ಹುಬ್ಬಳ್ಳಿ(ಜೂ.04): ಕಳೆದ ಎರಡು ದಿನಗಳಿಂದ ಆಗಾಗ ಸುರಿಯುತ್ತಿದ್ದ ಮಳೆ ಮಂಗಳವಾರ ರಾತ್ರಿಯಿಡಿ ಸುರಿದಿದೆ. ಇದರಿಂದಾಗಿ ಹುಬ್ಬಳ್ಳಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಬೆಣ್ಣಿಹಳ್ಳಕ್ಕೆ ನೀರು ಹರಿದು ಬರುತ್ತಿದೆ.

ಮಂಗಳವಾರ ರಾತ್ರಿ 11ಗಂಟೆಗೆ ಶುರುವಾದ ವರ್ಷಧಾರೆ ರಾತ್ರಿಯಿಡಿ ಮುಂದುವರಿಯಿತು. ವರುಣ ಅಬ್ಬರ ಅಷ್ಟೊಂದು ರಭಸತೆಯಿಂದ ಕೂಡಿರಲಿಲ್ಲವಾದರೂ ನಿರಂತರವಾಗಿ ಜಿಟಿ ಜಿಟಿಯಾಗಿ ಸುರಿಯಿತು. ಬೆಳಗಿನ ಜಾವದವರೆಗೂ ಸುರಿದ ಮಳೆ ಬೆಳಗ್ಗೆ ಕೊಂಚ ಬಿಡುವು ನೀಡಿತ್ತು. ಮತ್ತೆ ಮಧ್ಯಾಹ್ನ 12.30ರಿಂದ ಪ್ರಾರಂಭವಾದ ಮಳೆ ಸಂಜೆ 4ರ ವರೆಗೂ ಬಿಟ್ಟು ಬಿಡದೇ ಸಣ್ಣದಾಗಿ ಹನಿಯುತ್ತಲೇ ಇತ್ತು. ಹೀಗೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಇದರಿಂದಾಗಿ ಅಕ್ಷರಶಃ ಮಲೆನಾಡಿನ ವಾತಾವರಣ ಸೃಷ್ಟಿಯಾದಂತಾಗಿದೆ. ಯಾರು ಮನೆಯಿಂದ ಹೊರ ಬರಲು ಇಚ್ಛಿಸುತ್ತಿಲ್ಲ. ಇನ್ನು ಅಗತ್ಯ ಕೆಲಸವಿದ್ದವರು ಜರ್ಕಿನ್‌, ಕೊಡೆಗಳೊಂದಿಗೆ ಹೊರಹೋಗುತ್ತಿದ್ದರು.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಇನ್ನೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಎಲ್ಲ ಚರಂಡಿಗಳು ತುಂಬಿದ್ದವು. ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗಿದ್ದವು. ಕೆಲ ರಸ್ತೆಗಳ ತುಂಬ ಬರೀ ಗುಂಡಿಗಳೇ ಇದ್ದ ಕಾರಣ ನಾಗರಿಕರು ತೀವ್ರ ತೊಂದರೆ ಅನುಭವಿಸಿದರು. ಇನ್ನೂ ಮಂಟೂರ್‌ ರಸ್ತೆಯಲ್ಲಿನ ಬಡಾವಣೆಗಳಾದ ಬ್ಯಾಳಿಗಲ್ಲಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಡೆದಾಡಲು ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈವರೆಗೂ ರಸ್ತೆ ನಿರ್ಮಿಸದಿದ್ದಕ್ಕೆ ನಾಗರಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಾ ಮಂಟೂರ ರಸ್ತೆಯಲ್ಲಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಣ್ಣಿಹಳ್ಳಕ್ಕೆ ನೀರು:

ಇನ್ನೂ ಹುಬ್ಬಳ್ಳಿ, ಕುಂದಗೋಳ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ನವಲಗುಂದ ತಾಲೂಕಲ್ಲಿ ಮಂಗಳವಾರ ರಾತ್ರಿ ಜಿಟಿಜಿಟಿ ಮಳೆ ಸುರಿಯಿತು. ಆದರೆ ಬುಧವಾರ ಬೆಳಗ್ಗೆಯಿಂದ ಬಿಡುವು ನೀಡಿದೆ. ಕುಂದಗೋಳ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲೂ ಮಂಗಳವಾರ ರಾತ್ರಿ ಮಳೆ ಸುರಿದಿದೆ. ಯಾವುದೇ ಅನಾಹುತಗಳಾಗಿಲ್ಲ.