇ ಇತ್ತು.

ಭಾರಿ ಮಳೆ ಮನ್ಸೂಚನೆ:

ಹವಾಮಾನ ಇಲಾಖೆ ಪ್ರಕಾರ, ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸುಮಾರು 115 ಮಿಲಿ ಮೀಟರ್‌ ವರೆಗೂ ಮಳೆಯಾಗುವ ಸಂಭವ ಇದೆ. ಜುಲೈ 11ರಿಂದ 14ರ ವರೆಗೆ ಸಾಧಾರಣ (65 ಮಿ.ಮೀ.) ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಗುರುವಾರ ಬೆಳಗ್ಗಿನ ವರೆಗೆ ಮಂಗಳೂರಿನಲ್ಲಿ ಗರಿಷ್ಠ 47.6 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 9 ಮೀಟರ್‌ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 4.9 ಮೀಟರ್‌ ಎತ್ತರದಲ್ಲಿ ಹರಿಯುತ್ತಿದೆ.

SSLC ಪರೀಕ್ಷೆ ಯಶಸ್ವಿ: ಇಂದು ಪೊಳಲಿ ದೇಗುಲಕ್ಕೆ ಸುರೇಶ್‌ ಕುಮಾರ್

ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‌ ಕೋಡಿ ಕೆರೆಯ ಸಮೀಪ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ನೀರು ತುಂಬಿ ಹರಿದ ಕಾರಣ ಕಾಂಕ್ರೀಟ್‌ ರಸ್ತೆಯ ಅಡಿಭಾಗ ಹಾಗೂ ರಸ್ತೆ ಬದಿಯ ಮಣ್ಣು ಕುಸಿದು ರಸ್ತೆ ಅಪಾಯದಲ್ಲಿದ್ದು ಸಮೀಪದ ಮನೆಯ ಆವರಣ ಗೋಡೆ ಕುಸಿದಿದೆ.

ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಗ್ರಾಮದ ಅಂಬಡ್ತ್ಯಾರ್‌ ಎಂಬಲ್ಲಿ ಬೆಳಗ್ಗೆ ಬೃಹತ್‌ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದು, ಸುಮಾರು ಎರಡು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮಂಗಳೂರು ಮೂಲಕ ಚಾರ್ಮಾಡಿ, ಮೂಡಿಗೆರೆ, ಬೆಂಗಳೂರಿಗೆ ಹೋಗುವ ವಾಹನ ಪ್ರಯಾಣಿಕರು ಕೆಲ ಕಾಲ ಪರದಾಡುವಂತಾಯಿತು. ಮರ ಬಿದ್ದು ವಿದ್ಯುತ್‌ ತಂತಿಗಳಿಗೂ ಹಾನಿಯಾಗಿದ್ದು ಮುಂಡಾಜೆ ಪರಿಸರದಲ್ಲಿ ಹಲವು ತಾಸು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. ಈ ರಸ್ತೆ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅವರಿಗೂ ತೊಂದರೆಯುಂಟಾಯಿತು.

ಕಾಣಿಯೂರು ಶ್ರೀಗಳ ಗೋವಂದನೆಗೆ ನೆಟ್ಟಿಗರು ಫಿದಾ

ಸುಳ್ಯ: ಸಂಪಾಜೆ ಗ್ರಾಮದ ದರ್ಖಾಸು ಸುಶೀಲ ಎಂಬವರ ಮನೆ ಸಮೀಪ ಬರೆ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ. ಸಮೀಪದಲ್ಲಿ ಪಂಚಾಯಿತಿ ರಸ್ತೆ ಹಾದುಹೋಗುತ್ತಿದ್ದು ರಸ್ತೆ ಬದಿ ಬರೆ ಕುಸಿದಿರುವುದರಿಂದ ಮನೆಯ ಅಡಿಪಾಯದ ವರೆಗೆ ನೆಲ ಬಿರುಕು ಬಿಟ್ಟಿದೆ. ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಜು.8ರಂದು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನೆ ಆವರಣದಲ್ಲಿದ್ದ ಬಾವಿ ಕುಸಿತಗೊಂಡಿದೆ. ಸುಣ್ಣಮೂಲೆಯ ಹಸನ್‌ ಸುಣ್ಣಮೂಲೆ ಎಂಬವರ ಮನೆ ಆವರಣದಲ್ಲಿದ್ದ ಸುಮಾರು ಐವತ್ತು ವರ್ಷಗಳ ಹಿಂದಿನ ಬಾವಿಯ ಕಟ್ಟೆಸಮೇತ ಕುಸಿದು ನೀರಿಗೆ ಬಿದ್ದಿದ್ದು ಬಾವಿ ಕೆಸರು ನೀರಿನಿಂದ ಅರ್ಧದಷ್ಟುಮುಚ್ಚಿದೆ.

ಸುಳ್ಯ ಜೂನಿಯರ್‌ ಕಾಲೇಜು ಹೋಗುವ ರಸ್ತೆ ಮಧ್ಯೆ ಇರುವ ಮ್ಯಾನ್‌ ಹೋಲ್‌ ಕುಸಿತದ ಭೀತಿಯಲ್ಲಿದ್ದು ವಾಹನ ಸವಾರರಿಗೆ ಸಮಸ್ಯೆ ಉಂಟಾಗಿದೆ. ಮ್ಯಾನ್‌ ಹೋಲ್‌ನಿಂದ ನೀರು ಹೊರಬರುತ್ತಿದ್ದು ರಸ್ತೆಯಲ್ಲಿಯೇ ಹರಿಯುತ್ತಿದೆ.

ಉಡುಪಿ ಜಿಲ್ಲೆ ವರದಿ:

ಉಡುಪಿ ಜಿಲ್ಲೆಯಲ್ಲಿ ಬುಧವಾರ ಹಠ ಹಿಡಿದು ಸುರಿದಿದ್ದ ಮಳೆ, ಗುರುವಾರ ಕೈಕೊಟ್ಟಿದೆ. ಬುಧವಾರದವರೆಗೆ 24 ಗಂಟೆಗಳಲ್ಲಿ ಸರಾಸರಿ 117 ಮಿ.ಮೀ. ಮಳೆಯಾಗಿತ್ತು. ಆದರೆ ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಕೇವಲ 36 ಮಿ.ಮೀ.ಗಳಷ್ಟೇ ಮಳೆಯಾಗಿದೆ.

ತಗ್ಗುಪ್ರದೇಶಗಳ ಮನೆ, ತೋಟ, ಕೃಷಿಗದ್ದೆಗಳು ಜಲಾವೃತ: ಇಲ್ಲಿವೆ ಫೊಟೋಸ್

ಬುಧವಾರ ರಾತ್ರಿ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ರುಕ್ಮಿಣಿ ಗೋವಿಂದ ನಾಯ್ಕ ಅವರ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದ್ದು, 75,000 ರು. ನಷ್ಟವಾಗಿದೆ. ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಸರಾಸರಿ 36 ಮಿ.ಮೀ. ಮಳೆಯಾಗಿದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 33 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 38 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 38.50 ಮಿ.ಮೀ. ಮಳೆಯಾಗಿದೆ.