ವಿಜಯನಗರ: ಬೇಸಿಗೆಯಲ್ಲಿ ಭಾರಿ ಮಳೆ, ಅನ್ನದಾತನ ಮೊಗದಲ್ಲಿ ಮಂದಹಾಸ..!
* ವಾಡಿಕೆಗಿಂತ ಹೆಚ್ಚು ಸುರಿದ ಮಳೆ
* ಅಕಾಲಿಕ ಮಳೆಗೆ ನಾಲ್ವರು ಸಾವು
* 979 ಹೆಕ್ಟೇರ್ ಬೆಳೆ ಹಾನಿ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಮೇ.28): ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರಂಭದ ಮುನ್ನವೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ. ಈ ಬಾರಿ ಬಿತ್ತನೆ ಕಾರ್ಯ ಈಗಾಗಲೇ ಶುರುವಾಗಿದ್ದು,ಉತ್ತಮ ಫಸಲು ಕೈಗೆಟುಕಲಿದೆ ಎಂಬ ಖುಷಿಯಲ್ಲಿ ರೈತರಿದ್ದಾರೆ.
ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 81.8 ಮಿಮೀ ವಾಡಿಕೆಯ ಮಳೆಯ ಪ್ರಮಾಣವಾಗಿದೆ. ಜನವರಿಯಲ್ಲಿ ಒಂದು ಮಿಮೀ ಮಳೆಯಾದರೆ, ಫೆಬ್ರವರಿಯಲ್ಲಿ 7 ಮಿಮೀ ಪ್ರಮಾಣ ಮಳೆಯಾಗಿದೆ.ಮಾಚ್‌ರ್‍ನಲ್ಲಿ 4.4 ಮಳೆಯಾಗಿದ್ದು, ಏಪ್ರಿಲ್‌ನಲ್ಲಿ 29.2 ವಾಡಿಕೆ ಮಳೆಗೆ 33.8 ಮಳೆಯಾಗಿದೆ.
ಹೊಸಪೇಟೆ: ಮಕ್ಕಳಿಗೆ ದೇವಸ್ಥಾನದ ಆವರಣವೇ ಪಾಠಶಾಲೆ..!
ಮೇ ತಿಂಗಳಲ್ಲಿ ಭಾರಿ ಮಳೆ:
ಮೇ ತಿಂಗಳಲ್ಲಿ ಮಳೆ ಹೆಚ್ಚಾಗಿದೆ. ಹಡಗಲಿ ತಾಲೂಕಿನಲ್ಲಿ 74 ಮಿಮೀ ವಾಡಿಕೆ ಮಳೆಯಾಗಬೇಕಿತ್ತು 202 ಮಿಮೀ ಮಳೆಯಾಗಿ 128 ಮಿಮೀ ಹೆಚ್ಚಾಗಿದೆ. ಹಗರಿಬೊಮ್ಮನಹಳ್ಳಿ 96 ಮಿಮೀ ವಾಡಿಕೆ ಮಳೆಗೆ 123 ಮಿಮೀ ಮಳೆಯಾಗಿದ್ದು, 27 ಮಿಮೀ ಹೆಚ್ಚಾಗಿದೆ. ಹೊಸಪೇಟೆ 58 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. 64.6 ಮಿಮೀ ಮಳೆಯಾಗಿ 6.6 ಮಿಮೀ ಹೆಚ್ಚಾಗಿದೆ. ಮಿಮೀ, ಕೂಡ್ಲಿಗಿ 63 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. 98 ಮಿಮೀ ಮಳೆಯಾಗಿ 35 ಮಿಮೀ ಹೆಚ್ಚಾಗಿದೆ. ಹರಪನಹಳ್ಳಿ 88.4 ಮಿಮೀ ವಾಡಿಕೆ ಮಳೆಯಾಗಬೇಕಿತ್ತು 166.8 ಮಿಮೀ ಮಳೆಯಾಗಿ 78.4 ಮಿಮೀ ಹೆಚ್ಚಾಗಿದೆ. ಕೊಟ್ಟೂರು 53.7 ಮಿಮೀ ವಾಡಿಕೆ ಮಳೆಯಾಗಬೇಕಿತ್ತು, 14.4 ಮಿಮೀ ಮಳೆಯಾಗಿ 39.3 ಮಿಮೀ ಹೆಚ್ಚಾಗಿದೆ. ಒಟ್ಟು 35 ಮಿಮೀ ವಾಡಿಕೆ ಮಳೆಗೆ 200 ಮಿಮೀ ಮಳೆಯಾಗಿದ್ದು, 175 ಮಿಮೀ ಮಳೆ ಹೆಚ್ಚಾಗಿದೆ.
