Asianet Suvarna News Asianet Suvarna News

ಬೆಂಗಳೂರು ನಗರದಲ್ಲಿ ಜೋರು ಮಳೆ : ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ

  •  ಬೆಂಗಳೂರು ನಗರದಲ್ಲಿ ಶನಿವಾರ ಸುರಿದ ಜೋರು ಮಳೆ
  • ಜೋರು ಮಳೆಗೆ ವಿವಿಧ ಕಡೆ ನಾಲ್ಕು ಮರ ಮತ್ತು ಒಂದು ಕಡೆ ಮರದ ಕೊಂಬೆ ಬಿದ್ದಿವೆ. 
heavy rain lashes in Bengaluru snr
Author
Bengaluru, First Published Oct 10, 2021, 7:29 AM IST

 ಬೆಂಗಳೂರು (ಅ.10):  ನಗರದಲ್ಲಿ (Bengaluru) ಶನಿವಾರ ಸುರಿದ ಜೋರು ಮಳೆಗೆ (Rain) ವಿವಿಧ ಕಡೆ ನಾಲ್ಕು ಮರ ಮತ್ತು ಒಂದು ಕಡೆ ಮರದ (Tree) ಕೊಂಬೆ ಬಿದ್ದಿವೆ. ಹಲವು ಮುಖ್ಯ ರಸ್ತೆಗಳ (Road) ಮೇಲೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.

ನಗರಾದ್ಯಂತ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಗಾಳಿ, ಗುಡುಗು ಸಹಿತ ಜೋರಾದ ಮಳೆ ಸುರಿಯಿತು. ಇದರಿಂದ ಬನಶಂಕರಿ 5ನೇ ಹಂತ ಪೂರ್ಣಪ್ರಜ್ಞಾ ಬಡಾವಣೆ, ಹಲಸೂರು ಗಂಗರಚೆಟ್ಟಿರಸ್ತೆ, ನವರಂಗ್‌ ಚಿತ್ರಮಂದಿರ ಬಳಿ ಹಾಗೂ ಹಲಗೆವಡೆಯರಹಳ್ಳಿಯಲ್ಲಿ ತಲಾ ಒಂದು ಮರಗಳು ಧರೆಗುರುಳಿವೆ. ಗುರುದತ್ತ ಬಡಾವಣೆಯಲ್ಲಿ ಮರದ ಕೊಂಬೆ ಮುರಿದು ಬಿದ್ದಿದೆ. ಮರಗಳು ಬುಡಸಮೇತ ನೆಲಕ್ಕುರುಳಿದ್ದರಿಂದ ಕೆಲ ಕಾಲ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಬಿದ್ದಿದ್ದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರೆಂದು ಬಿಬಿಎಂಪಿ (BBMP) ಅಧಿಕಾರಿಗಳು ತಿಳಿಸಿದರು.

ಶ್ರೀರಂಗಪಟ್ಟಣ: ಮಳೆಗಾಗಿ ಸಿಎಂ ಪರ್ಜನ್ಯ ಹೋಮ

ಮಧ್ಯಾಹ್ನದ ಹೊತ್ತಿಗೆ ತುಸು ಬಿಡುವು ನೀಡಿದ ಮಳೆ ಸಂಜೆ ನಂತರ ಅಲ್ಲಲ್ಲಿ ತುಂತುರು ರೂಪದಲ್ಲಿ ಸುರಿಯಿತು. ಇಡೀ ದಿನ ಬಿಸಿಲಿನ ದರ್ಶನವಾಗದೇ, ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಕಡೆಗಳಲ್ಲಿ ಆಗಾಗ ಜಿಟಿ ಜಿಟಿ ಮಳೆ ಬಂದರೆ, ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಿದೆ. ತಾಪಮಾನದಲ್ಲಿ ಇಳಿಕೆಯಾಗಿದ್ದರಿಂದ ನಗರಾದ್ಯಂತ ತಂಪು ಗಾಳಿ ಬೀಸುವ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ಜನ ಬೆಚ್ಚನೆ ಧಿರಿಸು ಧರಿಸಿದ್ದು ಸಾಮಾನ್ಯವಾಗಿತ್ತು.

