ಶ್ರೀರಂಗಪಟ್ಟಣ: ಮಳೆಗಾಗಿ ಸಿಎಂ ಪರ್ಜನ್ಯ ಹೋಮ
ಶ್ರೀರಂಗಪಟ್ಟಣ(ಅ.08): ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಕೊರತೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿ ಭಾಗ್ಯ ಕಾಣಲಿ ಎಂಬ ಸದಾಶಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಗುರುವಾರ ಕೆಆರ್‌ಎಸ್‌ನಲ್ಲಿ ವರುಣನಿಗೆ ಪ್ರಾರ್ಥಿಸಿ ಪರ್ಜನ್ಯ ಹೋಮ ನಡೆಸಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡುವ ಮುನ್ನ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕಾವೇರಿ ಮಾತೆಗೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ಬಾರಿ ಮಳೆ ಕೈ ಕೊಟ್ಟು ಅಣೆಕಟ್ಟೆ ಭರ್ತಿಯಾಗದಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಾಗಿನ ಅರ್ಪಿಸುವ ಯೋಗ ಇದುವರೆಗೆ ದೊರಕಿಲ್ಲ. ಇದೀಗ ಕೆಆರ್‌ಎಸ್ ಜಲಾಶಯ ಭರ್ತಿಗಾಗಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿಗಳು ಲೋಕ ಕಲ್ಯಾಣಾರ್ಥ ಡಾ.ಭಾನುಪ್ರಕಾಶ್‌ಶರ್ಮಾ ನೇತೃತ್ವದಲ್ಲಿ ಪರ್ಜನ್ಯಜಪ ಸೇರಿದಂತೆ ಹೋಮ ಹವನ ನೆರವೇರಿಸಿದರು.
ದಸರಾ ಉದ್ಘಾಟನೆ ಕಾರ್ಯಕ್ರಮದ ನಿಮಿತ್ತ ಬುಧವಾರ ರಾತ್ರಿ ಕೆಆರ್‌ಎಸ್‌ನ ಹೋಟೆಲ್‌ನಲ್ಲಿ ಪತ್ನಿ ಚನ್ನಮ್ಮ ಸಮೇತ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿಗಳು ಗುರುವಾರ ಮುಂಜಾನೆ ಹಿಂದೂ ಸಂಪ್ರದಾಯದಂತೆ ರೇಷ್ಮೆ ಪಂಚೆ ಹಾಗೂ ಶಲ್ಯ ಧರಿಸಿ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ಮೈಸೂರು ದಸರಾ ಉದ್ಘಾಟನೆಗಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿದರು.
ರಾಜ್ಯದ ಹಲವೆಡೆ ಉತ್ತಮ ಮಳೆಯಾಗದ ಕಾರಣ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾವೇರಿ, ಹೇಮಾವತಿ, ಕಪಿಲಾ, ಲಕ್ಷ್ಮೀಣ ತೀರ್ಥ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿ ಅಣೆಕಟ್ಟೆಗಳು ಸುಭಿಕ್ಷವಾಗಿ ಭರ್ತಿಯಾಗಲೆಂದು ಪರ್ಜನ್ಯ ಹೋಮ ಮಾಡಲಾಯಿತು ಎಂದು ವೇದ ಬ್ರಹ್ಮ ಡಾ ಭಾನುಪ್ರಕಾಶ್‌ಶರ್ಮಾ ತಿಳಿಸಿದರು.
ಈ ವೇಳೆ ಸಚಿವರಾದ ಕೆ.ಸಿ.ನಾರಾಯಣಗೌಡ, ಸಚಿವರಾದ ಆರ್.ಆಶೋಕ್, ಭೈರತಿ ಬಸವರಾಜು, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಇತರರಿದ್ದರು.