ಘಟ್ಟದಲ್ಲಿ ಮತ್ತೆ ಬಿರುಸಿನ ಮಳೆ: ಆತಂಕದಲ್ಲಿ ಜನ
ಘಟ್ಟಪ್ರದೇಶದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಕಳೆದ ಮೂರು ದಿನಗಳಿಂದ ಬಿಡದೇ ಮಳೆ ಸುರಿದಿದೆ. ಇದರಿಂದ ಮಲೆನಾಡಿನಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಆದರೆ ಆರ್ಭಟದ ಮಳೆ ಬದಲಾಗಿ ಆಗಾಗ್ಗೆ ಒಮ್ಮೆ ಜೋರಾಗಿ ಸುರಿಯುವುದು ಮತ್ತು ಬಳಿಕ ಜಿಟಿ ಜಿಟಿ ಮಳೆ ಕಂಡುಬರುತ್ತಿದೆ.
ಶಿವಮೊಗ್ಗ(ಸೆ.04): ಘಟ್ಟಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಜಲಾಶಯ ಮತ್ತು ನದಿಗಳಲ್ಲಿ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣಿಸಿದೆ.
ಭಾರಿ ಮಳೆ ಮತ್ತು ಪ್ರವಾಹದ ಬಳಿಕ ಸ್ವಲ್ಪ ಬಿಡುವು ನೀಡಿದ್ದ ಮಳೆ ಮೂರ್ನಾಲ್ಕು ದಿನಗಳಿಂದ ಮತ್ತೆ ಸುರಿಯಲಾರಂಭಿಸಿದೆ. ಇದರಿಂದ ಮಲೆನಾಡಿನಲ್ಲಿ ಮತ್ತೆ ಆತಂಕ ಕಾಣಿಸಿದೆ. ಆದರೆ ಆರ್ಭಟದ ಮಳೆ ಬದಲಾಗಿ ಆಗಾಗ್ಗೆ ಒಮ್ಮೆ ಜೋರಾಗಿ ಸುರಿಯುವುದು ಮತ್ತು ಬಳಿಕ ಜಿಟಿ ಜಿಟಿ ಮಳೆ ಕಂಡುಬರುತ್ತಿದೆ.
ದಕ್ಷಿಣ ಕನ್ನಡದಲ್ಲಿ ಮತ್ತೆ ಮಳೆ ಅಬ್ಬರ : ಉಕ್ಕಿ ಹರಿಯುತ್ತಿರುವ ನದಿಗಳು
ಸೆಪ್ಟೆಂಬರ್ ತಿಂಗಳ ಸರಾಸರಿ ಮಳೆಯ ಪ್ರಮಾಣ 164.16 ಮಿ.ಮೀ.ನಷ್ಟಿದೆ. 3 ದಿನಗಳಿಗೇ ಸರಾಸರಿ 62.49 ಮಿ.ಮೀ. ಮಳೆ ದಾಖಲಾಗಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣ ಈ ರೀತಿಯಿದೆ. ಶಿವಮೊಗ್ಗ- 10 ಮಿ.ಮೀ., ಭದ್ರಾವತಿ - 10.20 ಮಿ.ಮೀ., ತೀರ್ಥಹಳ್ಳಿ - 41.20 ಮಿ.ಮೀ., ಸಾಗರ- 25.06 ಮಿ. ಮೀ., ಶಿಕಾರಿಪುರ- 8.20 ಮಿ.ಮೀ., ಸೊರಬ- 25.10 ಮಿ.ಮೀ. ಹಾಗೂ ಹೊಸನಗರ- 132.60 ಮಿ.ಮೀ. ಮಳೆಯಾಗಿದೆ.
ಜಲಾಶಯಗಳು ಭರ್ತಿ:
ಲಿಂಗನಮಕ್ಕಿ ಜಲಾಶಯ ಸೋಮವಾರ ಭರ್ತಿ ಆಗುವುದರೊಂದಿಗೆ ಜಿಲ್ಲೆಯ ಎಲ್ಲ ಜಲಾಶಯಗಳು ಭರ್ತಿಯಾದಂತಾಗಿದೆ. ಭದ್ರಾ, ತುಂಗಾ, ಮಾಣಿ, ಚಕ್ರಾ, ವಾರಾಹಿ, ಸಾವೆಹಕ್ಲು ಜಲಾಶಯಗಳು ಈ ಹಿಂದೆಯೇ ಭರ್ತಿಯಾಗಿದ್ದವು.