ಬೆಂಗಳೂರು (ಸೆ.13):  ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದೆ.

ಮಳೆಯ ತೀವ್ರತೆ ಕಡಿಮೆಯಾಗಿದ್ದರೂ 8 ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೃಷಿಕಾರ್ಯಗಳಿಗೆ ಅಡಚಣೆಯಾಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ. ಏತನ್ಮಧ್ಯೆ ಪ್ರವಾಹದ ನೀರಿಗೆ ಮುಳುಗಡೆಯಾಗಿದ್ದ ಬ್ಯಾರೇಜ್‌ ಅನ್ನು ಬೈಕ್‌ನೊಂದಿಗೆ ದಾಟಲು ಯತ್ನಿಸಿದ ಯುವಕನೊಬ್ಬ ಬೈಕ್‌ ಸಮೇತ ಕೊಚ್ಚಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನಿಂದ ವರದಿಯಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಶನಿವಾರವೂ ಮುಂದುವರಿದಿದರೂ ಜಲಾವೃತವಾಗಿದ್ದ ತಗ್ಗು ಪ್ರದೇಶಗಳಲ್ಲಿನ ಜನಜೀವನ ಯಥಾಸ್ಥಿತಿಗೆ ಬಂದಿದೆ. ಆದರೆ ಮಂಗಳೂರಿನ ಅನೇಕ ಕಡೆ ಶನಿವಾರವೂ ಕೃತಕ ನೆರೆ ಉಂಟಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲೂ ದಿನವಿಡೀ ಮಳೆಯಾಗಿದ್ದು ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಆದರೆ ಎಲ್ಲಿಯೂ ಪ್ರವಾಹದ ಪರಿಸ್ಥಿತಿ ಉಂಟಾಗಿಲ್ಲ. ಜಿಲ್ಲೆಯ ಘಟ್ಟಪ್ರದೇಶದಲ್ಲಿಯೂ ಸಾಧಾರಣ ಮಳೆ ಸುರಿದಿದೆ.

ಬಯಲುಸೀಮೆ ಸೇರಿ 6 ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ .

ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರಿನ ಬಹುತೇಕ ಭಾಗಗಳಲ್ಲಿ ನಿರಂತರ ತುಂತುರು ಮಳೆ ಸುರಿದಿದೆ. ಇನ್ನುಳಿದಂತೆ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದೆ.

ಬೈಕ್‌ ಸಮೇತ ನೀರು ಪಾಲು :  ವಿಜಯಪುರ: ತುಂಬಿ ಹರಿಯುತ್ತಿದ್ದ ಭೀಮಾ ನದಿ ದಾಟುತ್ತಿದ್ದ ಯುವಕನೊಬ್ಬ ಬೈಕ್‌ ಸಮೇತ ನೀರು ಪಾಲಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ರಮೇಶ ದುಂಡಪ್ಪ ಬಸರಗಿ (25) ನೀರಿನಲ್ಲಿ ಕೊಚ್ಚಿ ಹೋದ ಯುವಕ.