Asianet Suvarna News Asianet Suvarna News

ಕುಂಭದ್ರೋಣ ಅಬ್ಬರ : ಮುಳುಗಿದವು ಮೈಸೂರಿನ ಹಲವು ಪ್ರದೇಶ

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂಧ ಜನಜೀವನ ತತ್ತರಿಸಿದೆ. ಇತ್ತ ಮೈಸೂರಿನಲ್ಲಿಯೂ ಮಳೆಯ ಅಬ್ಬರ ಹೆಚ್ಚಾಗಿದೆ. 

Heavy Rain Lashes in Many Parts Of Mysuru snr
Author
Bengaluru, First Published Sep 21, 2020, 10:35 AM IST

ಮೈಸೂರು (ಸೆ.21): ಕೇರಳದ ವೈನಾಡ್‌ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಭಾನುವಾರ ಕಬಿನಿ ಜಲಾಶಯದಿಂದ 35,000 ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಿರುವುದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಬಿನಿ ಜಲಾಶಯ ಪೂರ್ಣ ಭರ್ತಿಯಾಗಿದೆ. ಗರಿಷ್ಠ ಮಟ್ಟಕಾಪಾಡಿಕೊಂಡು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಒಳಹರಿವು ಹೆಚ್ಚಿದ್ದರಿಂದ ಭಾನುವಾರ ಬೆಳಗ್ಗೆ ಹೊರಹರಿವನ್ನು ದಿಢೀರ್‌ ಎಂದು 35,000 ಕ್ಯುಸೆಕ್‌ಗೆ ಏರಿಸಲಾಯಿತು.

ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಟ್ಟಿರುವುದರಿಂದ ಸರಗೂರು, ನಂಜನಗೂಡು ಮತ್ತು ಟಿ. ನರಸೀಪುರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಾಶಯಕ್ಕೆ 25,000 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯವು ಗರಿಷ್ಟಮಟ್ಟತಲುಪಿದೆ. 19.52 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದ ಗರಿಷ್ಟಮಟ್ಟ2284 ಅಡಿ ತಲುಪಿದೆ.

ಈ ಹಿನ್ನೆಲೆಯಲ್ಲಿ ನದಿಯಲ್ಲಿ ಹೆಚ್ಚಿನ ನೀರಿ ಬಿಟ್ಟಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ. ಕೆಲವು ಸೇತುವೆಗಳು ಜಲಾವೃತಗೊಳ್ಳಲಿದ್ದು, ನಂಜನಗೂಡು ಸಮೀಪದ ಎಟಿಎಸ್‌ ಕಾರ್ಖಾನೆ ಹಿಂಭಾಗದಲ್ಲಿ ಚಾಮಲಾಪುರ ಹುಂಡಿ ಗ್ರಾಮಸ್ಥರಿಗಾಗಿ ನಿರ್ಮಿಸಲಾಗಿದ್ದ ಸೋಪಾನಕಟ್ಟೆಯು ನೀರಿನ ರಭಸಕ್ಕೆ ಕೊರಕಲು ಉಂಟಾಗಿ ಕೊಚ್ಚಿಹೋಗುವ ಹಂತಕ್ಕೆ ತಲುಪಿದೆ.

38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ! ..

ಆದ್ದರಿಂದ ಸಾರ್ವಜನಿಕರು ಕಬಿನಿ ನದಿ ಪಾತ್ರದಲ್ಲಿರುವ, ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ- ಪಾಸ್ತಿ ಹಾಗೂ ಜಾನುವಾರು ರಕ್ಷಣೆ ಬಗ್ಗೆ ಅಗತ್ಯ ಮುನ್ನೆಚ್ಚರಿಕೆವಹಿಸಿ, ಸುರಕ್ಷಿತ ಸ್ಥಳಕ್ಕೆ ತರಳುವಂತೆ ಕಬಿನಿ ಜಲಾಶಯ ವಿಭಾಗದ ಇಇ ಸಿ.ವಿ. ಸುರೇಶ್‌ಬಾಬು ತಿಳಿಸಿದ್ದಾರೆ.

ದಿನವಿಡಿ ಮಳೆ

ಕಬಿನಿ ಜಲಾನಯನ ಪ್ರದೇಶವಾದ ಕೇರಳದ ವೈನಾಡು ಮಾತ್ರವಲ್ಲದೆ ಎಚ್‌.ಡಿ. ಕೋಟೆ, ಸರಗೂರು, ನಂಜನಗೂಡು, ಟಿ. ನರಸೀಪುರ ಮುಂತಾದ ಭಾಗದಲ್ಲಿ ಭಾನುವಾರದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಧಾರಾಕಾರ ಮಳೆಯಾಗುತ್ತಿದೆ. ಮೈಸೂರಿನಲ್ಲಿ ಜಿಟಿಜಿಟಿ ಮಳೆ ಬೆಳಗ್ಗೆಯಿಂದಲೂ ಆರಂಭವಾಗಿದ್ದು, ಮಧ್ಯಾಹ್ನ ಸ್ವಲ್ಪ ಸಮಯ ಮಾತ್ರ ಬಿಡುವು ನೀಡಿತ್ತು.