ಬಿತ್ತನೆ ಕಾರ್ಯ:
ಈಗಾಗಲೇ ವಿಜಯನಗರ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಕೂಡ್ಲಿಗಿ. ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದೆ.
ಮಳೆಗೆ ನಾಲ್ವರು ಸಾವು:
ವಿಜಯನಗರ ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದು, ಕಳೆದ ಏಪ್ರಿಲ್‌ನಿಂದ ಈ ವರೆಗೆ ನಾಲ್ವರು ಮೃತಪ್ಟಿದ್ದಾರೆ. 9 ಎಮ್ಮೆ, ಹಸು ಮತ್ತು 37 ಕುರಿಗಳು ಮೃತಪಟ್ಟಿವೆ. 503 ಮನೆಗಳಿಗೆ ಹಾಗೂ 1 ಗುಡಿಸಲಿಗೆ ಹಾನಿಯಾಗಿದೆ. 979 ಹೆಕ್ಟೇರ್ ಬೆಳೆಹಾನಿಯಾಗಿದೆ. 309 ವಿದ್ಯುತ್ ಕಂಬಗಳು ಹಾಗೂ 35 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ. 277 ಅಂಗನವಾಡಿ ಕೇಂದ್ರಗಳು ಹಾಗೂ 322 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.
ಹೊಸಪೇಟೆಯಲ್ಲಿ ಹೆಚ್ಚಾದ ಲ್ಯಾಂಡ್ ಮಾಫಿಯಾ: ಅಧಿಕಾರಿಗಳು, ಮಾಜಿ ನಗರಸಭೆ ಸದಸ್ಯರೇ ಇಲ್ಲಿ ಆರೋಪಿಗಳು
ಕೆರೆ, ಕುಂಟೆಗಳಿಗೆ ನೀರು:
ವಿಜಯನಗರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆಯಾಗಿರುವುದರಿಂದ ತಾಲೂಕಿನ ಕಮಲಾಪುರ ಕೆರೆ, ಅಳ್ಳಿಕೆರೆ, ಡಣನಾಯಕನಕೆರೆ ಸೇರಿದಂತೆ ಹೂವಿನ ಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಭಾಗದಲ್ಲಿನ ಕೆರೆಗಳಿಗೆ ನೀರು ಬಂದಿದೆ. ಹಾಗಾಗಿ ಕೆರೆ ಹಾಗು ಅಂತರ್ಜಲ ನೆಚ್ಚಿರುವ ರೈತರ ಮೊಗದಲ್ಲೂ ಹರ್ಷ ಮೂಡಿದೆ.
ಮಳೆಯಿಂದ ನಮ್ಮ ಬದುಕು ಹಸನಾಗಿದೆ. ನಾವು ಬಿತ್ತನೆ ಕೂಡ ಮಾಡುತ್ತಿದ್ದೇವೆ. ಇದೇ ರೀತಿ ವಾರಕ್ಕೊಮ್ಮೆ ಮಳೆಯಾದರೆ ಸಾಕು ಉತ್ತಮ ಫಸಲು ಸಿಗಲಿದೆ ಅಂತ ರೈತರಾದ ನಾಗರಾಜ, ಬಸವರಾಜ ಕೊಟ್ಟೂರು ತಿಳಿಸಿದ್ದಾರೆ.
ಮಳೆಯಿಂದಾಗಿ ಕಮಲಾಪುರ ಕೆರೆ,ಅಳ್ಳಿಕೆರೆಗಳಿಗೆ ನೀರು ಬಂದಿದೆ. ಹಾಗಾಗಿ ಈ ವರ್ಷ ನಮಗೆ ಕೃಷಿಗೆ ತೊಂದರೆಯಾಗುವುದಿಲ್ಲ. ಕೆರೆ ನೀರು ಆಶ್ರಯಿಸಿರುವ ರೈತರಿಗೆ ಅನುಕೂಲವಾಗಲಿದೆ ಅಂತ ಕಮಲಾಪುರದ ರೈತರಾದ ಮುಕ್ತಿಯಾರ್ ಪಾಷಾ, ಗೋಪಾಲ್ ಹೇಳಿದ್ದಾರೆ.