ಸಂಚಾರ ದಟ್ಟಣೆ: ಬೆಳಗ್ಗೆಯಿಂದ ಎಡೆಬಿಡದೆ ಸುರಿದ ಮಳೆ ಅಬ್ಬರಕ್ಕೆ ವಾಹನ ಸವಾರರು ತತ್ತರಿಸಿದರು. ಕೆ.ಆರ್‌.ಮಾರುಕಟ್ಟೆ, ಟೌನ್‌ಹಾಲ್‌ ಮುಂಭಾಗ, ಕೆ.ಆರ್‌.ವೃತ್ತ, ಇನ್‌ಫೆಂಟ್ರಿ ರಸ್ತೆ, ಶಿವಾಜಿನಗರ, ರಾಜಾಜಿನಗರ, ಮೈಸೂರು ರಸ್ತೆ, ತುಮಕೂರು ರಸ್ತೆ, ಓಕಳಿಪುರಂ ರಸ್ತೆ ಅಂಡರ್‌ಪಾಸ್‌, ಮೇಖ್ರಿ ವೃತ್ತ ಸೇರಿದಂತೆ ಹಲವು ರಸ್ತೆಗಳ ಮೇಲೆ ಮಳೆ ನೀರು ನಿಂತಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು. ಇದರಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲಿ ಮಳೆಯಲ್ಲೇ ಸಂಚರಿದ್ದು ಕಂಡು ಬಂತು.

13ರವರೆಗೆ ಎಲ್ಲೋ ಅಲರ್ಟ್‌

ಬೆಂಗಳೂರು: ಉತ್ತರ ಅಂಡಮಾನ್‌ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾದ ವೈಪರಿತ್ಯಗಳ ಪರಿಣಾಮ ನಗರದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಅ.13ರವರೆಗೂ ಮುಂದುವರಿಯಲಿದೆ. ಅ.11ರವರೆಗೂ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದ್ದು, ಎಲ್ಲೆಡೆ ಮೋಡ ಕವಿದ ಹಾಗೂ ಥಂಡಿ ವಾತಾವರಣ ಇರಲಿದೆ. ಅ.12 ಹಾಗೂ ಅ.13ರಂದು ನಗರದಲ್ಲಿ ಮುಂಗಾರು ಮತ್ತಷ್ಟುಚುರುಕಾಗಲಿದೆ. ಈ ಎರಡು ದಿನ ನಗರದಲ್ಲಿ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ. ಈ ಕಾರಣದಿಂದ ಬೆಂಗಳೂರು ನಗರಕ್ಕೆ ಅ.13ರವರೆಗೆ ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್‌’ ನೀಡಿದೆ.

ಯಶವಂತಪುರದಲ್ಲಿ 29.5 ಮಿ.ಮೀ ಮಳೆ

ರಾತ್ರಿ 10 ಗಂಟೆ ವೇಳೆÜಗೆ ಯಶವಂತಪುರದಲ್ಲಿ ಅಧಿಕ 29.5ಮಿ.ಮೀ ಮಳೆ ದಾಖಲಾಗಿದೆ. ಉಳಿದಂತೆ ಶೆಟ್ಟಿಹಳ್ಳಿ ಮತ್ತು ಆರ್‌.ಆರ್‌.ನಗರದಲ್ಲಿ (2) ತಲಾ 29 ಮಿ.ಮೀ., ವಿದ್ಯಾರಣ್ಯಪುರ 27, ಕೆಂಗೇರಿ ಮತ್ತು ಕೋಣನಕುಂಟೆ ತಲಾ 25, ಬಾಗಲಗುಂಟೆ 24, ದೊಮ್ಮಲೂರು 23, ದೊಡ್ಡಾನೆಕ್ಕುಂದಿ ಮತ್ತು ಕೆಂಗೇರಿ (2) ತಲಾ 22.5, ದೊಡ್ಡಬೊಮ್ಮಸಂದ್ರ, ಉತ್ತರಹಳ್ಳಿ, ಯಲಹಂಕ ತಲಾ 21, ಜ್ಞಾನಭಾರತಿಯಲ್ಲಿ 18 ಮಿ.ಮೀ. ಮಳೆ ಸುರಿದಿದೆ. ಕೆಲವು ಬಡಾವಣೆಗಳಲ್ಲಿ ತಡರಾತ್ರಿವರೆಗೂ ಸೋನೆ ಮಳೆ ಮುಂದುವರಿದಿತ್ತು.

Follow Us:
Download App:
  • android
  • ios