ಬೆಂಗಳೂರು [ಆ.23]: ನಗರದ ಕೇಂದ್ರ ಭಾಗದಲ್ಲಿ ಗುರುವಾರ ಚದುರಿದಂತೆ ಹಗುರ ಮಳೆಯಾದ ವರದಿಯಾಗಿದ್ದು, ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದೆ.

ಗುರುವಾರ ಬೆಳಗ್ಗೆ ಬಿಸಿಲಿನ ವಾತಾವರಣ ನಿರೀಕ್ಷೆ ಇತ್ತಾದರೂ ಮಧ್ಯಾಹ್ನದ ವೇಳೆಗೆ ಮತ್ತೆ ಮೋಡ ಕವಿದ ವಾತಾವರಣ ಉಂಟಾಯಿತು. ಮಧ್ಯಾಹ್ನ ಮೂರು ಗಂಟೆ ವೇಳೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಯಲಹಂಕ, ಶಿವಾನಂದ ವೃತ್ತ, ಮೆಜೆಸ್ಟಿಕ್‌ ಕೆ.ಆರ್‌. ವೃತ್ತ, ವಿಧಾನಸೌಧ, ಹಡ್ಸನ್‌ ವೃತ್ತ, ಕೆ.ಆರ್‌. ಮಾರುಕಟ್ಟೆ, ಮೈಸೂರು ಬ್ಯಾಂಕ್‌ ವೃತ್ತ ಸೇರಿದಂತೆ ಕೆಲವಡೆ ಹಗುರದ ಮಳೆ ಆಯಿತು. ನಂತರ ಸಂಜೆವರೆಗೂ ತುಂತುರು ಮಳೆ ಸುರಿಯಿತು.

ಆದರೆ, ನಗರದ ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ರಸ್ತೆ, ಅಂಡರ್‌ ಪಾಸ್‌ಗಳಲ್ಲಿ ಭಾರೀ ಪ್ರಮಾಣ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಸರಾಸರಿ 35 ಮಿ.ಮೀ. ಮಳೆ:  ಗುರುವಾರ ರಾತ್ರಿ 10ಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ ನಗರದಲ್ಲಿ ಸರಾಸರಿ 35 ಮಿ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ತಾವರಕೆರೆಯಲ್ಲಿ ಹೆಚ್ಚು 23.5 ಮಿ.ಮೀ ಮಳೆಯಾದ ವರದಿಯಾಗಿದೆ. ಕೋಣನಕುಂಟೆ 20.5, ದೊರೆಸಾನಿಪಾಳ್ಯ 16.5, ಮಾರಪ್ಪನಪಾಳ್ಯ 14.5, ಸಿದ್ಧನಹೊಸಹಳ್ಳಿ 13, ಸಿಂಗಸಂದ್ರ, ಸಂಪಗಿರಾಮನಗರ ತಲಾ 11, ನಾಯಂಡಹಳ್ಳಿ, ಗಾಳಿ ಅಂಜನೇಯ್ಯ ದೇವಸ್ಥಾನ 10.5, ನಾಗರಭಾವಿ 10 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.