ಕೇರಳ ಮಾತ್ರವಲ್ಲದೆ ಕೊಡಗು, ಮಂಗಳೂರು, ಉಡುಪಿ, ಹಾಸನ ಮುಂತಾದ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಮೈಸೂರಿನಲ್ಲಿಯೂ ತುಂತುರು ಹನಿ ಬಿದ್ದ ಪರಿಣಾಮ ಇಡೀ ವಾತಾವರಣ ತಂಪಾಗಿತ್ತು.

ಉದ್ಘಾಟನೆಗೆ ಮುನ್ನವೇ ಕೊಚ್ಚಿಹೋದ ಸೋಪಾನಕಟ್ಟೆ

  ಇಲ್ಲಿನ ಇಎಸ್‌ಐ ಆಸ್ಪತ್ರೆ ಹಿಂಭಾಗದ ಕಪಿಲಾ ನದಿ ತೀರದಲ್ಲಿ ಎಟಿಎಸ್‌ ಕಾರ್ಖಾನೆಯ ಸಿಎಸ್‌ಆರ್‌ ಅನುದಾನದಡಿಯಲ್ಲಿ ನಿರ್ಮಾಣವಾಗಿದ್ದ ಸೋಪಾನಕಟ್ಟೆಕಳಪೆ ಕಾಮಗಾರಿಯಿಂದಾಗಿ ಉದ್ಘಾಟನೆಗೆ ಮುನ್ನವೇ ನೀರಿನಲ್ಲಿ ಕೊಚ್ಚಿಹೋಗಿದೆ.

ಚಾಮಲಾಪುರ ಹುಂಡಿಯ ಗ್ರಾಮಸ್ಥರು ಕಪಿಲಾ ನದಿಯ ದಡದಲ್ಲಿ ಸೋಪಾನಕಟ್ಟೆನಿರ್ಮಿಸಿಕೊಡುವಂತೆ ಮನವಿಮಡಿದ್ದ ಹಿನ್ನೆಲೆಯಲ್ಲಿ ಕಳೆದ ಜನವರಿ 31 ರಂದು . 19 ಲಕ್ಷ ವೆಚ್ಚದಲ್ಲಿ ಸೋಪಾನಕಟ್ಟೆನಿರ್ಮಾಣ ಕಾಮಗಾರಿಗೆ ಶಾಸಕ ಬಿ. ಹರ್ಷವರ್ಧನ್‌ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು. ಕಾರ್ಖಾನೆಯವರು ತಾವೇ ಬೇರೆಯವರಿಗೆ ಗುತ್ತಿಗೆ ನೀಡಿ ಸಾರ್ವಜನಿಕ ಉಪಯೋಗಿ ಕೆಲಸ ಮಾಡಿದಂತೆ ದಾಖಲೆ ಸೃಷ್ಟಿಸಿಕೊಳ್ಳುವ ನೆಪದಿಂದ ಕಾಟಾಚಾರಕ್ಕೆ ನಿರ್ಮಿಸಿದಂತೆ ಸೋಪಾನಕಟ್ಟೆಯನ್ನು ಕಳಪೆ ಕಾಮಗಾರಿಯಿಂದ ನಿರ್ಮಿಸಿದ್ದು ನೀರಿನ ರಭಸ ತಪ್ಪಿಸಲು ತಡೆಗೋಡೆನ್ನೂ ನಿರ್ಮಿಸಿಲ್ಲ. ಜೊತೆಗೆ ಸೋಮಾಪಾನಕಟ್ಟೆಗೆ ತೆರಳಲು ನದಿ ದಂಡೆಯಲ್ಲಿ ನೆಲವನ್ನೂ ಸಮತಟ್ಟು ಮಾಡದೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ.

ಇದರಿಂದ ಕಳೆದ ಬಾರಿ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ನೀರಿನ ರಭಸಕ್ಕೆ ಸೋಪಾನಕಟ್ಟೆಯ ಅಡಿ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಅವೈಜ್ಞಾನಿಕ ಕಳಪೆ ಕಾಮಗಾರಿಯಿಂದಾಗಿ ಉದ್ಘಾಟನೆಯಾಗುವ ಮುನ್ನವೇ ಸೋಪಾನಕಟ್ಟೆಸಾರ್ವಜನಿಕರ ಉಪಯೋಗಕ್ಕೆ ಬಾರದೆ ಕಾರ್ಖಾನೆಯ ಅನುದಾನ ವ್ಯರ್ಥವಾಗಿದೆ.
 

Follow Us:
Download App:
  • android
  • ios